ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ರವೀಂದ್ರನಾಥ್
ದಾವಣಗೆರೆ, ಅ.27- ಇಂದಿನ ಮಕ್ಕಳು, ಹಿರಿಯರಿಂದ ಸಂಸ್ಕೃತಿ-ಸಂಸ್ಕಾರ ಹಾಗೂ ಮೌಲ್ಯಗಳನ್ನು ಕಲಿಯಬೇಕಿದೆ ಎಂದು ದೃಷ್ಟಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ. ರವೀಂದ್ರನಾಥ್ ಹೇಳಿದರು.
ವನಿತಾ ಸಮಾಜ, `ಆಶ್ರಯ’ ಹಿರಿಯ ವನಿತೆಯರ ಆನಂದಧಾಮ, ವಾತ್ಸಲ್ಯ ಹಿರಿಯ ವನಿತೆಯರ ವಸತಿ ನಿಲಯ ಇವರ ಸಂಯುಕ್ತಾ ಶ್ರಯದಲ್ಲಿ ನಗರದ ಆನಂದ ಧಾಮ ವೃದ್ಧಾಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾ ಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೈಕ್ಷಣಿಕವಾಗಿ ಏಷ್ಟೇ ಪದವಿ ಗಳಿಸಿದರೂ ಹಿರಿಯರ ಅನುಭವದ ಮುಂದೆ ಅವು ಕೇವಲ ಪದವಿಗಳಾಗುತ್ತವೆ. ಹಾಗಾಗಿ ಹಿರಿಯರ ಮಾರ್ಗದರ್ಶನದಲ್ಲಿ ಯುವ ಪೀಳಿಗೆ ಹೆಜ್ಜೆ ಹಾಕುವ ಜತೆಗೆ ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ವೃದ್ಧರನ್ನು ಗೌರವದಿಂದ ಕಾಣಬೇಕು. ಇಂದಿನ ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ ವೃದ್ಧಿಯಾಗಲು ಹಿರಿಯರ ಒಡನಾಟ ಬಹಳ ಮುಖ್ಯ ಎಂದ ಅವರು, ಈ ವೃದ್ಧಾಶ್ರಮದಲ್ಲಿನ ಹಿರಿಯರ ಕಣ್ಣಿನ ಆರೋಗ್ಯದ ಕಾಳಜಿ ಮಾಡಲು ಸದಾ ಮುಂದೆ ಇರುತ್ತೇನೆ ಎಂದು ತಿಳಿಸಿದರು.
ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್ ಮಾತನಾಡಿ, ಸಮಾಜದಲ್ಲಿ ಹಿರಿಯರ ಪ್ರೀತಿ-ವಾತ್ಸಲ್ಯ ಮರೆಯಾಗುತ್ತಿದೆ ಎಂದು ಶೋಚಿಸಿದರು.
ತಂದೆ-ತಾಯಿಯರು ಬದುಕಿದ್ದಾಗಲೇ ಅವರನ್ನು ಪ್ರೀತಿ ಹಾಗೂ ಕಾಳಜಿಯಿಂದ ಕಾಣಬೇಕು ಎಂದ ಅವರು, ಈ ಸಂಸ್ಥೆಯ ಬೆಳವಣಿಗೆಗೆ ಆರ್ಥಿಕ ನೆರವು ನೀಡುತ್ತೇನೆ ಎಂದು ಹೇಳಿದರು.
ಸುಧಾ ಪ್ರಸಾದ್ ಪ್ರಾಸ್ತಾವಿಕ ಮಾತನಾ ಡಿದರು. ಸುಷ್ಮಾ ಮೋಹನ್ ಸ್ವಾಗತಿಸಿದರು.
ಈ ವೇಳೆ ಸ್ತ್ರೀ ರೋಗ ತಜ್ಞೆ ಡಾ. ರಶ್ಮಿ ಸುಬೋಧ್ ಶೆಟ್ಟಿ, ವನಿತಾ ಸಮಾಜದ ಅಧ್ಯಕ್ಷೆ ಪದ್ಮ ಪ್ರಕಾಶ್, ಆಶ್ರಯ ಸಂಸ್ಥೆಯ ಅಧ್ಯಕ್ಷೆ ಸುನೀತ ವೀರನಾರಾಯಣ, ಕಾರ್ಯದರ್ಶಿ ಟಿ.ಎಸ್. ಶೈಲಜಾ, ವಾತ್ಸಲ್ಯ ಸಂಸ್ಥೆಯ ಅಧ್ಯಕ್ಷೆ ಮಮತಾ ಚಂದ್ರಶೇಖರ್, ಕಾರ್ಯದರ್ಶಿ ದೀಪಾ ಪ್ರಶಾಂತ್ ಶೆಟ್ಟಿ ಮತ್ತಿತರರಿದ್ದರು.