ದಾವಣಗೆರೆ, ಡಿ.12- ವಿಶೇಷಚೇತನರ ದಿನಾಚರಣೆಯಂದು ರಾಷ್ಟ್ರಪತಿಗಳು ಉದ್ಯೋಗದಾತರು ಮತ್ತು ಉದ್ಯೋಗಿಗಳಾಗಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಾಧನೆಗೈದಿರುವ ವಿಶೇಷಚೇತನ ವ್ಯಕ್ತಿಗಳಿಗೆ (ದಿವ್ಯಾಂಗಜನ್) ನೀಡುವ 2024 ನೇ ಸಾಲಿನ ಶ್ರೇಷ್ಠ ದಿವ್ಯಾಂಗಜನ್ ಪ್ರಶಸ್ತಿಗೆ ಭಾಜನರಾಗಿರುವ ಸ್ಥಳೀಯ ಜ.ಜ.ಮು ವೈದ್ಯಕೀಯ ಮಹಾವಿದ್ಯಾಲಯದ ರೋಗಶಾಸ್ತ್ರ ಪ್ರಾಧ್ಯಾಪಕ ಡಾ. ಸುರೇಶ್ ಹನಗವಾಡಿ ಅವರನ್ನು ಜ.ಜ.ಮು. ಮಹಾವಿದ್ಯಾಲಯದಲ್ಲಿ ಇಂದು ಸನ್ಮಾನಿಸಿ, ಗೌರವಿಸಲಾಯಿತು.
ಡಾ. ಸುರೇಶ್ ಹನಗವಾಡಿ ಅವರು ಜ.ಜ.ಮು. ವೈದ್ಯಕೀಯ ಮಹಾವಿದ್ಯಾಲಯ ದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಇದೇ ಕಾಲೇಜಿನಲ್ಲಿ ಕಳೆದ 30 ವರ್ಷಗಳಿಂದ ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಜ.ಜ.ಮು. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶುಕ್ಲಾ ಶೆಟ್ಟಿ ಅವರು ಡಾ. ಸುರೇಶ್ ಹನಗವಾಡಿ ಅವರನ್ನು ಸನ್ಮಾನಿಸಿ, ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯರು ನಮ್ಮ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯ, ಇವರಿಂದ ನಮ್ಮ ಕಾಲೇಜಿನ ಹೆಸರು ರಾಷ್ಟ್ರಪತಿ ಭವನದಲ್ಲಿ ಮೊಳಗಿರುವುದು ನಮ್ಮ ಕಾಲೇಜಿಗೆ ಪ್ರತಿಷ್ಠೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸನ್ಮಾನಿತ ಡಾ. ಸುರೇಶ್ ಹನಗವಾಡಿ ಮಾತನಾಡಿ, ಈ ಪಯಣದಲ್ಲಿ ಬೆಂಬಲ ನೀಡಿ ಉತ್ತೇಜಿಸಿದ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳು ಹಾಗೂ ಹಿರಿಯ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಬಾಪೂಜಿ ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಿಗಳು ಹಾಗೂ ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರುಗಳಿಗೆ ಕೃತಜ್ಞತೆ ಸಲ್ಲಿಸಿ, ಹಿಮೋಫಿಲಿಯಾ ರೋಗದ ವಿರುದ್ಧದ ತಮ್ಮ ಹೋರಾಟದ ಹಾದಿಯನ್ನು ಭಾವುಕತೆಯಿಂದ ಹಂಚಿಕೊಂಡರು.
ಜ.ಜ.ಮು. ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ವೈದ್ಯರು ನೀಡಿದ ಸಹಕಾರವನ್ನು ಹಾಗೂ ಹಿಮೋಫಿಲಿಯಾ ಚಿಕಿತ್ಸಾ ಕೇಂದ್ರದ ಸ್ಥಾಪನೆಯಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಕಿರುವಾಡಿ ಗಿರಿಜಮ್ಮ ಅವರ ಕೊಡುಗೆಯನ್ನು ಡಾ. ಸುರೇಶ್ ಹನಗವಾಡಿ ಸ್ಮರಿಸಿದರು.