ಮೊಬೈಲ್ ಬಿಟ್ಟು ಓದುವ ಹವ್ಯಾಸ ರೂಢಿಸಿಕೊಳ್ಳಿ

ಮೊಬೈಲ್ ಬಿಟ್ಟು ಓದುವ ಹವ್ಯಾಸ ರೂಢಿಸಿಕೊಳ್ಳಿ

`ಪುಸ್ತಕ ಪಂಚಮಿ’ ಕಾರ್ಯಕ್ರಮದಲ್ಲಿ ಎನ್.ಎ. ಮುರುಗೇಶ್

ದಾವಣಗೆರೆ, ಡಿ. 12- ಮಕ್ಕಳು ಮೊಬೈಲ್ ಕಡೆ ಗಮನಹರಿಸುವುದನ್ನು ಬಿಟ್ಟು ಓದುವ ಹವ್ಯಾಸ ರೂಢಿಸಿಕೊಳ್ಳುವಂತೆ ದಾವಣಗೆರೆ-ಹರಿಹರ ಅರ್ಬನ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ಕರೆ ನೀಡಿದರು.

ನಗರದ ಈಶ್ವರಮ್ಮ ಶಾಲೆಯ ಸಭಾಂಗಣದಲ್ಲಿ ಡಾ.ಹೆಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಮತ್ತು ಈಶ್ವರಮ್ಮ ಶಾಲಾ ಆಡಳಿತ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ವಾಚನ ಸಹಾಯ ಯೋಜನೆಯ 23 ಶಾಲೆಗಳ ಫಲಾನುಭವಿ ಗಳಿಗೆ ಪುಸ್ತಕ ವಿತರಣೆಯ  `ಪುಸ್ತಕ ಪಂಚಮಿ’ ಕಾರ್ಯಕ್ರಮದಲ್ಲಿ ಮಾತನಾಡಿದರು. 

ತಲೆ ತಗ್ಗಿಸಿ ನೋಡು ನಿಮ್ಮನ್ನು ತಲೆ ಎತ್ತದಂತೆ ಮಾಡುತ್ತೇನೆ ಎನ್ನುತ್ತದೆ ಮೊಬೈಲ್. ತಲೆ ತಗ್ಗಿಸಿ ಓದು  ನಿಮ್ಮನ್ನು ತಲೆ ಎತ್ತುವಂತೆ ಮಾಡುತ್ತೇನೆ ಎನ್ನುತ್ತದೆ ಪುಸ್ತಕ. ಆದ್ದರಿಂದ ಅವಶ್ಯಕತೆಗೆ ತಕ್ಕಂತೆ ಮೊಬೈಲ್ ಬಳಕೆ ಇರಲಿ ಎಂದು ಹೇಳಿದರು.

ದೇಶ ಸುತ್ತುವುದರಿಂದ, ಕೋಶ ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ. ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಿ ಓದುವ ಕಡೆ ಹೆಚ್ಚು ಗಮನಹರಿಸಬೇಕೆಂದು ಸಲಹೆ ನೀಡಿದರು.

ಯಾವುದೇ ಜಾತಿ, ಧರ್ಮ ಭೇದಗಳಿಲ್ಲದೇ ಎಲ್ಲಾ ಮಕ್ಕಳಿಗೂ ಉಚಿತವಾಗಿ ಪುಸ್ತಕಗಳನ್ನು ವಿತರಣೆ ಮಾಡುವ ಡಾ.ಹೆಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು.

