ಕಳ್ಳರ ಉಪಟಳಕ್ಕೆ ಬೇಸತ್ತ ಪಟಾಕಿ ವರ್ತಕರು, ಗ್ರಾಹಕರ ಮೇಲೂ ದೌರ್ಜನ್ಯ
ಪಟಾಕಿ ಸಂಗ್ರಹಕ್ಕಾಗಿ ಸ್ಥಳ ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಸರ್ಕಾರದಿಂದ ಊರ ಹೊರಗೆ ಜಾಗ ನೀಡಿದರೆ ಅಲ್ಲಿ ಗೋದಾಮಿನಲ್ಲಿ ಪಟಾಕಿ ಸಂಗ್ರಹಕ್ಕೆ ಅನುಕೂಲವಾಗಲಿದೆ.
– ಪಿ.ಸಿ. ಶ್ರೀನಿವಾಸ್, ಕ.ಪ.ವ.ಕ್ಷೇ.ಸಂ. ಜಿಲ್ಲಾಧ್ಯಕ್ಷ
ದಾವಣಗೆರೆ, ನ.3- ಜಿಲ್ಲೆಯಲ್ಲಿ 3 ದಿನಗಳ ಕಾಲ ಸಂಭ್ರಮಿಸಿದ ದೀಪಾವಳಿ ಹಬ್ಬದಲ್ಲಿ ಜನರು ಪಟಾಕಿ ಹೊಡೆದು ಹಬ್ಬಕ್ಕೆ ಮೆರಗು ನೀಡಿದರೇ, ಪಟಾಕಿ ವರ್ತಕರು ಕಳೆದ ವರ್ಷದ ವ್ಯಾಪಾರದ ದಾಖಲೆ ಪ್ರಬಲವಾಗಿ ಮುರಿಯಲಾಗಲಿಲ್ಲ ಎಂದು ತುಸು ಬೇಸರದಲ್ಲಿದ್ದಾರೆ.
ಹೌದು, ನಗರದ ಹೈಸ್ಕೂಲ್ ಮೈದಾನದಲ್ಲಿ ದೀಪಾವಳಿ ನಿಮಿತ್ತ ಈ ಬಾರಿ ಪಟಾಕಿ ಮಾರಾಟಕ್ಕೆ ಒಟ್ಟು 74 ಮಳಿಗೆಗಳಿಗೆ ತಾತ್ಕಾಲಿಕ ಪರವಾನಿಗೆ ಲಭಿಸಿತ್ತು. ಜಿಲ್ಲಾಡಳಿತದ ಸೂಚನೆಯಂತೆ ಅ.30ರಿಂದ ನ.2ರ ವರೆಗೆ ವಹಿವಾಟು ನಡೆದು, ಪಟಾಕಿ ವರ್ತಕರ ನಿರೀಕ್ಷೆಯ ಮಟ್ಟಕ್ಕಿಂತ ಕಡಿಮೆ ವ್ಯಾಪಾರ ಆಗಿದೆ.
ಸರ್ಕಾರದ ಕಠಿಣ ನಿಯಮಗಳಿಗೆ ಬದ್ಧವಾಗಿಯೂ ಅಂದಾಜು 7ರಿಂದ 8 ಕೋಟಿ ರೂ.ಗಳ ಪಟಾಕಿ ವಹಿವಾಟು ನಡೆದಿರಬಹುದು. ಮತ್ತು ಪಟಾಕಿ ಮಾರಾಟಕ್ಕೆ ಮಳೆರಾಯ ಅಡ್ಡಿ ಪಡಿಸದಿರುವುದು ವರ್ತಕರಿಗೆ ನೆಮ್ಮದಿ ತಂದಿದೆ ಎಂದು ಕರ್ನಾಟಕ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್ ಪತ್ರಿಕೆಗೆ ತಿಳಿಸಿದರು. ಅಲ್ಪ ಪ್ರಮಾಣದಲ್ಲಿ ವಿವಿಧ ಬಗೆಯ ಪಟಾಕಿಗಳು ಉಳಿದಿವೆ. 15 ದಿನ ಕಳೆದರೆ ಗೌರಿ ಹುಣ್ಣಿಮೆ, ತದನಂತರ ತುಳಸಿ ಹಬ್ಬ ಬರಲಿದೆ. ಆಗ ಉಳಿದಂತಹ ಎಲ್ಲಾ ತರಹದ ಪಟಾಕಿಗಳು ಖಾಲಿಯಾಗಲಿವೆ. ಆದಾಗ್ಯೂ ಉಳಿದರೆ ಹಳ್ಳಿಯ ಭಾಗದಲ್ಲಿ ಮಾರಾಟ ಮಾಡಿ ಖಾಲಿ ಮಾಡಲಾಗುವುದು ಎಂದಿದ್ದಾರೆ.
ಕಳ್ಳರ ದೌರ್ಜನ್ಯ : ಪಟಾಕಿ ವ್ಯಾಪಾರಸ್ಥರು ಕಳ್ಳರ ಉಪಟಳಕ್ಕೆ ನೊಂದಿದ್ದಾರೆ. ಈ ಹಿಂದೆ ಮಳಿಗೆಗಳ ತಗಡು ಕಟ್ ಮಾಡಿ ಕಳ್ಳತನ ಮಾಡಿದ ಘಟನೆ ಸಂಭವಿಸಿದ್ದವು. ಮತ್ತು ಗ್ರಾಹಕರು ಪಟಾಕಿ ಕೊಂಡು ಹೋಗುವಾಗ ಕಳ್ಳರು ರಾಬರಿ ಮಾಡಿ ಪಟಾಕಿ ಕಿತ್ತೊಯ್ಯುವ ಘಟನೆ ಪ್ರತಿ ವರ್ಷ ನಡೆಯುತ್ತಿದ್ದು, ಈ ವರ್ಷವೂ ನಡೆದಿದೆ ಎಂದು ವ್ಯಾಪಾರಸ್ಥರೊಬ್ಬರು ಅಳಲು ತೋಡಿಕೊಂಡರು.
ಗ್ರಾಹಕರ ರೂಪದಲ್ಲಿ ಅಂಗಡಿಗಳಿಗೆ ಬರುವ ಕಳ್ಳರು, ಪಟಾಕಿ ವರ್ತಕರು ಹಾಗೂ ಗ್ರಾಹಕರಿಗೆ ತೊಂದರೆ ನೀಡುವ ಜತೆಗೆ ಜೀವ ಬೆದರಿಕೆಯನ್ನೂ ಹಾಕಿದ ಘಟನೆ ನಡೆದಿವೆ.
ಚಿಕ್ಕ ಮಕ್ಕಳೂ ಸಹ ಪಟಾಕಿ ಆಸೆಗಾಗಿ ಈ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಕಳ್ಳರ ನಿಯಂತ್ರಣಕ್ಕಾಗಿ ಪೊಲೀಸರು ಗಸ್ತು ಹಾಕುತ್ತಿದ್ದರು. ಪೊಲೀಸ್ ಇಲ್ಲದ ವೇಳೆ ಇವರ ಹಾವಳಿ ಹೆಚ್ಚಾಗಿರುತ್ತದೆ ಎಂದು ವರ್ತಕರು ಆರೋಪಿಸಿದ್ದಾರೆ.