ತಂತ್ರಜ್ಞಾನದ ಧಾವಂತದಲ್ಲಿ ಕನ್ನಡದ ನಿರ್ಲಕ್ಷ್ಯ

ತಂತ್ರಜ್ಞಾನದ ಧಾವಂತದಲ್ಲಿ ಕನ್ನಡದ ನಿರ್ಲಕ್ಷ್ಯ

ಸಿರಿಗೆರೆ: ‘ತರಳಬಾಳು ನುಡಿಹಬ್ಬ’ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಸ್ವಾಮೀಜಿ ಅಸಮಾಧಾನ 

ಸಿರಿಗೆರೆ, ನ. 8-  ಕನ್ನಡ ಭಾಷೆಗೆ ಸುಂದರ ಸೊಗಡಿದೆ,   ಅಪ್ಪಟ ಕನ್ನಡದಲ್ಲಿ ಮಾತನಾಡಲು ಕಲಿಯಬೇಕು ಮತ್ತು ಎಲ್ಲರ ಜೀವನದಲ್ಲಿಯೂ  ಕನ್ನಡ ಹಾಸುಹೊಕ್ಕಾಗಿರಬೇಕು ಎಂದು  ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಇಲ್ಲಿನ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ  ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ `ತರಳಬಾಳು ನುಡಿಹಬ್ಬ-2024′ ಕಾರ್ಯಕ್ರಮದ   ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಭಾಷೆ ಹರಿಯುವ ನದಿ ನೀರು. ಅದು ಮಲಿನವಾಗಬಾರದು. ದಿನನಿತ್ಯದಲ್ಲಿ ಬೇರೆ ಭಾಷೆಯಿಂದ ಎರವಲು ಪಡೆದು ಮಾತನಾಡುವುದು ಶೋಭಿತವಲ್ಲ. ಇಂದಿನ ಯುವಪೀಳಿಗೆಯ ವಿದ್ಯಾರ್ಥಿಗಳು ವಿಜ್ಞಾನ-ತಂತ್ರಜ್ಞಾನದ ಕಡೆಗೆ ಧಾವಿಸುತ್ತಿದ್ದಾರೆಯೇ ಹೊರತು ಕನ್ನಡವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ,   ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿಕೊಂಡೇ ಕನ್ನಡ ಸಾಹಿತ್ಯದ ಸೊಬಗು, ಕನ್ನಡದ ಅಭಿರುಚಿಯನ್ನು ಬಿತ್ತರಿಸಿ, ಬೆಳೆಸಿಕೊಳ್ಳಬೇಕು ಎಂದರು. 

ಶ್ರೀಮಠದಿಂದ ಅಭಿವೃದ್ಧಿಪಡಿಸಿರುವ ಮೊಬೈಲ್ ತಂತ್ರಾಂಶ ಶಿವಶರಣರ ವಚನ ಸಂಪುಟದ ಸಾಹಿತ್ಯ ಸಿರಿ ಜೊತೆಗೆ ಸರ್ವಜ್ಞನ 945 ವಚನಗಳು, 1925 ಮಂಕುತಿಮ್ಮನ ಕಗ್ಗಗಳನ್ನು ಸೇರ್ಪಡೆ ಮಾಡಿ ಪರಿಷ್ಕೃತಗೊಳಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ  ಡಾ.ಭೀಮಾಶಂಕರ ಜೋಷಿ `ಕನ್ನಡ ಸಾಹಿತ್ಯ ಮತ್ತು ಧರ್ಮ ಸಮನ್ವಯತೆ’ಯ ಬಗ್ಗೆ ಮಾತನಾಡುತ್ತಾ, ಕನ್ನಡದ ಕಹಳೆ ತರಳಬಾಳು ಶ್ರೀಮಠದಲ್ಲಿ ಮೊಳಗಿದೆ. ಪ್ರಾಚೀನ ಕಲೆಗಳ ಮೆರವಣಿಗೆ ನೋಡುಗರ ಮನ ಸೆಳೆಯಿತು. ಜಾನಪದ, ವಚನ, ದಾಸ, ತತ್ವಪದ, ಆಧುನಿಕ ಸಾಹಿತ್ಯ ಮುಂತಾದ  ಹಲವಾರು ವಿಭಾಗಗಳಲ್ಲಿ ಧರ್ಮ ಸಮನ್ವಯತೆ ಮೂಡಿದೆ. ಇಂದು ಎಲ್ಲವೂ ಸಹ ನಡೆಯುವುದು ಧರ್ಮದ ಮೂಲಕ. ಧರ್ಮ ಎಂದರೆ ಮಾಡಬೇಕಾದ ಕರ್ತವ್ಯ. ನಾವು ಧರ್ಮವನ್ನು ರಕ್ಷಿಸಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ. ದ್ವೇಷಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದರು.