ಬೇರೆ ದೇಶಗಳಲ್ಲಿ ಲಿಪಿಯೇ ಇಲ್ಲದ ಸಂ ದರ್ಭದಲ್ಲಿ ಭಾರತದಲ್ಲಿ ಗುರುಕುಲಗಳಿದ್ದವು. ಆಗ ಸಾಹಿತ್ಯ ಕೂಡ ಉತ್ತುಂಗ ಸ್ಥಿತಿಯಲ್ಲಿತ್ತು. ಕೈಗಾರಿಕಾ ನಗರ, ವಾಣಿಜ್ಯನಗರವಾಗಿದ್ದ ದಾವಣಗೆರೆ ಇದೀಗ ಶೈಕ್ಷಣಿಕ ನಗರವಾಗಿದೆ. ಅನೇಕ ದಾನಿಗಳು ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವುದೇ ಕಾರಣವಾಗಿದೆ ಎಂದು ಹೇಳಿದರು.

ಮಕ್ಕಳ ತಜ್ಞ ಡಾ. ಸಿ.ಆರ್.ಬಾಣಪುರಮಠ ಮಾತನಾಡಿ, ಡಾ. ಹೆಚ್.ಎಫ್. ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ ರಾಜ್ಯದ ಎಂಟು ಜಿಲ್ಲೆಗಳಲ್ಲಿ `ಪುಸ್ತಕ ಪಂಚಮಿ’ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಬೇರೆ ಜಿಲ್ಲೆಗಳಿಗಿಂತ ದಾವಣಗೆರೆಯಲ್ಲಿ ದೊಡ್ಡ ಪ್ರಮಾಣದಲ್ಲಿ  ಈ ಕಾರ್ಯಕ್ರಮ ನಡೆಯುತ್ತಿದೆ. ದಾನಿಗಳು ಪುಸ್ತಕಗಳನ್ನು ಹೆಚ್ಚು ಹೆಚ್ಚು ಕೊಡಲು ಮುಂದಾಗುತ್ತಿದ್ದಾರೆಂದ ತಿಳಿಸಿದರು.

ಈಶ್ವರಮ್ಮ ಪ್ರೌಢಶಾಲೆಯ ಪ್ರಾಂಶುಪಾಲ ಪ್ರೊ.ಕೆ.ಎಸ್.ಪ್ರಭುಕುಮಾರ್ ಮಾತನಾಡಿ, ಪ್ರಪಂಚದಲ್ಲಿ ಸಾಧನೆ ಮಾಡಿದವರೆಲ್ಲರೂ ಮೊಬೈಲ್ ನೋಡಿದವರಲ್ಲ. ಬದಲಾಗಿ ಪುಸ್ತಕಗಳನ್ನು ಓದಿ ಸಾಧನೆ ಮಾಡಿದವರಾಗಿದ್ದಾರೆ ಎಂದರು.

ಮಕ್ಕಳು ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕೆಂದು ಕರೆ ನೀಡಿದರು.

ಈಶ್ವರಮ್ಮ ಶಾಲಾಡಳಿ ಮಂಡಳಿ ಅಧ್ಯಕ್ಷೆ ಸುಜಾತ ಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆ ಗುರು ಇರಬೇಕು.ಮುಂದೆ ಗುರಿ ಇರಬೇಕು. ಆಗ ಮಕ್ಕಳು ಮುಂದೆ ಬರಲು ಸಾಧ್ಯ. ಶಿಕ್ಷಕರು ಮೊದಲು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಲು ಸಾಧ್ಯ ಎಂದು ಹೇಳಿದರು.

ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ಹೆಚ್ಚು ಹೆಚ್ಚು ಅಧ್ಯಯನಶೀಲರಾಗಬೇಕೆಂದು ಸಲಹೆ ನೀಡಿದರು.

ನಿವೃತ್ತ ಶಿಕ್ಷಣಾಧಿಕಾರಿ ಪ್ರಕಾಶ್ ಬೂಸ್ನೂರು, ವಿ.ಸಿ. ಪುರಾಣಿಕಮಠ್, ಈಶ್ವರಮ್ಮ ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಎ.ಆರ್. ಉಷಾ ರಂಗನಾಥ್, ಉಪ ಪ್ರಾಂಶುಪಾಲರಾದ ಜಿ.ಎಸ್. ಶಶಿರೇಖಾ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!