ಜಗಳೂರು: ನಿರಾಶ್ರಿತರಿಗೆ ಶಾಸಕರ ಸಾಂತ್ವನ

ಜಗಳೂರು: ನಿರಾಶ್ರಿತರಿಗೆ ಶಾಸಕರ ಸಾಂತ್ವನ

ಸರ್ಕಾರಿ ಜಮೀನಿನಲ್ಲಿ ಶಾಶ್ವತ ಸೂರು ಕಲ್ಪಿಸುವ  ಭರವಸೆ ನೀಡಿದ ಶಾಸಕ ಬಿ.ದೇವೇಂದ್ರಪ್ಪ

ಜಗಳೂರು, ಅ.28- ತಾಲ್ಲೂಕಿನ ಉದ್ಗಟ್ಟ ಗ್ರಾಮದಲ್ಲಿ ಕೆರೆ ಹಿನ್ನೀರಿನಿಂದ ನಿರಾಶ್ರಿತ ಸಂತ್ರಸ್ತ ರಿಗೆ ಸಾಂತ್ವನ ಹೇಳಿದ  ಶಾಸಕ ಬಿ.ದೇವೇಂದ್ರಪ್ಪ, ಕಂದಾಯ ಇಲಾಖೆ ಸರ್ಕಾರಿ ಜಮೀನಿನಲ್ಲಿ ಶಾಶ್ವತ ಸೂರು ಕಲ್ಪಿಸುವ  ಭರವಸೆ ನೀಡಿದರು.

ತಾಲ್ಲೂಕಿನ ಭರಮಸಮುದ್ರ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಪಕ್ಕದ ಉದ್ಗಟ್ಟ ಗ್ರಾಮದ 20ಕ್ಕೂ ಅಧಿಕ ಕುಟುಂಬಗಳ ಮನೆಗಳಿಗೆ ನೀರು ನುಗ್ಗಿ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದು, ಸೂರಿಗಾಗಿ ಪರಿತಪಿಸುತ್ತಿದ್ದರು‌. 

ಅಧಿಕಾರಿಗಳೊಂದಿಗೆ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಕಾಳಜಿ ಕೇಂದ್ರ ತೆರೆಯಲು ಸೂಚಿಸಿದರು. ಆದರೆ ನಿರಾಶ್ರಿತರು ಕಾಳಜಿ ಕೇಂದ್ರದ ಬದಲಾಗಿ ಸಹಾಯಕ್ಕಾಗಿ ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ  20 ಸಾವಿರ ರೂ. ಸಹಾಯಸ್ತ ಚಾಚಿ ಆಹಾರ ದಾಸ್ತಾನು ಖರೀದಿಸಲು ನೆರವಾದರು.

ಕಳೆದ 4 ದಶಕಗಳ ನಂತರ ತಾಲ್ಲೂಕಿನಲ್ಲಿ ಕೆರೆ ಕೋಡಿಗಳು ಬೀಳುತ್ತಿರುವುದು ಒಂದೆಡೆ ಸಂತಸ ವಾದರೆ, ಮತ್ತೊಂದೆಡೆ ಜಲಾವೃತಕ್ಕೆ ಬಲಿಯಾಗಿ ಅಪಾರ ಖರ್ಚು ಭರಿಸಿ ನಿರ್ಮಿಸಿ ಕೊಂಡ ಸುಸಜ್ಜಿತವಾದ ಮನೆಗಳಿಗೆ ನೀರು ನುಗ್ಗಿ ಮನೆಗಳನ್ನು ಕಳೆದುಕೊಂಡು ಆತಂಕದಲ್ಲಿ ಅಳಲು ತೋಡಿಕೊಳ್ಳುತ್ತಿರುವ ಸಂತ್ರಸ್ತರನ್ನು ಕಂಡು ನನಗೂ ಮರುಕ ವ್ಯಕ್ತವಾಗುತ್ತಿದೆ ಎಂದರು.

ಗ್ರಾಮದಲ್ಲಿ ಮಾರಕ ರೋಗಕ್ಕೆ ತುತ್ತಾಗಿರುವ ಎರಡು ಮೇಕೆಗಳು ಮೃತಪಟ್ಟಿದ್ದು, ಬೇಸರ ವಾಯಿತು. ಪಶುವೈದ್ಯಾಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡುವ ಮೂಲಕ ಮುಂಜಾಗ್ರತಾ ಕ್ರಮದಿಂದ ಲಸಿಕೆ ನೀಡಲು ಸೂಚಿಸಿರುವೆ ಎಂದರು.

ಈ ಸಂದರ್ಭದಲ್ಲಿ ತಾ.ಪಂ.ಇಓ ಕೆಂಚಪ್ಪ, ಆರ್.ಐ. ಧನಂಜಯ್, ಪಿಡಿಓ ಕೊಟ್ರೇಶ್ ಸೇರಿದಂತೆ ಗ್ರಾಮಸ್ಥರು ಇದ್ದರು.

error: Content is protected !!