ದಾವಣಗೆರೆ, ಅ.30- ಇಲ್ಲಿಗೆ ಸಮೀಪದ ಗೋಣಿವಾಡದ ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯದಲ್ಲಿ `ಭಾರತ ಮತ್ತು ಇದರ ಪರಂಪರೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾಜ-ವಿಜ್ಞಾನ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾರತಾಂಬೆಗೆ ದೀಪ ಬೆಳಗುವುದರ ಮೂಲಕ ಉದ್ಘಾಟನೆ ನೆರವೇರಿಸಿದ ಪ್ರಾಂಶುಪಾಲರಾದ ವೀಣಾರವರು ಮಕ್ಕಳಿಗೆ ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನಾವಳಿಗಳ ಮಹತ್ವ ವಿವರಿಸಿದರು.
9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಸಂವಿ ಧಾನದ ಪ್ರಸ್ತಾವನೆಯನ್ನು ಮಂಡಿಸಿದರು. ಸಾಮಾಜಿಕ ಅರಿವು, ಸ್ವಾವಲಂಬನೆ, ಹೊಸತನ ಹಾಗೂ ಐತಿಹಾಸಿಕ ಪರಂಪರೆಯನ್ನು ಉಳಿಸಿ ಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವೆಂದು ಸಮಾಜ-ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಮಮತಾ ಅವರು ಮಕ್ಕಳಿಗೆ ಅರ್ಥೈಸಿದರು.
ಕಾರ್ಯಕ್ರಮದಲ್ಲಿ ಒನಕೆ ಓಬವ್ವ, ಕಿತ್ತೂರಿನ ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿರಾಯಣ್ಣ ವೇಷ ಧರಿಸಿದ ಮಕ್ಕಳು ಅಮೋಘ ಅಭಿನಯದ ಮೂಲಕ ಗಮನ ಸೆಳೆದರು. ಪ್ರಾಥಮಿಕ ವಿಭಾಗದ ವಿದ್ಯಾರ್ಥಿ ಗಳು ಸ್ವಾತಂತ್ರ್ಯ ಹೋರಾಟಗಾರರ ವೇಷದಲ್ಲಿ ಎಲ್ಲರ ಗಮನ ಸೆಳೆದರು. ಈ ಪ್ರದರ್ಶನದಲ್ಲಿ ವಿಧಾನಸೌಧ, ನೀತಿ ಆಯೋಗ, ಯು.ಪಿ.ಎಸ್.ಸಿ. ಹಾಗೂ ಕೆ.ಪಿ.ಎಸ್.ಸಿ., ನಾಗರಿಕತ್ವ, ಭಾಕ್ರಾನಂಗಲ್ ಡ್ಯಾಂ, ಸೌರ ವ್ಯೂಹ, ಜಾಮೀಯ ಮಸೀದಿ, ಬೀದರ್ ಕೋಟೆ, ಕಿತ್ತೂ ರಿನ ಕೋಟೆ ಹೀಗೆ ಹಲವು ಮಾದರಿಗಳು ಮಕ್ಕಳಿಗೆ ತಿಳಿಯಲು ಉತ್ತಮ ವೇದಿಕೆಯಾಗಿ ಮಾರ್ಪಟ್ಟಿತ್ತು.
ಈ ಪ್ರದರ್ಶನದಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದ ಗಣೇಶ್ ಹಾಗೂ ಶ್ರೀಮತಿ ಉಮಾ ರವರು, ಮಕ್ಕಳು ಅವರ ಮಾದರಿಗಳ ಬಗ್ಗೆ ನೀಡಿದ ವಿವರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಮಸ್ತ ಸಿಬ್ಬಂದಿ ಉಪಸ್ಥಿತರಿದ್ದರು.