ಮೌಢ್ಯ ನಿವಾರಣೆ ಹೆಸರಲ್ಲಿ ನಂಬಿಕೆ ನಾಶ ಸಲ್ಲ

ಮೌಢ್ಯ ನಿವಾರಣೆ ಹೆಸರಲ್ಲಿ ನಂಬಿಕೆ ನಾಶ ಸಲ್ಲ

ಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ತರಳಬಾಳು ಜಗದ್ಗುರುಗಳು

ಮಾಯಕೊಂಡ, ಅ.20-  ಮೌಢ್ಯ ಮತ್ತು ಕಂದಾಚಾರ ನಿವಾರಣೆ ನೆಪದಲ್ಲಿ ನಂಬಿಕೆ ಹಾಳು ಮಾಡಬಾರದು ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಸಮೀಪದ ಓಬಣ್ಣನಹಳ್ಳಿಯಲ್ಲಿ ಬಸವೇಶ್ವರರ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.

 ಕಂದಾಚಾರ, ಮೌಢ್ಯ ಸಮಾಜಕ್ಕೆ ಅಂಟಿದ ಜಾಡ್ಯ. ಕಂದಾಚಾರ ಭಾರತದಲ್ಲಿ ಮಾತ್ರವಲ್ಲ ಇಂಗ್ಲೆಂಡ್ ಸೇರಿ ವಿಶ್ವಾದ್ಯಂತ ಇದೆ. ಕೆಲ ದೇಶಗಳಲ್ಲಿ ಇಂದಿಗೂ ಹದಿಮೂರನೇ ಅಂತಸ್ತಿನ ಮಹಲು ಕಟ್ಡಿಲ್ಲ.  ನಂಬಿಕೆ ಮತ್ತು ಮೌಢ್ಯದ ಮಧ್ಯೆ ನಂಬಿಕೆಯ ತೆಳುಗೆರೆ ಇದೆ. ಕೆಲವರ ಮೌಡ್ಯ ಕೆಲವರಿಗೆ ನಂಬಿಕೆ. ಮೌಢ್ಯದಿಂದ ವ್ಯಕ್ತಿಗೆ ತೊಂದರೆಯಾದರೆ ಅದನ್ನು ತಿದ್ದಲು ಯತ್ನಿಸಬಹುದು. ಯಾರಿಗೂ ಅನ್ಯಾಯವಾಗದ ನಂಬಿಕೆಯನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಎಂದರು.

ಎಲ್ಲರಿಗೂ ಬಸವಾದಿ ಶರಣರ ಚಿಂತನೆ ತಲುಪಿಸುವ ಹಿರಿಯ ಗುರುಗಳ  ಆಸೆಯಂತೆ ವೆಬ್ ಅಪ್ಲಿಕೇಶನ್ ತೆರೆದಿದ್ದೇವೆ.‌ ಎಲ್ಲಾ ಶರಣರ ವಚನ ಒಂದೆಡೆ ಸಿಗುತ್ತಿವೆ. ತಾಯಂದಿರು ಮನೆಯಲ್ಲಿ ಶರಣರ ವಚನ ಕಲಿಸಬೇಕು ಎಂದು ಕರೆ ನೀಡಿದರು.

ದೀಪ ಹಚ್ಚುವುದೂ ಎಣ್ಣೆಯ ಅಪವ್ಯಯ, ಕಂದಾಚಾರ ಎಂದೂ ಟೀಕಿಸಿದವರೂ ಇದ್ದಾರೆ. ಕತ್ತಲಿನಿಂದ ಬೆಳಕಿನ ಕಡೆಗೆ ಕರೆದೊಯ್ಯುವುದೇ ದೀಪ ಹಚ್ಚುವ ಸಂಕೇತ ಎಂದರು.

ಚರಂತೇಶ್ವರ ಮಠದ ಶರಣ ಬಸವ ದೇವರು ಮಾತನಾಡಿ, ಹಳ್ಳಿಗಳಲ್ಲಿ ಬಸವಣ್ಣನ ಪ್ರತಿಮೆಯಾಗಬೇಕು ಎಂಬುದು ಲಿಂಗೈಕ್ಯ ಶಿವಕುಮಾರ ಸ್ವಾಮಿಗಳ ಕನಸಾಗಿತ್ತು ಎಂದರು.

ಆನಗೋಡು ತಿಪ್ಪೇಸ್ವಾಮಿ, ವಸಂತ ಕುಮಾರ್, ಏಕಂತಪ್ಪ, ಅಣ್ಣಾಪುರ ಶಿವಕುಮಾರ್ , ಕೊಡಗನೂರು ಕೆರೆಗೆ 22ಕೆರೆ ಏತ ನೀರಾವರಿ ಯೋಜನೆ ನೀರು ಬರುತ್ತಿಲ್ಲ. ಸಾಸ್ವೆಹಳ್ಳಿ ಯೋಜನೆಯಡಿ ಕೊಡಗನೂರು ಕೆರೆಗೆ ಪೈಪ್ಲೈನ್ ಮಾಡಿಸಲು ಶ್ರೀಗಳು ಮುಂದಾಗಬೇಕು.ಈಗಾಗಲೇ ಸಭೆ ನಡೆಸಿ, ಮುದೇಗೌಡ್ರ ಗಿರೀಶ್ ಅವರೊಂದಿಗೆ ಚರ್ಚಿಸಲಾಗಿದೆ.  ಈಗ 4.5 ಕಿ ಮೀ ಪೈಪ್‌ಲೈನ್‌ಗೆ  ಹಣ ಮಂಜೂರಾಗಿದೆ. ಬಾಕಿ 12 ಕಿ.ಮೀ ಅನುದಾನ ಬರಬೇಕಿದೆ ಎಂದು ತಿಳಿದುಬಂದಿದೆ. ಕೆರೆ ಸಮಿತಿಗಳು ನೊಂದಾವಣೆಗೆ ಅರ್ಹವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ನೊಂದಣಿಗೆ ತೊಡಕಾಗಿದೆ ಎಂದು ಶ್ರೀಗಳಿಗೆ ಮನವರಿಕೆ ಮಾಡಿದರು.

ಗ್ರಾಮಕ್ಕೆ ಆಗಮಿಸಿದ ಶ್ರೀಗಳಿಗೆ ಭಕ್ತರು ನಂದಿಕೋಲು ಕುಣಿತ, ನಾಸಿಕ್ ಡೋಲು, ಜಯಘೋಷದೊಂದಿಗೆ  ಸ್ವಾಗತಿಸಿದರು.

ಗ್ರಾಮದ ಮುಖಂಡ ಒ.ಡಿ. ಸದಾಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನಾನಾಯ್ಕನಹಳ್ಳಿ ಮುರುಗೇಂದ್ರಪ್ಪ, ರೈತ ಮುಖಂಡ ಹೊನ್ನೂರು ಮುನಿಯಪ್ಪ, ಮುಖಂಡರಾದ ಮಾಜಿ ಉಪಾಧ್ಯಕ್ಷ ಚಂದ್ರಶೇಖರ್,  ಡಿ.ಕೆ. ರಮೇಶ್, ಪ್ರಸನ್ನಕುಮಾರ್, ಓ.ಸಿ.‌ ಮಂಜುನಾಥ, ಓ.ಬಿ. ಸಿದ್ದೇಶ್, ಕೆ.ಜಿ. ಶಿವಕುಮಾರ್, ಅಶೋಕ್, ಸುರೇಶ್,  ರುದ್ರೇಶ್ ಇದ್ದರು.

error: Content is protected !!