ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಚಿತ್ರ, ಶಿಲ್ಪ, ವ್ಯಂಗ್ಯಚಿತ್ರ, ಕ್ಯಾಲಿಗ್ರಫಿಗಳ ಕೌಶಲ್ಯ ಪ್ರದರ್ಶನ
ದಾವಣಗೆರೆ, ಸೆ. 25 – ನಗರದ ದೃಶ್ಯಕಲಾ ಮಹಾವಿದ್ಯಾಲಯದ ವಜ್ರ ಮಹೋತ್ಸವದ ಪ್ರಯುಕ್ತ ಭಾನುವಾರ ಆಯೋಜಿಸಲಾಗಿದ್ದ ಕಲಾ ಪ್ರಾತ್ಯಕ್ಷಿಕೆಯಲ್ಲಿ, ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳು ಚಿತ್ರಗಳು, ಶಿಲ್ಪ, ವ್ಯಂಗ್ಯಚಿತ್ರ ಹಾಗೂ ಕ್ಯಾಲಿಗ್ರಫಿ ಮೂಲಕ ತಮ್ಮ ಕಲೆಯನ್ನು ಅನಾವರಣಗೊಳಿಸಿದರು.
ದಾವಣಗೆರೆ ಕಲಾಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಸ್ಥಳದಲ್ಲೇ ಚಿತ್ರ ಹಾಗೂ ವ್ಯಂಗ್ಯಚಿತ್ರಗಳನ್ನು ರಚಿಸುವ ಹಾಗೂ ಮಣ್ಣಿನ ಶಿಲ್ಪ ರೂಪಿಸುವ ಮೂಲಕ ಹಾಲಿ ವಿದ್ಯಾರ್ಥಿಗಳಿಗೆ ತಮ್ಮ ಅನುಭವದ ಮಾರ್ಗದರ್ಶನ ನೀಡಿದರು.
500ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಸಂಭ್ರಮದಿಂದ ದಿನವಿಡೀ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಮಹಾವಿದ್ಯಾಲಯಕ್ಕೆ 60 ವರ್ಷ ತುಂಬಿದ ಸಂಕೇತವಾಗಿ, 60 ಸಸಿಗಳನ್ನು ನೆಡಲಾಗಿತ್ತು. ಈ ಸಸಿಗಳಿಗೆ ಮಹಾವಿದ್ಯಾಲಯ ಆರಂಭವಾದ ಇಲ್ಲಿಯವರೆಗಿನ ವರ್ಷಗಳ ಫಲಕ ಅಳವಡಿಸಲಾಗಿತ್ತು. ಆಯಾ ವರ್ಷದ ಹಳೆಯ ವಿದ್ಯಾರ್ಥಿಗಳು ಸಸಿಗಳ ಎದುರು ಚಿತ್ರ ತೆಗೆಸಿಕೊಳ್ಳುವ ಮೂಲಕ ಸಂಭ್ರಮಿಸಿದರು. ಹಳೆಯ ಮಿತ್ರರನ್ನು ಭೇಟಿ ಮಾಡಿ ಕುಶಲೋಪರಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಅಬ್‌ಸ್ಟ್ರಾಕ್ಟ್ ಮಾದರಿಯ ಚಿತ್ರ ರೂಪಿಸುವಲ್ಲಿ ತೊಡಗಿಕೊಂಡಿದ್ದ 2005ರ ತಂಡದ ಹಿರಿಯ ವಿದ್ಯಾರ್ಥಿ ಪ್ರವೀಣ್ ಕುಮಾರ್ ಡಿ. ಜಿಂಗಾಡೆ, ಮುಂಬೈ ಹಾಗೂ ದೆಹಲಿಯಲ್ಲಿ ಪ್ರತಿ ವಾರ ಹೊಸ ಹೊಸ ಕಲಾ ಪ್ರದರ್ಶನಗಳು ನಡೆಯುತ್ತವೆ. ಅಲ್ಲಿ ವಿದ್ಯಾರ್ಥಿಗಳು ಕಲಿಯಲು ಅಪಾರ ಅವಕಾಶ ಇರುತ್ತದೆ. ದಾವಣಗೆರೆಯಲ್ಲಿ ಹಳೆಯ ವಿದ್ಯಾರ್ಥಿಗಳು ಸಂಗಮಿಸಿರುವ ಕಾರಣ ವಿದ್ಯಾರ್ಥಿಗಳು ಕಲಿಯಲು ಅಂತಹ ಅವಕಾಶ ಸಿಕ್ಕಂತಾಗಿದೆ ಎಂದರು.
