ಜಗಳೂರು ಪಟ್ಟಣದ ಮೂಲಸೌಕರ್ಯ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ

ಜಗಳೂರು ಪಟ್ಟಣದ ಮೂಲಸೌಕರ್ಯ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ

ಶಾಸಕ ಬಿ.ದೇವೇಂದ್ರಪ್ಪ

ಜಗಳೂರು, ನ.8- ಪಟ್ಟಣದ ಮೂಲಸೌಕರ್ಯ ಅಭಿವೃದ್ಧಿಗೆ 5 ಕೋಟಿ ರೂ. ವಿಶೇಷ ಅನುದಾನ ಮಂಜೂರಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಪಟ್ಟಣದಲ್ಲಿ ಇಂದು ಸಾರ್ವಜನಿಕ ಆಸ್ಪತ್ರೆ ಮುಂಭಾಗ ಆಯೋಜಿಸಿದ್ದ ಸಮಾರಂಭದಲ್ಲಿ 2023-24 ನೇ ಸಾಲಿನ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸಮಗ್ರ ಅಭಿವೃದ್ದಿ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಿಶೇಷ  ಯೋಜನೆಯಡಿ 2 ಕೋಟಿ ರೂ.ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಪಟ್ಟಣದ ಹೃದಯ ಭಾಗದಲ್ಲಿ‌ ಅಧಿಕ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ವಾಸವಿದ್ದಾರೆ. ಕಿಷ್ಕಿಂಧೆಯಾಕಾರದ ರಸ್ತೆಯ ಬದಿಯಲ್ಲಿ ಸುಗಮ‌ ಸಂಚಾರವಿಲ್ಲದೆ ಹರಸಾಹಸ ಪಡುವಂತಾಗಿದೆ. ಆದ್ದರಿಂದ ಸಾರ್ವಜನಿಕ ಆಸ್ಪತ್ರೆಯಿಂದ ಉಜ್ಜಿನಿ ರಸ್ತೆಯವರೆಗೆ  ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 2 ಕೋಟಿ ರೂ. ವೆಚ್ಚದ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ನಂತರ ಹಂತ ಹಂತವಾಗಿ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಸರ್ಕಾರ ದಲಿತ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಪರವಾದ ಆಡಳಿತ ನಡೆಸುತ್ತಿದೆ. ಕಾಮಗಾರಿ ಅನುಷ್ಠಾನ ಕೆಐಆರ್ ಡಿಎಲ್ ಇಲಾಖೆಗೆ ವಹಿಸಲಾಗಿದೆ. ಅಧಿಕಾರಿಗಳು ಗುಣಮಟ್ಟದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದರು.

ಹಳೇ ತಾಲ್ಲೂಕು ಕಛೇರಿ ನೆಲಸಮಗೊಳಿಸಿ ವಿವಿಧ ಕಛೇರಿ ಗಳ ಸಂಕೀರ್ಣ ಭವನ ನಿರ್ಮಾಣಕ್ಕೆ 10 ಕೋಟಿ ರೂ.,  ಪಟ್ಟಣದ ಅಭಿವೃದ್ದಿಗಾಗಿ 8 ಕೋಟಿ ರೂ. ಸೇರಿದಂತೆ ಇತರೆ  ಅಭಿವೃದ್ದಿ ಕಾಮಗಾರಿಗಳಿಗೆ  ಮೊದಲ ಹಂತದಲ್ಲಿ ಸುಮಾರು 20 ಕೋಟಿ ರೂ. ಅನುದಾನ ನೀಡಿರುವ ನಮ್ಮದೇ ಪಕ್ಷದ ರಾಜ್ಯದಲ್ಲಿನ ಆಡಳಿತಾರೂಢ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ  ಸಚಿವರುಗಳಿಗೆ ಅಭಿನಂದಿಸುವುದಾಗಿ ಶಾಸಕರು ತಿಳಿಸಿದರು. 

ಸಮಾರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಪ.ಪಂ.ಅಧ್ಯಕ್ಷ ನವೀನ್ ಕುಮಾರ್, ಮುಖಂಡರಾದ ಕೆ.ಪಿ.ಪಾಲಯ್ಯ, ಎಂ.ಡಿ.ಕೀರ್ತಿಕುಮಾರ್, ಪಪಂ ಸದಸ್ಯರಾದ ಆರ್. ತಿಪ್ಪೇಸ್ವಾಮಿ, ಶಕೀಲ್ ಅಹಮ್ಮದ್, ಪಾಪಲಿಂಗಪ್ಪ, ರಮೇಶ್ ರೆಡ್ಡಿ, ಮಹಮ್ಮದ್ ಅಲಿ, ಮಂಜುನಾಥ್, ದೇವರಾಜ್, ನಾಮನಿರ್ದೇಶನ ಸದಸ್ಯರಾದ ಕುರಿ ಜಯ್ಯಣ್ಣ, ಶಾಂತಪ್ಪ, ತಾನಾಜಿ ಗೋಸಾಯಿ, ಪ.ಪಂ.ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಮುಂತಾದವರು ಇದ್ದರು.

error: Content is protected !!