ಹರಪನಹಳ್ಳಿ ಮಹೇಶ ಪಬ್ಲಿಕ್ ಶಾಲೆಯ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಿರೀಶ್ ಬಾಬು
ಹರಪನಹಳ್ಳಿ,ಅ.28 – ಕನ್ನಡ ಬರೀ ಒಂದು ಭಾಷೆಯಷ್ಟೇ ಅಲ್ಲ, ಅದು ಕನ್ನಡಿಗರ ಅಸ್ಮಿತೆ. ಭಾರತದಲ್ಲಿರುವ ಎಲ್ಲಾ ಭಾಷೆಗಳ ರಾಣಿ ಎಂದೇ ಹೆಮ್ಮೆಯಿಂದ ಕರೆಯಿಸಿಕೊಳ್ಳುವ ಸುಂದರ ಭಾಷೆ ಕನ್ನಡವಾಗಿದೆ ಎಂದು ತಹಶೀಲ್ದಾರ್ ಗಿರೀಶ್ ಬಾಬು ಹೇಳಿದರು.
ಪಟ್ಟಣದ ಮಹೇಶ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲ್ಲೂಕಿನ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವ್ಯವಹಾರಿಕವಾಗಿ ಯಾವುದೇ ಭಾಷೆಯಲ್ಲಿ ಮಾತನಾಡಲಿ, ಆದರೆ ತಾಯಿ ಭಾಷೆಯಾಗಿ ಕನ್ನಡದಲ್ಲೇ ಮಾತನಾಡಿ, ಕನ್ನಡ ನಾಡು-ನುಡಿ, ನೆಲ-ಜಲದ ಬಗ್ಗೆ ಅಭಿಮಾನವಿರಲಿ. ವರ್ಷ ಪೂರ್ತಿ ಕನ್ನಡದ ಬಗ್ಗೆ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹೇಶ ಪಬ್ಲಿಕ್ ಶಾಲೆಯ ಅಧ್ಯಕ್ಷ ಡಾ. ಎಸ್.ಎನ್.ಮಹೇಶ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡವಾಗಿದ್ದು, ಭಾಷೆ ಮೇಲೆ ಹಿಡಿತ ಇಲ್ಲವಾದರೆ ನೀವು ಗುರಿ ಮುಟ್ಟಲು ಸಾಧ್ಯವಿಲ್ಲ. ಉತ್ತಮವಾಗಿ ಓದಲು ಬರೆಯಲು ಬರಬೇಕು. ಜೊತೆಗೆ ಕನ್ನಡ ಭಾಷೆ ಆರಾಧನೆ ಮಾಡಬೇಕು, ಪೂಜಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಕನ್ನಡ ನಾಡು ಅಥವಾ ಕರ್ನಾಟಕ ಉದಯವಾದ ಈ ದಿನವನ್ನು ಸಂಭ್ರಮಿಸುವ ಹಾಗೂ ಕನ್ನಡ ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸಿ, ಗೌರವಿಸುವ ಹಾಗೂ ಕನ್ನಡಾಭಿಮಾನವನ್ನು ಮೆರೆಯುವ ಉದ್ದೇಶದಿಂದ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ಅದರ ನಿಮಿತ್ತವಾಗಿ ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು ನುಡಿ ಅಭಿಮಾನ ಬೆಳೆಸುವಲ್ಲಿ ಸಹಕಾರಿಯಾಗಲು ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಗಿರಜ್ಜಿ ನಾಗರಾಜ ಮಾತನಾಡಿ, ಹಚ್ಚ ಹಸುರಿನ ಸುಂದರ ಬೆಟ್ಟ ಗುಡ್ಡಗಳು, ಪವಿತ್ರ ಕಾವೇರಿ, ತುಂಗಭದ್ರೆ ನದಿಗಳು ಹರಿಯುವ, ಸಾಧು-ಸಂತರು, ದಾಸರು, ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರೇ ಒಂದು ಧೀಮಂತ ಶಕ್ತಿ ಎಂದರು.
ಸಾಹಿತಿ ಇಸ್ಮಾಯಿಲ್ ಎಲಿಗಾರ್ ಮಾತನಾಡಿ, ಕನ್ನಡವು ಎಲ್ಲಾ ಭಾಷೆಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡು, ಪ್ರಪಂಚದ ಶ್ರೇಷ್ಠ ಭಾಷೆಯಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತ್ಯಂತ ಮಹತ್ವದ ಘಟ್ಟವಾಗಿದ್ದು ವಿದ್ಯಾರ್ಥಿ ಗಳು ಕಷ್ಟಪಟ್ಟು, ಇಷ್ಟಪಟ್ಟು ಓದಬೇಕು ಎಂದರು. ಇಂತಹ ಪ್ರದರ್ಶಕ ಕಲೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು. ಕನ್ನಡ ಭಾಷೆ ಜಾತ್ಯತೀತವಾಗಿದ್ದು, ಅದನ್ನು ಯಾರಾದರೂ ಕಲಿಯಬಹುದು ಎಂದರು.
ಕರ್ನಾಟಕ ನೌಕರರ ಸಂಘದ ನಿರ್ದೆಶಕ ಸಿ.ಗಂಗಾಧರ, ಇ.ಸಿ.ಓ ಗಿರಜ್ಜಿ ಮಂಜುನಾಥ, ಸಿ.ಆರ್‌ಪಿ ಸಲೀಂ, ಮಹೇಶ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ೈ