ದಾವಣಗೆರೆ ಸ್ಮಾರ್ಟ್ ಜನತೆಗೆ ಗುಂಡಿ ಭಾಗ್ಯ

ದಾವಣಗೆರೆ ಸ್ಮಾರ್ಟ್ ಜನತೆಗೆ ಗುಂಡಿ ಭಾಗ್ಯ

ರಸ್ತೆಯಲ್ಲಿ ಗುಂಡಿಗಳೋ … ಗುಂಡಿಗಳ ನಡುವೆ ರಸ್ತೆಯೋ..? 

ದಾವಣಗೆರೆ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ದಾವಣಗೆರೆ ನಗರದ ಹಲವಾರು ರಸ್ತೆಗಳಲ್ಲಿ ಗುಂಡಿಗಳು ಬಾಯ್ತೆರೆದಿವೆ.

ದಾವಣಗೆರೆ ಸಿಂಗಾಪುರವಾಗುತ್ತದೆಂಬ ಕನಸು ಹೊತ್ತು ಓಡಾಡುವ ವಾಹನ ಸವಾರರಿಗೆ ಕೆಸರಿನ ಸಿಂಚನವಾಗುತ್ತಿದೆ. 

ಪ್ರಮುಖ ರಸ್ತೆಯಾದ ಪೂನಾ-ಬೆಂಗಳೂರು ರಸ್ತೆಯ ಆರ್.ಹೆಚ್ ಛತ್ರದ ಬಳಿಯ ವೃತ್ತದಲ್ಲಿ  ಮನುಷ್ಯನನ್ನೇ ಹೂಳುವಷ್ಟು ದೊಡ್ಡದಾಗಿ ರಸ್ತೆ ಬಾಯ್ತೆರೆದಿದೆ. ಇಲ್ಲಿನ ವೃತ್ತ ದೊಡ್ಡ ಗುಂಡಿಗಳಿಂದಲೇ ತುಂಬಿದೆ. ಪ್ರಯಾಣಿಕರು ಓಡಾಟಕ್ಕೆ ಸಂಕಷ್ಟಪಡುವಂತಾಗಿದೆ. ಮಳೆಗಾಲ ಪ್ರಾರಂಭವಾದಾಗ ಚಿಕ್ಕದಾಗಿದ್ದ ಗುಂಡಿಗಳು ಈಗ ವಿಸ್ತಾರವಾಗಿದ್ದು, ವಾಹನಗಳ ಟಯರ್​ಗಳಿಗೆ ಕುತ್ತು ತರುತ್ತಿವೆ. 

ಹದಡಿ ರಸ್ತೆಯಲ್ಲಿ ಬರುವ ವೃತ್ತಗಳ ಬಳಿ ಗುಂಡಿಗಳದ್ದೇ ಕಾರುಬಾರು. ಜಯದೇವ ವೃತ್ತದಿಂದ ಪ್ರವಾಸಿ ಮಂದಿರ ರಸ್ತೆ ಪೂರ್ಣ ಹಾಳಾಗಿದೆ. ವಿದ್ಯಾರ್ಥಿ ಭವನ ವೃತ್ತದ ಬಳಿ ವಾಹನ ಸವಾರರು ಜೀವ ಕೈಯಲ್ಲಿಡಿದು ವಾಹನ ಚಲಾಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಭರಣಿ ಹೋಟೆಲ್ ಮುಂಭಾಗ ರಸ್ತೆಯೇ ಮಾಯವಾಗಿದೆ ಎಂಬಂತಾಗಿದೆ.

