ನಿರಭಿಮಾನಿಗಳಾದರೆ ಕಾವೇರಿಯೂ ಕೈ ತಪ್ಪಿಯಾಳು

ನಿರಭಿಮಾನಿಗಳಾದರೆ ಕಾವೇರಿಯೂ ಕೈ ತಪ್ಪಿಯಾಳು

ತರಳಬಾಳು ನುಡಿ ಹಬ್ಬದ ಸಮಾರೋಪ ಸಮಾರಂಭದಲ್ಲಿ ಡಾ.ಎಚ್.ಎಸ್ ಹರಿಶಂಕರ್ ಎಚ್ಚರಿಕೆ

ಸಿರಿಗೆರೆ, ನ.11- ಕನ್ನಡಿಗರಾದ ನಾವು ನಾಡು ಮತ್ತು ನುಡಿಯ ಬಗ್ಗೆ ನಿರಭಿಮಾನಿಗಳಾದರೆ ಮುಂದೆ ಕಾವೇರಿಯನ್ನೂ ಸಹ ಕಳೆದುಕೊಳ್ಳ ಬೇಕಾಗಬಹುದು ಎಂದು ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಎಚ್.ಎಸ್ ಹರಿಶಂಕರ್ ಎಚ್ಚರಿಸಿದರು.

 ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಜರುಗಿದ `ತರಳಬಾಳು ನುಡಿ ಹಬ್ಬ- 2024’ರ ಸಮಾರೋಪ ಸಮಾರಂಭದಲ್ಲಿ ಅವರು  ಸಮಾರೋಪ  ಭಾಷಣ ಮಾಡಿದರು.  

ಕನ್ನಡದ ಉಳಿವಿಗೆ ಎಲ್ಲರ ಸಹಕಾರ ಅಗತ್ಯ. ಭಾಷೆಯ ಬಗೆಗಿನ ಆಚರಣೆ ನವೆಂಬರ್ ತಿಂಗಳಿಗೆ ಮಾತ್ರವೇ ಸೀಮಿತವಾಗಬಾರದು.  ಕನ್ನಡ ಭಾಷೆಗೆ ಹಲವು ಸಂಕಷ್ಟಗಳಿವೆ. ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ರಾಜಕಾರಣಿಗಳು, ಭಾಷಾಭಿಮಾನಿಗಳು, ಧರ್ಮ ಗುರುಗಳು ಸೇರಿ ದಂತೆ ಎಲ್ಲರೂ ಚರ್ಚೆ ಮಾಡಬೇಕಾದ ಅಗತ್ಯ ಇದೆ. ವಿಶ್ವವಿದ್ಯಾನಿಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿ ಗಳು ಹಳಗನ್ನಡ ಓದುವುದರಿಂದ ದೂರವಾಗಿದ್ದಾರೆ. 20ನೇ ಶತಮಾನದಲ್ಲಿ ಹಲವು ಪ್ರಮುಖ ಗ್ರಂಥಗಳು ಪ್ರಕಟಗೊಂಡಿದ್ದರೂ ಅವು ಓದುಗರಿಗೆ ಮುಟ್ಟುತ್ತಿಲ್ಲ ಎಂದು ಅವರು ವಿಷಾದಿಸಿದರು.

ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿ, ಕನ್ನಡಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ವಿದ್ಯಾರ್ಥಿಗಳು ಸಮಯವನ್ನು ಸರಿಯಾಗಿ ಸದ್ಬಳಕೆ ಮಾಡಿ ಕೊಂಡಾಗ ಮಾತ್ರ ಉತ್ತಮ ಸ್ಥಾನ, ಸನ್ಮಾನಗಳು ಪಡೆಯುವ ಅವಕಾಶಗಳು ಲಭಿಸುತ್ತವೆ. ಸಾಹಿತಿಗಳ, ವಿದ್ವಾಂಸರ ಸ್ಪೂರ್ತಿ ಪಡೆದು ನಿಮ್ಮ ವ್ಯಕ್ತಿತ್ವವನ್ನು ದೊಡ್ಡ ಮಟ್ಟದಲ್ಲಿ ರೂಪಿಸಿಕೊಳ್ಳುವಂತೆ ಕರೆ ನೀಡಿದರು.  

ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲ ಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, 21ನೇ ಶತಮಾನದಲ್ಲಿ ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನ,  ಸಾಂಪ್ರದಾಯಿಕವಾಗಿ, ಧಾರ್ಮಿಕ ವಾಗಿ ಕ್ರಾಂತಿ ಮಾಡುತ್ತಿರುವ ಏಕೈಕ ಮಠ ಸಿರಿಗೆರೆ ಮಠ. ಕನ್ನಡ ಭಾಷೆಯ ಉಳಿವಿಗೆ ಚಳುವಳಿಯ ಅವಶ್ಯಕತೆ ಇದ್ದು, ತರಳಬಾಳು ಶ್ರೀಗಳ ನೇತೃತ್ವದಲ್ಲಿ ಚಳವಳಿಯನ್ನು ಹಮ್ಮಿಕೊಳ್ಳಬೇಕಿದೆ ಎಂದರು. 

ಬೆಂಗಳೂರು ಕಸಾಪ ಗೌರವ ಕೋಶಾಧ್ಯಕ್ಷ  ಡಾ.ಬಿ.ಎಂ.ಪಟೇಲ್‌ ಪಾಂಡು ಮಾತನಾಡಿ,  ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ನುಡಿಹಬ್ಬ ಯಶಸ್ವಿ ಯಾಗಿದೆ. ಸಿರಿಗೆರೆ ವಿದ್ಯಾಸಂಸ್ಥೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶ್ರೀಮಠದ ದಾಸೋಹವು ನಿಸ್ವಾರ್ಥ ಸೇವೆಯಾಗಿದೆ. ಶಿಕ್ಷಣವು ದುಬಾರಿ ಯಾಗುತ್ತಿರುವ ಇಂದಿನ ಕಾಲದಲ್ಲಿ ಸಿರಿಗೆರೆ ಮಠವು ಮಕ್ಕಳಿಗೆ ಉಚಿತ ದಾಸೋಹದ ಮೂಲಕ ಶಿಕ್ಷಣ ನೀಡುತ್ತಿದೆ. ಇದು ಕಾಯಕದ ಪರಮ ಸೇವೆ ಹಾಗೂ ಶಿಕ್ಷಣ ಜ್ಯೋತಿಯ ಮಾರ್ಗವಾಗಿದೆ ಎಂದರು.

ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷ  ಕೆ.ಎಂ. ಶಿವಸ್ವಾಮಿ ಮಾತನಾಡಿ, ಸಿರಿಗೆರೆಯ ತರಳಬಾಳು ನುಡಿ ಹಬ್ಬವು ಗತವೈಭವ ಸಾರುವ ಹಾಗೆ ಯಶಸ್ವಿಯಾಗಿದೆ. ಇಂತಹ ಹತ್ತು ಹಲವು ಕಾರ್ಯಕ್ರಮಗಳು ಶ್ರೀಮಠದಿಂದ ಜರುಗಿದರೆ ಮಕ್ಕಳಲ್ಲಿ ಸಂಸ್ಕಾರ, ಶ್ರದ್ಧೆ ರೂಪಗೊಳ್ಳುತ್ತದೆ ಎಂದರು.

ದಾವಣಗೆರೆ ಜಿಲ್ಲಾ ಕಸಾಪ ಅಧ್ಯಕ್ಷ  ಬಿ.ವಾಮದೇವಪ್ಪ ಮಾತನಾಡಿ ಶ್ರೀಗಳು ಆಡಳಿತಕ್ಕಾಗಿ ವಿಶೇಷ ತಂತ್ರಾಂಶವನ್ನು ರೂಪಿಸಿದ್ದು, ಆದರ್ಶ ಶಿಕ್ಷಣ ಸಂಸ್ಥೆಯಾಗಿ ಸಿರಿಗೆರೆ ಮಠ ಬೆಳೆದಿದೆ. ಜೊತೆಗೆ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.

2024ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಚಿಕ್ಕಜಾಜೂರಿನ ಡಾ.ಎಚ್.ಆರ್.ಸ್ವಾಮಿ, ಚಿತ್ರದುರ್ಗದ ಎಚ್.ಬಿ.ಓಬಳೇಶ್ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳಲ್ಲಿ ಕನ್ನಡ ವಿಷಯದಲ್ಲಿ ಶೇ.100ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ  ಸಂಸ್ಥೆಯ ಆಡಳಿತಾಕಾರಿ ಡಾ.ಎಚ್.ವಿ.ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ. ಎಸ್‌ ಜತ್ತಿ, ವಿದ್ಯಾಸಂಸ್ಥೆಯ ಎಲ್ಲಾ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

error: Content is protected !!