ಹೊನ್ನಾಳಿಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಡಿ.ಜಿ. ಶಾಂತನಗೌಡ
ಹೊನ್ನಾಳಿ, ಅ.4- ನಾಡಿನ ಮಠಾಧೀಶರು ಗಳು ಗಣಪತಿ ಹಬ್ಬದ ಸಂದರ್ಭದಲ್ಲಿ ಡಿಜೆ ಸಂಸ್ಕೃತಿ ಕೈಬಿಡುವಂತೆ ಯುವ ಸಮೂಹಕ್ಕೆ ಬುದ್ಧಿ ಮಾತು ಹೇಳಬೇಕು. ಇದು ಮಠಾಧೀಶರುಗಳಿಂದ ಮಾತ್ರವೇ ಸಾಧ್ಯವಿದ್ದು ರಾಜಕಾರಣಿಗಳಿಂದಲ್ಲವೆಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಪಟ್ಟಣದ ಹಿರೇಕಲ್ಮಠದ ಶ್ರೀ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮಗಳಲ್ಲಿನ ದೇವಸ್ಥಾನದ ಉದ್ಘಾಟನೆ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಮಠಾಧೀಶರನ್ನು ಆಹ್ವಾನ ಮಾಡುವ ಸಂದರ್ಭದಲ್ಲಿ ಗಣಪತಿ ಮೂರ್ತಿಯ ವಿಸರ್ಜನಾ ಸಂದರ್ಭದಲ್ಲಿ ಡಿಜೆ ಸಂಸ್ಕೃತಿ ಕೈ ಬಿಟ್ಟರೆ ಮಾತ್ರವೇ ಧಾರ್ಮಿಕ ಸಭೆ-ಸಮಾರಂಭಗಳಿಗೆ ಬರುವುದಾಗಿ ತಿಳಿಸಿದರೆ ಈ ಪಾಶ್ಚಿಮಾತ್ಯ ಡಿಜೆ ಸಂಸ್ಕೃತಿ ನಿರ್ಮೂಲನೆ ಮಾಡಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಡಿಜೆ ಬದಲಾಗಿ ಡೊಳ್ಳು, ಭಜನೆ, ಗ್ರಾಮೀಣ ಸೊಗಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತೆ ಭಕ್ತ ಸಮೂಹಕ್ಕೆ ಮಾರ್ಗದರ್ಶನ ನೀಡಬೇಕಾಗಿ ಅವರು ವಿನಂತಿಸಿದರು.
ಗಣಪತಿ ಹಬ್ಬವು ಈ ಹಿಂದೆ ಸ್ವಾತಂತ್ರ್ಯದ ಸಂದರ್ಭದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಲು ಹಮ್ಮಿಕೊಳ್ಳಲಾಗಿತ್ತು. ಆದರೆ ಇಂದು ಇದೇ ಹಬ್ಬದ ಸಂದರ್ಭದಲ್ಲಿ ಯುವಕರು ಕುಡಿತ, ಗುಟ್ಕಾ ಮತ್ತಿತರೆ ಮಾದಕ ವ್ಯಸನಗಳನ್ನು ಸೇವಿಸಿ ನೃತ್ಯ ಮಾಡುತ್ತಾ ತಮ್ಮ ಉತ್ತಮ ಭವಿಷ್ಯಕ್ಕೆ ಕಲ್ಲು ಹಾಕಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹಿರೇಕಲ್ಮಠದ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀ ಮಠದಲ್ಲಿ ದಸರಾ ಹಬ್ಬದ ಪ್ರಯುಕ್ತ ನಾಡಿನ ಒಳಿತಿಗಾಗಿ ಹೋಮ-ಹವನ,ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳ ಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಚನ್ನಪ್ಪ ಸ್ವಾಮಿ ವಿದ್ಯಾಪೀಠದ ಕಾರ್ಯ ದರ್ಶಿ ಚನ್ನಯ್ಯ ಬೆನ್ನೂರು ಮಠ, ಶಿಮುಲ್ ನಿರ್ದೇಶಕ ಬಿ.ಜಿ.ಹನುಮನಹಳ್ಳಿ ಬಸವರಾಜಪ್ಪ, ಕಾಂಗ್ರೆಸ್ ಮುಖಂಡ ಬಿ.ಸಿದ್ದಪ್ಪ, ಟಿ.ಬಿ.ವೃತ್ತ ದಲ್ಲಿನ ಕಸಬಾ ಸೊಸೈಟಿಯ ಅಧ್ಯಕ್ಷ ದಿಡಗೂರು ಎ.ಜಿ.ಪ್ರಕಾಶ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ ಮಾತನಾಡಿದರು. ಹರಿಹರದ ನಿವೃತ್ತ ಪ್ರಾಚಾರ್ಯ ಎಚ್.ಎ.ಭಿಕ್ಷಾವರ್ತಿ ಮಠ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಕುರಿತಾಗಿ ಉಪನ್ಯಾಸ ನೀಡಿದರು. ಶ್ರೀ ಮಂಜುನಾಥ ದೇವರು ದೇವಿ ಪುರಾಣ ವಾಚಿಸಿದರು.
ಓಂಕಾರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು, ಸವಳಂಗ ಕಲ್ಲೇಶ್ವರ ಮಠದ ಅಕ್ಕಮಹಾದೇವಿ ಮಾತಾಜಿ, ಕಾಂಗ್ರೆಸ್ ಮುಖಂಡರಾದ ಎಚ್.ಎ. ಉಮಾಪತಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಶಿವಯೋಗಿ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯರಾದ ಪುಷ್ಪಾರವೀಶ್, ವನಜಾಕ್ಷಮ್ಮ, ಚನ್ನಪ್ಪಸ್ವಾಮಿ ವಿದ್ಯಾಪೀಠದ ನಿರ್ದೇಶಕ ಕೋರಿ ಮಲ್ಲಿಕಾರ್ಜುನಪ್ಪ, ಮಠದ ವ್ಯವಸ್ಥಾಪಕ ಎಂ.ಪಿ.ಎಂ.ಚನ್ನಬಸಯ್ಯ, ಪತ್ರಕರ್ತ ಎಂ.ಪಿ.ಎಂ.ವಿಜಯಾನಂದ ಕುಮಾರಸ್ವಾಮಿ, ಸವಿತಾ ಉಮೇಶ್ ನಾಡಿಗ್ ಮತ್ತಿತರರು ಉಪಸ್ಥಿತರಿದ್ದರು.
ಕಡದಕಟ್ಟೆ ತಿಮ್ಮಪ್ಪ ಸಂಗೀತ ಸಂಯೋಜಿಸಿ ಹಾಡಿರುವ ಅಂಗದಲ್ಲಿ ಲಿಂಗಧರಿಸಿ ಧ್ವನಿ ಮುದ್ರಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು.