ಸಹಕಾರ ಸಪ್ತಾಹದ ಉದ್ಘಾಟನೆಯಲ್ಲಿ ಸಹಕಾರ ಧುರೀಣ ಜೆ.ಆರ್. ಷಣ್ಮುಖಪ್ಪ
ದಾವಣಗೆರೆ, ನ.14 – ಕೇಂದ್ರ ಸರ್ಕಾರ ನಿಬಂಧನೆಗಳನ್ನು ಸರಳೀಕರಿಸಿದರೆ ಪ್ರತಿ ಗ್ರಾಮ ಅಥವಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಹಕಾರ ಸಂಘ ಸ್ಥಾಪಿಸುವ ಸರ್ಕಾರದ ಉದ್ದೇಶ ಈಡೇರಲಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ (ಬೆಂಗಳೂರು), ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ವಿವಿಧ ಸಹಕಾರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಗರದ ಹಿರೇಮಠದಲ್ಲಿ ಇಂದು ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ಗ್ರಾಮ ಅಥವಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರ ಚಿಂತಿಸಿದೆ. ಆದರೆ ಅದಕ್ಕೆ ವಿಧಿಸಿರುವ ಕೆಲ ನಿಬಂಧನೆಗಳು ಕಠಿಣವಾಗಿವೆ ಎಂದವರು ಹೇಳಿದರು.
ಸಹಕಾರ ಸಂಘಗಳು ಪಡಿತರ ಧಾನ್ಯ ವಿತರಣೆ, ಸಾರಿಗೆ, ಆಸ್ಪತ್ರೆ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಭವಿಷ್ಯದಲ್ಲಿ ಸಹಕಾರಿ ಕ್ಷೇತ್ರ ದೇಶದ ಪ್ರಮುಖ ಆರ್ಥಿಕ ವಲಯವಾಗಿ ರೂಪುಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಮಾತನಾಡಿ, ಎಲ್ಲ ಸಹಕಾರ ಸಂಘಗಳು ಗಣಕೀಕರಣ ವ್ಯವಸ್ಥೆಗೆ ಒಳಪಡಲಿವೆ. ಮುಂದಿನ ಮೂರು ತಿಂಗಳಲ್ಲಿ ಎಲ್ಲ ಸಹಕಾರಿ ಸಂಸ್ಥೆಗಳು ಒಂದೇ ತಂತ್ರಾಂಶದ ಮೂಲಕ ವ್ಯವಹರಿಸಬೇಕಾಗುತ್ತದೆ. ಈ ಮೂಲಕ ಸಹಕಾರ ಸಂಸ್ಥೆಗಳಿಗೆ ಮಹತ್ವ ಬರಲಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ 1,508 ವಿವಿಧ ಸಹಕಾರ ಸಂಘಗಳಿವೆ. ಈ ಪೈಕಿ 1,256 ಸಕ್ರಿಯವಾಗಿವೆ. ಇವುಗಳಲ್ಲಿ 96 ನಷ್ಟದಲ್ಲಿದ್ದು, 560 ಲಾಭದಲ್ಲಿವೆ ಎಂದು ಹೇಳಿದರು.
ಸಹಕಾರಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದಲು ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಸಂಘಗಳು ಮತ್ತಷ್ಟು ಜನಪರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.
ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕ ಕೆ. ಮಹೇಶ್ವರಪ್ಪ ಅವರು ವಿಷಯ ತಜ್ಞರಾಗಿ ಮಾತನಾಡಿದರು.
ಸಮಾರಂಭದ ವೇದಿಕೆ ಮೇಲೆ ಸಹಕಾರಿ ಧುರೀಣರಾದ ಜಿ.ಎನ್. ಸ್ವಾಮಿ, ಚೇತನ್ ಎಸ್. ನಾಡಿಗರ, ಡಿ. ಕುಮಾರ್, ಟಿ. ರಾಜಣ್ಣ, ಆರ್.ಜಿ. ಶ್ರೀನಿವಾಸಮೂರ್ತಿ, ಎಂ. ಗೋಪಾಲರಾವ್, ಜಗದೀಶಪ್ಪ ಬಣಕಾರ್, ಹೆಚ್.ಕೆ. ಬಸಪ್ಪ, ಬಿ.ಜಿ. ಬಸವರಾಜಪ್ಪ, ಎನ್.ಕುಮಾರ್, ಬಿ. ಶೇಖರಪ್ಪ, ಎಸ್.ಬಿ. ಶಿವಕುಮಾರ್, ಐಗೂರು ಚಂದ್ರಶೇಖರ್, ವೆಂಕಟೇಶ್ ನಾಯಕ್, ಗಂಗಾಧರಪ್ಪ, ಸುರೇಶ್ ಕುಮಾರ್, ಡಿ. ಶಿವಗಂಗಮ್ಮ, ಅನ್ನಪೂರ್ಣ, ಎನ್.ಎಂ. ಹಾಲಸ್ವಾಮಿ, ಪ್ರಶಾಂತ್ ವಿ. ವೆರ್ಣೇಕರ್, ಕೆ.ಜಿ. ಸುರೇಶ್, ಎನ್. ರಂಗಸ್ವಾಮಿ, ಎಸ್. ಮಂಜುಳ, ರಶ್ಮಿ ರೇಖಾ, ಸತೀಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.