ಹತ್ತು ನಿಮಿಷಗಳ  ಪ್ರಯಾಣಕ್ಕೆ ಈಗ ಒಂದು ತಾಸು ಬೇಕಾಗಿದೆ. ನಗರಕ್ಕೆ ಆಗಮಿಸುತ್ತಿರುವ ಗ್ರಾಮೀಣರು, ಇಲ್ಲಿನ ಜನಪ್ರತಿನಿಧಿಗಳ ಬಗ್ಗೆ ಹಿಡಿಶಾಪ ಹಾಕುತ್ತ ತೆರಳುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಮಳೆಯೂ ಕೂಡಾ ಹೆಚ್ಚಾಗಿರುವ ಕಾರಣ ಈ ಹೊಂಡಗಳಲ್ಲಿ ನೀರು ತುಂಬಿದ್ದು, ಸಾಕಷ್ಟು ವಾಹನಗಳು ನಿತ್ಯವೂ ಅಪಘಾತಕ್ಕೆ ಒಳಗಾಗುತ್ತಿವೆ. ರಾತ್ರಿ ವೇಳೆಯಂತೂ ಇಲ್ಲಿ ವಾಹನ ಚಲಾಯಿಸುವುದೇ ಸಾಹಸದ ಕೆಲಸವಾಗಿದೆ.

ಕಳೆಪೆ ಡಾಂಬರು ಬಳಸಿ ಕಾಮಗಾರಿ ನಡೆಸಿದರ ವಿರುದ್ಧ ಜನರು ಹಿಡಿಶಾಪ ಹಾಕಿದ್ದಾರೆ. ಡಾಂಬರೀಕರಣಕ್ಕೆ ಬಳಸಿದ್ದ ಜಲ್ಲಿಕಲ್ಲು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಗುಂಡಿಗಳನ್ನು ಕಾಣುವ ವಾಹನ ಸವಾರರು ಸಿಡಿಮಿಡಿ ಎನ್ನುತ್ತಿದ್ದಾರೆ. ಗುಂಡಿಗಳ ನಗರದಲ್ಲಿ ದ್ವಿಚಕ್ರವಾಹನ ಚಲಾಯಿಸುವ ಮಹಿಳೆಯರ ಪಾಡಂತೂ ದೇವರಿಗೇ ಪ್ರೀತಿ ಎಂಬಂತಾಗಿದೆ.

ಈರುಳ್ಳಿ ಮಾರ್ಕೇಟ್ ಬಳಿಯ ರೈಲ್ವೇ ಬ್ರಿಡ್ಜ್  ಕೆಳ ರಸ್ತೆಯಲ್ಲಂತೂ ಓಡಾಡಲು ಸಾಧ್ಯವೇ ಇಲ್ಲ. ಎಪಿಎಂಸಿ ಮೇಲ್ಸೇತುವೆ ಅಸ್ತಿ ಪಂಜರದಂತಾಗುತ್ತಿದೆ. ಎರಡೂ ಬದಿಯಲ್ಲಿ ಗುಂಡಿಗಳು ಬಾಯ್ತೆರೆದು ಬಲಿಗಾಗಿ ಕಾಯುತಿವೆ.

ಒಟ್ಟಿನಲ್ಲಿ ನಗರ ಸಾರಿಗೆ, ಆಟೋ, ದ್ವಿಚಕ್ರ ವಾಹನಗಳಲ್ಲಿ ಓಡಾಡುವ ವೃದ್ಧರು, ಮಕ್ಕಳು ಮೈ-ಕೈ ನೋವು, ಸೊಂಟು ನೋವು ಕಾಣಿಸಿಕೊಳ್ಳಲು ರಸ್ತೆಯಲ್ಲಿನ ಗುಂಡಿಗಳು ಕೊಡುಗೆ ನೀಡುತ್ತಿವೆ. ರೈಲ್ವೇ ಹಳಿ ಆಚೆಯ ಹಳೆಯ ನಗರದ ರಸ್ತೆಗಳದ್ದೂ ಇದೇ ಕಥೆಯಾಗಿದೆ.

ನಗರದಲ್ಲಿನ ಸಿಮೆಂಟ್ ರಸ್ತೆಗಳಲ್ಲಿ ಮಾತ್ರ ಜನರು ತುಸು ನಿರಾಳವಾಗಿ ಓಡಾಡಬಹುದಾಗಿದೆ.

– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ, [email protected]

error: Content is protected !!