ಸೂರ್ಯ ಘರ್ ಬಿಜಲಿ ಯೋಜನೆ ಸದುಪಯೋಗಕ್ಕೆ ಡಿಸಿ ಜಾಗೃತಿ

ಸೂರ್ಯ ಘರ್ ಬಿಜಲಿ ಯೋಜನೆ  ಸದುಪಯೋಗಕ್ಕೆ ಡಿಸಿ ಜಾಗೃತಿ

ದಾವಣಗೆರೆ, ಡಿ.10- ಸೋಲಾರ್ ರೂಫ್ ಟಾಪ್ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಲು ಸರ್ಕಾರ `ಪಿಎಂ ಸೂರ್ಯಘರ್ ಮುಪ್ತ್ ಬಿಜಲಿ’ ಯೋಜನೆ ರೂಪಿಸಿದೆ. ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡು ಮನೆಯಲ್ಲಿ ಉಚಿತ ವಿದ್ಯುತ್ ಪಡೆದು ಖರ್ಚು ಕಡಿಮೆ ಮಾಡಿಕೊಳ್ಳಬಹುದೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಪಿಎಂ ಸೂರ್ಯಘರ್ ಮುಪ್ತ್ ಬಿಜಲಿ ಯೋಜನೆಯ ಕುರಿತಂತೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಈ ಯೋಜನೆ ಅಡಿಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು, ಮಾನದಂಡ ವೆಚ್ಚದ ಶೇ.60 ರಷ್ಟು ಸಹಾಯಧನ ರೂಪದಲ್ಲಿ ಒದಗಿಸಲಾಗುತ್ತದೆ. 1 ಕಿಲೋವ್ಯಾಟ್‍ಗೆ ರೂ.30 ಸಾವಿರ, 2 ಕಿಲೋವ್ಯಾಟ್‍ಗೆ ರೂ.60 ಸಾವಿರ ಮತ್ತು 3 ಕಿಲೋವ್ಯಾಟ್‍ಗೆ ರೂ.78 ಸಾವಿರ ಸಹಾಯಧನ ನೀಡಲಾಗುವುದು. ತಮಗೆ ಸಾಕಾಗುವಷ್ಟು ವಿದ್ಯುತ್ ಬಳಸಿದ ಮೇಲೆ ವಿದ್ಯುತ್ತನ್ನು ಬೆಸ್ಕಾಂಗೆ ಮಾರಾಟ ಮಾಡಲು ಅವಕಾಶ ಇದೆ.

ಈ ಯೋಜನೆಯ ಲಾಭ ಪಡೆಯಲು ಯಾವುದೇ ಆರ್ಥಿಕ ಮಿತಿ ಇರುವುದಿಲ್ಲ. ಎಲ್ಲಾ ವರ್ಗದ ಗ್ರಾಹಕರು ನೊಂದಣಿ ಮಾಡಿಕೊಳ್ಳಬಹುದಾಗಿದೆ. ತಮ್ಮ ಮನೆ ಆರ್‍ಸಿಸಿ ಹೊಂದಿ ಕನಿಷ್ಠ 10/10 ಸ್ಥಳಾವಕಾಶ ಇದ್ದಲ್ಲಿ ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಫೋಟೋದೊಂದಿಗೆ pmsuryaghar.gov.in     ಪೋರ್ಟಲ್  ಮೂಲಕ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳಬಹುದು, ರೂ.1500 ನೋಂದಣಿ ಶುಲ್ಕವಿರುತ್ತದೆ ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಓ ಸುರೇಶ್ ಬಿ.ಇಟ್ನಾಳ್, ಬೆಸ್ಕಾಂ ಇಇ ತಿಪ್ಪೇಸ್ವಾಮಿ ಎ.ಕೆ ಹಾಗೂ ವಿವಿಧ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!