ಮಂಡ್ಯದ ಡಾ. ಪ್ರದೀಪ್‍ಕುಮಾರ್ ಹೆಬ್ರಿ ಮಾತನಾಡಿ, ಡಿ.20ರಂದು ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿರಿಗೆರೆಯಲ್ಲಿ ಇಂದು ಕೋಟಿಕಂಠ ಗಾಯನ ಮಾಡಿದ 4ಸಾವಿರ ವಿದ್ಯಾರ್ಥಿಗಳ ಗಾಯನ ಮೊಳಗಬೇಕು. ಇಂದಿನ ವಿದ್ಯಾರ್ಥಿಗಳಿಗೆ ಸಾಧನೆ ಆಕಾಶದಷ್ಟು, ಆಸೆ ಆಕಾಶದಾಚೆ ಇರಬೇಕು. ನೀವೆಲ್ಲಾ ಶ್ರೀಮಠದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ವಿದ್ಯಾರ್ಥಿಗ ಳಾಗಬೇಕು ಎಂದರು.

ಉಡುಪಿ  ಕಸಾಪ ಅಧ್ಯಕ್ಷ  ನೀಲಾವರ ಸುರೇಂದ್ರ ಅಡಿಗ ಅವರು `ಕನ್ನಡ ಸಾಹಿತ್ಯದಲ್ಲಿ ಭಕ್ತಿ’ ವಿಷಯವಾಗಿ ಮಾತನಾಡಿ, ಹಿಂದೂ ಧರ್ಮದಲ್ಲಿ ಭಕ್ತಿಗೆ ವಿಶೇಷ  ಸ್ಥಾನ ಇದೆ. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ಅಪಾರ. ದಾಸ ಸಾಹಿತ್ಯಕ್ಕೆ ಪ್ರೇರಣೆಯೇ ವಚನಗಳು. ಸಂಗೀತ ಮತ್ತು ಸಾಹಿತ್ಯದ ಸಾಮರಸ್ಯವೇ ಕನ್ನಡ ಸಾಹಿತ್ಯ. ಎಲ್ಲಾ ವಿದ್ಯಾರ್ಥಿಗಳು ಕನ್ನಡ ಬೆಳೆಸಿ, ಕನ್ನಡ ಮಾತನಾಡಿ ಕನ್ನಡದ ಕಾರ್ಯಕ್ರಮಗಳಿಗೆ ಮೊದಲ ಆಧ್ಯತೆ ನೀಡಿ ಎಂದರು.

ಕಾರ್ಯಕ್ರಮದಲ್ಲಿ   ಕಸಾಪ ಅಧ್ಯಕ್ಷರಾದ ಬಿ.ವಾಮದೇವಪ್ಪ, ಕೆ.ಎಂ.ಶಿವಸ್ವಾಮಿ,  ಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ ಎಸ್.ಜತ್ತಿ, ವಿದ್ಯಾ ಸಂಸ್ಥೆಯ ಕನ್ನಡ ಶಿಕ್ಷಕರು, ಉಪನ್ಯಾಸಕರು, ಶಾಲಾ-ಕಾಲೇಜುಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಇದ್ದರು. ನಾಗರಾಜ ಸಿರಿಗೆರೆ ನಿರೂಪಿಸಿದರು. ಕೆ.ಇ. ಬಸವರಾಜಪ್ಪ ಸ್ವಾಗತಿಸಿ ದರು. 

ಬೆಳಗ್ಗೆ ವಿವಿಧ ಜನಪದ ಕಲಾ ತಂಡಗಳೊಂದಿಗೆ ಭುವನೇಶ್ವರಿ ದೇವಿ ಪ್ರತಿಮೆ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಜರುಗಿತು. ವಿದ್ಯಾರ್ಥಿಗಳು ಕವಿಗಳ, ಸಾಹಿತಿಗಳ ಹಾಗೂ ವಚನಕಾರರ ವೇಷ ಭೂಷಣಗಳನ್ನು ಧರಿಸಿ ಮೆರವಣಿಗೆಯಲ್ಲಿ   ಗಮನ ಸೆಳೆದರು. ಮೆರವಣಿಗೆಯಲ್ಲಿ ಕನ್ನಡ  ಘೋಷಣೆಗಳು, ಕನ್ನಡ ಬಾವುಟಗಳು ರಾರಾಜಿಸಿದವು. ನಂತರ ಕನ್ನಡ ಧ್ವಜಾರೋಹಣ ಮತ್ತು 4 ಸಾವಿರ ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳ ಗಾಯನ ನಡೆಯಿತು. 

error: Content is protected !!