ಇಂದಿರಾ ಗಾಂಧಿಯವರ 40ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಸ್ಮರಣೆ
ದಾವಣಗೆರೆ, ನ.3- ಬ್ಯಾಂಕ್ಗಳ ರಾಷ್ಟ್ರೀಕರಣ ಹಾಗೂ ದೇಶದ ಏಕತೆ, ಸಮಗ್ರತೆಗಾಗಿ ತ್ಯಾಗ ಬಲಿದಾನ ಮಾಡಿದವರು, ವಿಶ್ವದಲ್ಲೇ ಉಕ್ಕಿನ ಮಹಿಳೆ ಎಂದು ಪ್ರಸಿದ್ಧರಾಗಿದ್ದ ಇಂದಿರಾಗಾಂಧಿ ಯವರು ತಮ್ಮ ಆಡಳಿತದಲ್ಲಿ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಬಡವರ ಪಾಲಿನ ತಾಯಿಯಾಗಿದ್ದರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಇಂದಿರಾ ಗಾಂಧಿಯವರ ಸೇವೆಯನ್ನು ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ಇನ್ಟೆಕ್ ವಿಭಾಗವು ದೇವರಾಜ ಅರಸು ಬಡಾವಣೆಯಲ್ಲಿ ಮೊನ್ನೆ ಏರ್ಪಡಿಸಿದ್ದ ಇಂದಿರಾ ಗಾಂಧಿಯವರ 40ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಇಂದಿರಾ ಗಾಂಧಿಯವರ ಆಡಳಿತ ಶೈಲಿ ಹೇಗಿತ್ತೆಂದರೆ ಅವರು ಯುದ್ಧಭೂಮಿಗೆ ತೆರಳಿ ಸೈನಿಕರನ್ನು
ಖುದ್ದಾಗಿ ಹುರುದುಂಬಿಸಿ ಪಾಕಿಸ್ತಾನದ ವಿರುದ್ಧ
ಭಾರತಕ್ಕೆ ಗೆಲುವು ತಂದುಕೊಡುವುದರ ಜೊತೆಗೆ ಬಾಂಗ್ಲ ದೇಶದ ಉದಯಕ್ಕೆ ಕಾರಣರಾಗಿ ದ್ದರು. ಭಾರತಕ್ಕೆ ಗೆಲವು ತಂದು ಕೊಟ್ಟಿದ್ದಾಗಿ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಲೋಕಸಭಾ ಅಧಿವೇಶನದಲ್ಲಿ ಹೊಗಳಿ ಅಭಿನಂದಿಸಿದ್ದರಲ್ಲದೇ ಇಂದಿರಾ ಗಾಂಧಿಯವರನ್ನು ದುರ್ಗಾಂಬಿಕ ದೇವಿಗೆ ಹೋಲಿಕೆ ಮಾಡಿ ಪ್ರಶಂಸಿಸಿದರು ಎಂದು ಬಸವರಾಜ್ ನೆನಪಿಸಿದರು.
ಇಂದಿರಾ ಗಾಂಧಿ ಅವರು ದೇಶ ಆಹಾರ ಸ್ವಾವಲಂಬನೆ ಹೊಂದಲು ಶ್ರಮಿಸಿದ್ದಲ್ಲದೇ ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಕ `ಭೂ ಸುಧಾರಣೆ ಕಾಯ್ದೆ’ ಜಾರಿ ಮಾಡಿ ಅನಿಷ್ಟ ಜೀತ ಪದ್ಧತಿಗೆ ಮುಕ್ತಿ ನೀಡಿ ಬಡವರ ಉದ್ದಾರಕ್ಕಾಗಿ 20 ಅಂಶಗಳ ಕಾರ್ಯಕ್ರಮ ಜಾರಿಗೊಳಿಸಿದ್ದಲ್ಲದೇ ಬಡತನ ತೊಲಗಿಸಲು ಗರೀಬಿ ಹಠಾವೋ
ಕಾರ್ಯಕ್ರಮವನ್ನು ದೇಶಕ್ಕೆ ನೀಡಿದ್ದಲ್ಲದೇ ಅಲ್ಪಸಂಖ್ಯಾತರಿಗಾಗಿ 15 ಅಂಶಗಳ ಕಾರ್ಯಕ್ರಮ ಘೋಷಣೆ ಮಾಡಿದ್ದರು.
ನೆರೆಯ ರಾಷ್ಟ್ರ ಪಾಕಿಸ್ತಾನದ ಉಪಟಳ ಜಾಸ್ತಿ ಆದಾಗ ಯುದ್ಧ ಭೂಮಿಗೆ ತೆರಳಿ ಭಾರತೀಯ ಸೈನಿಕರನ್ನು ಹುರಿದುಂಬಿಸಿ ಭಾರತಕ್ಕೆ ಜಯವನ್ನು ತಂದು ಕೊಟ್ಟಂತಹ ಉಕ್ಕಿನ ಮಹಿಳೆ ಇಂದಿರಾಗಾಂಧಿ ಎಂದು ಅವರು ಸ್ಮರಿಸಿದರು.
ಇತಿಹಾಸವನ್ನೇ ತಿರುಚುವ ಕೆಲಸವನ್ನು ನರೇಂದ್ರ ಮೋದಿಯವರು ಮಾಡುತ್ತಿದ್ದು, ಇದರ ವಿರುದ್ಧವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಇಂದಿನ ಯುವ ಪೀಳಿಗೆಗೆ ಕಾಂಗ್ರೆಸ್ ಪಕ್ಷ ನೆಹರು ಕುಟುಂಬದ ತ್ಯಾಗ ಬಲಿದಾನಗಳ ಬಗ್ಗೆ ಮನವರಿಕೆ ಮಾಡಬೇಕೆಂದು ಕೋರಿದರಲ್ಲದೆ ಇಂದಿರಾಜಿಯವರ ಆದರ್ಶಗಳನ್ನು ನಾವು ಪಾಲಿಸಬೇಕು ಎಂದು ಡಿ. ಬಸವರಾಜ್ ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಇನ್ಟೆಕ್ವಿಭಾಗದ ಅಧ್ಯಕ್ಷ ಕೆ.ಎಂ. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಕೊಡಪಾನ ದಾದಾಪೀರ್, ಬಿ.ಹೆಚ್. ಉದಯಕುಮಾರ್, ಡಿ. ಶಿವಕುಮಾರ್, ಸುರೇಶ್ ಬಿ.ಎಸ್., ನವೀನ್ ಕುಮಾರ್, ಕರಿಬಸಪ್ಪ, ರಮೇಶ್ ಚಲುವಾದಿ, ರಿಯಾಜ್, ತಿಪ್ಪೇಸ್ವಾಮಿ, ಮುಬಾರಕ್, ಮೌನೇಶ್, ಈಶ್ವರಪ್ಪ, ಲಕ್ಷ್ಮಣ್, ನಯಾಜ್, ಇಬ್ರಾಹಿಂ, ರವಿ, ಕೆ.ಜಿ. ರಹಮತ್ ವುಲ್ಲಾ ಸೇರಿದಂತೆ ಇತರರು ಹಾಜರಿದ್ದರು.