ಓಬವ್ವನ ಶೌರ್ಯದ ಗುಣ ಅಳವಡಿಸಿಕೊಳ್ಳಿ

ಓಬವ್ವನ ಶೌರ್ಯದ ಗುಣ ಅಳವಡಿಸಿಕೊಳ್ಳಿ

ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ

ದಾವಣಗೆರೆ, ನ.11- ಹೆಣ್ಣು ಮಕ್ಕಳು ಒನಕೆ ಓಬವ್ವನ ಧೈರ್ಯ, ಶೌರ್ಯದ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿನ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೀರ ವನಿತೆ ಒನಕೆ ಓಬವ್ವನ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸ ನಮ್ಮ ನಾಡಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಒನಕೆ ಓಬವ್ವ, ರಾಣಿ ಚನ್ನಮ್ಮ, ಅಬ್ಬಕ್ಕ, ಗಾಂಧೀಜಿ, ನೆಹರು, ಬಾಬಾ ಸಾಹೇಬ್ ಅಂಬೇಡ್ಕರ್ ಇಂತಹ ಮಹನೀಯರು  ತಮಗಾಗಿ ಕೆಲಸ ಮಾಡಲಿಲ್ಲ, ಬದಲಾಗಿ ದೇಶಕ್ಕಾಗಿ, ಸಮಾಜಕ್ಕಾಗಿ , ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ್ದರಿಂದ ಇತಿಹಾಸದ ಪುಟಗಳಲ್ಲಿ ಅವರು ಅಜರಾಮರವಾಗಿ ಉಳಿದಿದ್ದಾರೆ. ಅದೇ ರೀತಿ ನಾವುಗಳು ಸಮಾಜದ ಒಳಿತಿಗಾಗಿ ಕೆಲಸ ಮಾಡಿದಾಗ ಮಾತ್ರ ಇತಿಹಾಸ ಪುಟ ಸೇರಲು ಸಾಧ್ಯ ಎಂದರು.

ರಾಜ್ಯ ಛಲವಾದಿ ಸಮಾಜದ ಮುಖಂಡರಾದ ಎಂ.ಸಿ.ಓಂಕಾರಪ್ಪ, ಒನಕೆ ಓಬವ್ವನ ತ್ಯಾಗ, ಧೈರ್ಯ, ಸ್ವಾಮಿ ನಿಷ್ಠೆಯ ಬಗ್ಗೆ ಉಪನ್ಯಾಸ ನೀಡಿದರು. ಹೆಚ್ಚುವರಿ ಪೊಲೀಸ್‌ ಅಧಿಕಾರಿ ವಿಜಯ್ ಕುಮಾರ್ ಎಂ. ಸಂತೋಷ್‌, ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ದುಡಾ ಸದಸ್ಯ ಗಿರೀಶ್, ಪಾಲಿಕೆ ಮೇಯರ್‌ ಕೆ. ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಜಿಲ್ಲಾ ಛಲವಾದಿ ಸಮಾಜದ ಮುಖಂಡ ಜೈ ಪ್ರಕಾಶ್, ಉಪಾಧ್ಯಕ್ಷೆ ರುದ್ರಮ್ಮ, ಜಿಲ್ಲಾ ಮಾದಿಗ ಸಮಾಜದ ಮುಖಂಡ ವೀರಭದ್ರಪ್ಪ ಮತ್ತು ಕೆಎಸ್ಎಸ್ ಕಾಲೇಜಿನ ವಿದ್ಯಾರ್ಥಿಗಳಿದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಛಲವಾದಿ ಮಹಾಸಭಾ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

error: Content is protected !!