ರೈತರ ಅನುಕೂಲಕ್ಕೆ ನೂತನ ಪಿಎಲ್‌ಡಿ ಬ್ಯಾಂಕ್ ಕಟ್ಟಡ

ರೈತರ ಅನುಕೂಲಕ್ಕೆ ನೂತನ ಪಿಎಲ್‌ಡಿ ಬ್ಯಾಂಕ್ ಕಟ್ಟಡ

ದಾವಣಗೆರೆ, ಡಿ. 26 – ರೈತರ ಅನುಕೂಲ ಕ್ಕಾಗಿ ದಾವಣಗೆರೆ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೂತನ ಕಟ್ಟಡದ ಅಗತ್ಯವಿದೆ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರು ಪ್ರತಿಪಾದಿಸಿದರು.

ಅವರು ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕ್ಯೂಟ್ ಹೌಸ್ ಪಕ್ಕದಲ್ಲಿ ದಾವಣಗೆರೆ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. 

ಲಾಯರ್ ರಸ್ತೆಯಲ್ಲಿರುವ ಪಿಎಲ್‌ಡಿ ಬ್ಯಾಂಕ್ ಮುಂದೆ ವಾಹನಗಳನ್ನು ನಿಲ್ಲಿಸಲು ತೊಂದರೆಯಾಗುತ್ತಿದ್ದು, ರೈತರ ಹಿತದೃಷ್ಠಿಯಿಂದ ಬ್ಯಾಂಕ್ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ವರ್ಷದಿಂದ ವರ್ಷಕ್ಕೆ ಬ್ಯಾಂಕ್ ಪ್ರಗತಿಯಿಂದ ಮುನ್ನಡೆಯುತ್ತಿದೆ ಎಂದು ಮೆಚ್ಚುಗೆ ಸೂಚಿಸಿದ ಅವರು, ಬ್ಯಾಂಕ್ ನೂತನ ಕಟ್ಟಡದ ನಿರ್ಮಾಣಕ್ಕೆ ಪಕ್ಷಬೇಧ ಮರೆತು ಎಲ್ಲಾ ಜನಪ್ರತಿನಿಧಿಗಳು ಸಹಾಯ – ಸಹಕಾರ ನೀಡಬೇಕೆಂದು ಆಶಿಸಿದರು. 

ಬ್ಯಾಂಕಿನ ಆಡಳಿತ ಮಂಡಳಿಯವರು ಕಟ್ಟಡ ನಿರ್ಮಾಣವನ್ನು ತ್ವರಿತಗತಿಯಲ್ಲಿ ಕೈಗೊಂಡು, ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಕಿವಿಮಾತು ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಶೆಟ್ಟಿ, ಮಹಾನಗರಪಾಲಿಕೆ ಮಹಾಪೌರರಾದ ಕೆ. ಚಮನ್ ಸಾಬ್ , ಉಪ ಮಹಾಪೌರರಾದ ಸೋಗಿ ಶಾಂತಕುಮಾರ್  ಮತ್ತಿತರರು ಬ್ಯಾಂಕ್ ನೂತನ ಕಟ್ಟಡ ಶೀಘ್ರವಾಗಿ ಪೂರ್ಣಗೊಂಡು, ರೈತರಿಗೆ ಇನ್ನೂ ಹೆಚ್ಚಿನ ಸೇವೆಯನ್ನು ಒದಗಿಸಲೆಂದು ಶುಭ ಹಾರೈಸಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಆರ್.ಜಿ. ಕುಬೇಂದ್ರಪ್ಪ ಅವರು ವಹಿಸಿದ್ದರು.

 ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು, ರೈತರು ಭಾಗವಹಿಸಿದ್ದರು.

error: Content is protected !!