ಗಿಡ-ಮರ ಬೆಳೆಸದಿದ್ದರೆ ಮನುಷ್ಯ ಕುಲಕ್ಕೆ ಆಪತ್ತು ಕೃಷಿ ಉತ್ಸವದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಎಚ್ಚರಿಕೆ

ಗಿಡ-ಮರ ಬೆಳೆಸದಿದ್ದರೆ ಮನುಷ್ಯ ಕುಲಕ್ಕೆ ಆಪತ್ತು ಕೃಷಿ ಉತ್ಸವದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಎಚ್ಚರಿಕೆ

ದಾವಣಗೆರೆ, ಡಿ. 25 – ಗಿಡ ಮರ ಬೆಳೆಸದಿದ್ದರೆ ಮನುಷ್ಯ ಕುಲಕ್ಕೆ ಆಪತ್ತು ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಚಾರ್ಯ ಡಾ. ಸ್ವಾಮೀಜಿ ಎಚ್ಚರಿಸಿದ್ದಾರೆ.

ತಾಲ್ಲೂಕಿನ ಕಬ್ಬೂರು ಗ್ರಾಮದಲ್ಲಿ ಲಿಂ. ಕೆ.ವಿ. ಗಂಗಾಧರಪ್ಪ ಅವರ ಸ್ಮರಣೆಗಾಗಿ ಬುಧವಾರ ಆಯೋಜಿಸಿದ್ದ ಕೃಷಿ ಉತ್ಸವ ಹಾಗೂ ಕಾಯಕ ಜೀವಿ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮರ-ಗಿಡಗಳು ಅಶುದ್ಧ ಗಾಳಿ ಹೀರಿಕೊಂಡು ಶುದ್ಧ ಗಾಳಿ ನೀಡುತ್ತವೆ. ಶುದ್ಧ ಗಾಳಿ ಹೀರಿಕೊಂಡು ಅಶುದ್ಧ ಗಾಳಿ ಬಿಡುವ ಮನುಷ್ಯರು ಮರಗಿಡ ಬೆಳೆಸಲು ಆಸಕ್ತಿ ತೋರಿಸುತ್ತಿಲ್ಲ. ಇಂಥ ಮನೋಭಾವ ಮುಂದುವರೆದರೆ ಕೆಲವೇ ವರ್ಷಗಳಲ್ಲಿ ಮನುಷ್ಯ ಆಮ್ಲಜನಕ ಸಿಲಿಂಡರ್ ಬೆನ್ನ ಮೇಲೆ ಹೊತ್ತು ಬದುಕಬೇಕಾದ ದುಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ಕಾರ್ಯಕ್ರಮದಲ್ಲಿ `ಹಸಿರೆಲೆಯ ಉಸಿರು ಗಂಗಣ್ಣ’ ಕೃತಿ ಬಿಡುಗಡೆ ಮಾಡಿದ ಸ್ವಾಮೀಜಿ, ನೂರಾರು ಸಾಲು ಮರ ಬೆಳೆಸಿದ್ದ ಲಿಂ. ಕೆ.ವಿ. ಗಂಗಾಧರಪ್ಪ ಅವರು ಇಂದು ಮಾದರಿಯಾಗಿದ್ದಾರೆ. ಮುಂದೊಂದು ದಿನ ಆಮ್ಲಜನಕ ಕೊರತೆಯಿಂದ ಮನುಷ್ಯ ಮತ್ತು ಜೀವಿಗಳಿಗೆ ತೊಂದರೆ ಆಗಬಾರದೆಂಬ ದೂರ ದೃಷ್ಠಿ ಗಂಗಣ್ಣ ಅವರಲ್ಲಿ ಕಾಣುತ್ತದೆ ಎಂದು ಪ್ರಶಂಸಿಸಿದರು.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಕೃಷಿಯ ಜೊತೆ ಪರಿಸರ ಪ್ರೀತಿ ಬೆಳೆಸಿಕೊಳ್ಳುವುದು ಅಪರೂಪದ ಸಂಗತಿ. ಕೃಷಿಯೇ ಇವತ್ತು ಹಲವರಿಗೆ ಕಷ್ಟಕರವಾಗಿದೆ. ಇಂಥದ್ದರಲ್ಲಿ ಗಂಗಣ್ಣ ಅವರು ಸಸಿ ನೆಟ್ಟು ನೀರು ಹಾಕಿ ಜೋಪಾನ ಮಾಡಿರುವುದು ಶ್ಲ್ಯಾಘನೀಯ. ಗಂಗಣ್ಣ ಅವರ ಪರಿಶ್ರಮದಿಂದ ನೂರಾರು ಮರಗಳು ಇಲ್ಲಿ ಬೆಳೆದು ಪರಿಸರ ಪಾಠ ಮಾಡುತ್ತಿವೆ ಎಂದು ಹೇಳಿದರು.

ರಾಷ್ಟ್ರೀಯ ತೋಟಗಾರಿಕೆ ಪ್ರಶಸ್ತಿ ಪುರಸ್ಕೃತ ಹೆದ್ನೆ ಗ್ರಾಮದ ಎಚ್.ಬಿ. ಮುರುಗೇಂದ್ರಪ್ಪ ಮಾತನಾಡಿ, ಅಪರೂಪದ ಬೆಳೆಗಳನ್ನು ತೋಟಗಾರಿಕೆಯಲ್ಲಿ ಅಂತರ್ ಬೆಳೆಯಾಗಿ ಬೆಳೆದರೆ ಉತ್ತಮ ಲಾಭ ಕಾಣಬಹುದು. ರೈತರು ಬುದ್ಧಿವಂತರಾಗಿ ತೋಟಗಾರಿಕೆ ಮಾಡಿದರೆ ಯಾವುದೇ ಸಾಲ ಇಲ್ಲದೆ ಉತ್ತಮ ಜೀವನ ನಡೆಸಬಹುದು ಎಂದರು.

ದಾವಣಗೆರೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಶ್ರೀಧರ ಮೂರ್ತಿ ಡಿ.ಎಂ. ಮಾತನಾಡಿ, ಕ್ರಿಮಿನಾಶಕ ಹಾಗೂ ರಾಸಾಯನಿಕ ಗೊಬ್ಬರ ಬಳಕೆಯಿಂದ ಮನುಷ್ಯ ಅನೇಕ ರೋಗಗಳಿಂದ ನರಳುತ್ತಿದ್ದಾನೆ. ಮಂಡಿ ಮತ್ತು ಬೆನ್ನು ನೋವು ಈಗ ಸಾಮಾನ್ಯವಾಗಿದೆ. ಬಿ.ಪಿ. ಶುಗರ್ ಕಾಯಿಲೆ ಇಲ್ಲದ ಕುಟುಂಬಗಳೇ ಇಲ್ಲ ಎನ್ನುವಂತಾಗಿದೆ. ಇದಕ್ಕೆಲ್ಲಾ ಕಾರಣ ಸಂಪ್ರದಾಯಿಕ ಸಿರಿಧಾನ್ಯ ಬಿಟ್ಟು ಹೈಬ್ರಿಡ್ ಧಾನ್ಯಗಳ ಮೊರೆ ಹೋಗಿರುವುದು ಕಾರಣ. ಇನ್ನು ಮುಂದೆ ನೈಜ ಕೃಷಿಗೆ ಹೆಚ್ಚು ಬೆಲೆ ಬರಲಿದೆ ಎಂದರು.

ಆನಗೋಡು ರೈತ ಹುತಾತ್ಮ ಸಮಿತಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ ಮಾತನಾಡಿ, ರೈತ ಕೂಡ ಪರಿಸರ ಪ್ರಜ್ಞೆ ರೂಢಿಸಿಕೊಂಡು ಸಾಲು ಮರ ಬೆಳೆಸಿರುವುದು ಅಪರೂಪದ ಸಂಗತಿ. ಇಂಥ ಪ್ರವೃತ್ತಿಗಳನ್ನು ಯುವಜನರು ಬೆಳೆಸಿಕೊಳ್ಳಬೇಕು. ಕೃಷಿಯಲ್ಲಿ ಕೂಲಿ ಆಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆಧುನಿಕ ತಂತ್ರಜ್ಞಾನ ಇದಕ್ಕೆ ನೆರವಾಗಬೇಕಿದೆ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಎ.ಕೆ. ಮಲ್ಲೇಶಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಪಿ. ಪಾಲಾಕ್ಷಿ, ಮಾಜಿ ಸೈನಿಕರಾದ ಪ್ರಭು ಎಚ್.ಬಿ., ಎಂ. ಸಿದ್ದಪ್ಪ, ಡಿ.ಎಚ್. ಮಹಾದೇವಪ್ಪ, ಬಿ.ಬಿ. ರಾಜಪ್ಪ, ಆಶಾ ಕಾರ್ಯಕರ್ತೆಯರಾದ ಎಂ.ಕೆ.ತಿಪ್ಪಮ್ಮ, ಆರ್.ಎನ್. ಶಶಿಕಲಾ ಅವರನ್ನು ಸನ್ಮಾನಿಸಲಾಯಿತು.

ರೈತ ಸಂಘದ ಮುಖಂಡರಾದ ಹೊನ್ನೂರು ಮುನಿಯಪ್ಪ, ಆವರಗೆರೆ ರುದ್ರಮುನಿ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ್ ಕಬ್ಬೂರು ಪ್ರಸ್ತಾವಿಕವಾಗಿ ಮಾತನಾಡಿದರು. ಡಾ. ಆಶಾ ನಾಗರಾಜ್ ಕಬ್ಬೂರು ನಿರೂಪಿಸಿ, ಭೂಮೇಶ್ ಕಬ್ಬೂರು ವಂದಿಸಿದರು

42 ಯುವಕರ ರಕ್ತದಾನ : ಲಿಂ. ಕೆ.ವಿ. ಗಂಗಾಧರಪ್ಪ ಸ್ಮರಣೆ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಕಬ್ಬೂರು ಹಾಗೂ ಸುತ್ತಮುತ್ತಲ ಗ್ರಾಮದ 42 ಯುವಕರು ರಕ್ತದಾನ ಮಾಡಿದರು.

ದಾವಣಗೆರೆ ಸಿ.ಜಿ. ಆಸ್ಪತ್ರೆ ರಕ್ತ ಭಂಡಾರ ವಿಭಾಗದ ಸಿಬ್ಬಂದಿ ರಕ್ತ ಸಂಗ್ರಹ ಮಾಡಿದರು. ಕೊಡಗನೂರು ಪ್ರಾಥ೦ಮಿಕ ಆರೋಗ್ಯ ಕೇಂದ್ರದ ಡಾ. ಮಂಜುನಾಥ್ ಹಾಗೂ ಎಸ್.ಎಸ್. ಕೇರ್ ಟ್ರಸ್ಟ್ ವೈದ್ಯರು ಸಹ ಆರೋಗ್ಯ ತಪಾಸಣೆ ಮಾಡಿದರು.

error: Content is protected !!