ದಾವಣಗೆರೆ, ಡಿ. 30 – ರಂಗ ಅನಿಕೇತನ, ದಾವಣಗೆರೆ ಮಾನವ ಬಂಧುತ್ವ ವೇದಿಕೆ, ಎ.ವಿ.ಕೆ. ಕಾಲೇಜು ಆಶ್ರಯದಲ್ಲಿ ಮಹಿಳೆಯರಿಗಾಗಿ ತಮಟೆ ಮತ್ತು ಕಂಸಾಳೆ ತರಬೇತಿ ಶಿಬಿರವನ್ನು ಎ.ವಿ.ಕೆ. ಕಾಲೇಜಿನ ಆವರಣದಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಅವರು ತಮಟೆ ಭಾರಿಸುವ ಮೂಲಕ ನೆರವೇರಿಸಿ ಮಾತನಾಡಿದರು.
ಕರ್ನಾಟಕವು ಕಲೆ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತ ರಾಜ್ಯವಾಗಿದ್ದು, ಇಲ್ಲಿ ಸಾವಿರಾರು ಜನಪದ ಕಲೆಗಳು ಒಬ್ಬರಿಂದ ಒಬ್ಬರಿಗೆ ಮೌಖಿಕವಾಗಿ ಸಾಗುತ್ತಾ ಬಂದಿವೆ. ಇಂದಿನ ಆಧುನಿಕ ಯುಗದಲ್ಲಿ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದ ಜನಪದ ಕಲೆಯ ಭವ್ಯ ಪರಂಪರೆ ಕಡಿಮೆಯಾಗುತ್ತಿದೆ. ಇಂದು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರಗಳಲ್ಲಿ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದ್ದು, ಈ ನಿಟ್ಟಿನಲ್ಲಿ ಪ್ರೌಢಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳಿಗೆ ಜನಪದ ಕಲೆಗಳ ತರಬೇತಿ ನೀಡುವುದು ಮುಖ್ಯವಾಗಿದೆ ಎಂದರು. ಇಂದಿನ ಮಕ್ಕಳು ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್ಗಳ ಪ್ರಭಾವಕ್ಕೆ ಒಳಗಾಗಿದ್ದು, ಅವುಗಳಿಂದ ಹೊರತರಲು ಜಾನಪದ ಕಲೆಗಳ ತರಬೇತಿ ನೀಡುವುದು ಅವಶ್ಯವಾಗಿದೆ. ಇಂದಿನ ಸಂದರ್ಭದಲ್ಲಿ ತಮಟೆ ಮತ್ತು ಕಂಸಾಳೆ ಶಿಬಿರ ಏರ್ಪಡಿಸಿರುವುದು ಅತ್ಯಂತ ಶ್ಲ್ಯಾಘನೀಯ ಕಾರ್ಯವಾಗಿದ್ದು, ಇಂತಹ ತರಬೇತಿಗಳನ್ನು ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಏರ್ಪಡಿಸುವ ಮೂಲಕ ಜಾನಪದ ಕಲೆಗಳ ಭವ್ಯ ಪರಂಪರೆಯನ್ನು ಉಳಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಆರ್. ಶಿವಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲ ಬಿ.ಎಂ. ಹನುಮಂತಪ್ಪ, ಹೆಚ್.ಎಸ್. ಯೋಗೀಶ್ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ರಂಗ ಅನಿಕೇತನದ ಅಧ್ಯಕ್ಷೆ ಹೆಚ್.ಎನ್. ಸುಧಾ, ವಕೀಲರಾದ ಉಷಾ ಕೈಲಾಸದ್, ನಾಗಮಣಿ ಹಂಪಾಳಿ, ಸಂಪನ್ಮೂಲ ವ್ಯಕ್ತಿಗಳಾಗಿ ಮನೋಜ್ ಆರ್. ಕಂಬಾಳಿ ಹಾಗೂ ಪ್ರಮೋದ್ ಕುಮಾರ್ ಭಾಗವಹಿಸಿದ್ದರು.
ಸ್ವಾಗತವನ್ನು ಸಹಾಯಕ ಪ್ರಾಧ್ಯಾಪಕರಾದ ಆರ್.ಜಿ. ಸವಿತಾ, ವಂದನಾರ್ಪಣೆಯನ್ನು ಡಾ. ಹೆಚ್.ಎನ್. ಲೋಹಿತ್, ನಿರೂಪಣೆಯನ್ನು ಕು. ಎಂ.ಪಿ. ರೇಖಾ ಹಾಗೂ ಪಲ್ಲವಿ ನೆರವೇರಿಸಿದರು.