ಧಾರವಾಡದ ಹಿರಿಯ ಕಲಾವಿದ ಶಶಿಧರ ಮಹದೇವಪ್ಪ ಲೋಹಾರ್ ಮಾತನಾಡಿ, ಬೆಂಗಳೂರಿನ ಕಲಾ ಶಾಲೆಗಳಲ್ಲಿ ಉದ್ಯೋಗಕ್ಕಾಗಿ ಕ್ಯಾಂಪಸ್ ಸಂದರ್ಶನ ನಡೆಯುತ್ತದೆ. ಇದರಿಂದ ಯುವ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲೂ ಅಂತಹ ವ್ಯವಸ್ಥೆ ಮಾಡಬೇಕು ಎಂದರು.
ಇದರ ಜೊತೆಗೆ ದೃಶ್ಯಕಲಾ ಮಹಾವಿದ್ಯಾಲಯ ದಲ್ಲಿರುವ ಕಲಾ ಗ್ಯಾಲರಿ ಹೆಚ್ಚು ಪ್ರಚಾರ ಪಡೆಯಬೇಕು. ಆಗ ಕಲೆ ಹಾಗೂ ಕಲಾವಿದರು ಹೆಚ್ಚು ಜನರಿಗೆ ತಲುಪಲು ಸಾಧ್ಯವಾಗುತ್ತದೆ ಎಂದರು.
ಮುಧೋಳದ ರವಿ. ಎಲ್. ಪೂಜಾರಿ ಮಾತನಾಡಿ, 1997ರಲ್ಲಿ ಈ ಕಾಲೇಜಿನಲ್ಲಿ ಪದವಿ ಪಡೆದಿದ್ದೆ. ಈಗ ವೃತ್ತಿಪರ ವ್ಯಂಗ್ಯಚಿತ್ರಕಾರನಾಗಿದ್ದೇನೆ. ಸಮಾರಂಭಗಳಲ್ಲಿ ವ್ಯಕ್ತಿಗಳ ವ್ಯಂಗ್ಯಚಿತ್ರ ರೂಪಿಸುತ್ತೇನೆ. ಮೂರು ಗಂಟೆಯ ಶ್ರಮಕ್ಕೆ 15ರಿಂದ 20 ಸಾವಿರ ರೂ.ಗಳ ಸಂಭಾವನೆ ದೊರೆಯುತ್ತಿದೆ ಎಂದರು.
2009ರ ತಂಡದ ಮಹಲಿಂಗ ಶಂಕರ ನಿಪ್ಪಾಣಿ ಮಾತನಾಡಿ, ಬೆಂಗಳೂರಿನಂತಹ ನಗರಗಳಲ್ಲಿ ಕಲಾವಿದರಿಗೆ ಹೆಚ್ಚಿನ ಬೇಡಿಕೆ ಇದೆ.
ಡಿಜಿಟಲ್ ತಂತ್ರಜ್ಞಾನ ಹಾಗೂ ಕಂಪ್ಯೂಟರ್‌ಗಳು ಅವಕಾಶದ ಬಾಗಿಲು ತೆರೆದಿವೆ. ಜಾಹೀರಾತು, 3ಡಿ, ವಿಎಫ್ಎಕ್ಸ್ ಮುಂತಾದ ವಲಯಗಳಲ್ಲಿ ಅವಕಾಶಗಳಿವೆ. ಕಲಾ ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಹುಡುಕಿಕೊಂಡು ಮುಂದೆ ಬರಬೇಕಿದೆ ಎಂದರು.