ಧನ್ವಂತರಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ
ದಾವಣಗೆರೆ, ಅ.29- ಪಾರಂಪರಿಕ ವೈದ್ಯ ಪರಂಪರೆ ಸಾತ್ವಿಕ ಕಲೆಯಾಗಿದ್ದು, ಈ ಕಲೆ ಬೆಳೆಸಲು ನಾಟಿ ಪಂಡಿತರು ಜನರ ನಂಬಿಕೆ ಗಳಿಸಬೇಕಿದೆ ಎಂದು ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.
ಪಾರಂಪರಿಕ ವೈದ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಆಯೋ ಜಿಸಿದ್ದ ಧನ್ವಂತರಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಭೂಮಿಯ ಮೇಲೆ ಅನೇಕ ಔಷಧಿ ಸಸ್ಯಗಳಿವೆ. ಅವುಗಳನ್ನು ಪಾರಂಪರಿಕ ವೈದ್ಯರು ಸಂಗ್ರಹಿಸಿ, ಆ ಗಿಡ ಮೂಲಿಕೆಗಳಿಂದ ಅನೇಕ ರೋಗಗಳಿಗೆ ಮದ್ದು ನೀಡುತ್ತಾ ಜನರ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಆಯುರ್ವೇದವು ಸಾವಿರಾರು ವರ್ಷಗಳಿಂದ ಜನರ ಮನಸ್ಸಲ್ಲಿ ಬೇರೂರಿದೆ. ಹಾಗಾಗಿ ನಾಟಿ ವೈದ್ಯರು ಹಣದ ಆಸೆಗೆ ಜನರಿಗೆ ಮೋಸ ಮಾಡದೇ ಬಡವರು, ಹಳ್ಳಿಯ ಜನರು ಮತ್ತು ರೈತಾಪಿ ವರ್ಗ ದವರ ಸ್ವಾಸ್ಥ್ಯಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ಆಯುರ್ವೇದಲ್ಲಿ ಮನೋ ರೋಗಕ್ಕೂ ಚಿಕಿತ್ಸೆ ಇರುವುದನ್ನು ಋಷಿ ಮುನಿಗಳು ಅಂದೇ ಕಂಡು ಹಿಡಿದಿದ್ದಾರೆ. ಈ ಪದ್ಧತಿಯನ್ನು ಅನುಸರಿಸಿ ನಾನು ಒಬ್ಬ ಮನೋರೋಗಿಗೆ ಚಿಕಿತ್ಸೆ ನೀಡಿ ಸರಿಪಡಿಸಿದ್ದೇನೆ ಎಂದು ಶ್ರೀಗಳು ತಿಳಿಸಿದರು.
ವೈದ್ಯಕೀಯ ಪರಿಷತ್‌ಗೆ ಸವಾಲಾಗಿರುವ ಅನೇಕ ಕಾಯಿಲೆಗಳನ್ನು ದೂರ ಮಾಡುವ ಶಕ್ತಿ ಧನ್ವಂತರಿಯಲ್ಲಿದೆ ಎಂಬುದನ್ನು ತೋರಿಸಬೇಕಿದೆ ಎಂದರು.
ದೀಪಾವಳಿ ಹಬ್ಬದಲ್ಲಿ ಬಳಸುವ ಮಹಾಲಿಂಗ ಬಳ್ಳಿ, ಹೊನ್ನಾರಿಕೆ ಹೂವು ಸೇರಿದಂತೆ ಕೆಲವು ಗಿಡ ಮೂಲಿಕೆಗಳ ಬಗೆಗೆ ಮಾಹಿತಿ ನೀಡಿದರು ಮತ್ತು ಆಹಾರ ಕ್ರಮದಲ್ಲಿ ಹೆಚ್ಚಾಗಿ ಮಜ್ಜಿಗೆ ಸೇವಿಸುವಂತೆ ಸಲಹೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತ ನಾಡಿ, ಆಧುನಿಕ ವೈದ್ಯಕೀಯ ವ್ಯವಸ್ಥೆ ಇಲ್ಲದ ಕಾಲ ದಲ್ಲಿ ಅನೇಕ ರೋಗಗಳಿಗೆ ನಾಟಿ ಪಂಡಿತರೇ ಚಿಕಿತ್ಸೆ ನೀಡಿ ಕಾಯಿಲೆ ಶಮನ ಗೊಳಿಸುತ್ತಿದ್ದರು ಎಂದರು.
ಪಾರಂಪರಿಕ ಜ್ಞಾನವನ್ನು ಎಲ್ಲರೂ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ದೇಶವನ್ನು ಭವ್ಯ ಭಾರತ ಹಾಗೂ ವಿಶ್ವ ಗುರು ಭಾರತವನ್ನಾಗಿ ಮಾಡಬೇಕು ಎಂದು ಹೇಳಿದರು.
ಪರಿಷತ್‌ನ ನಿಕಟ ಪೂರ್ವ ಜಿಲ್ಲಾಧ್ಯಕ್ಷ ನೇರ್ಲಿಗಿ ಗುರುಸಿದ್ದಪ್ಪ ಪ್ರಾಸ್ತಾವಿಕ ಮಾತನಾಡಿದರು. ಮೂತ್ರಕೋಶದ ಕಲ್ಲು ನಿವಾರಣೆ ಮತ್ತು ಮೈಗ್ರೇನ್ ನಿವಾರಕ ಚಿಕಿತ್ಸೆಯ ಬಗೆಗೆ ಉಚಿತವಾಗಿ ತಿಳಿಸಿದರು.
ಈ ವೇಳೆೆ ಪಾರಂಪರಿಕ ವೈದ್ಯ ಪರಿಷತ್ ತಾಲ್ಲೂಕು ಅಧ್ಯಕ್ಷರಾದ ಶಿವಲಿಂಗಮ್ಮ, ಜಿಲ್ಲಾ ಸಂಚಾಲಕರಾದ ಪುಷ್ಪಲತಾ, ಶಿವಮೂರ್ತಿ, ಮಂಜು ನಾಥ ದೊಡ್ಡಮನಿ ಸೇರಿದಂತೆ ಮತ್ತಿತರರಿದ್ದರು.