32ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಸಾಣೇಹಳ್ಳಿ, ಸೆ.25- ಧೀರತನವನ್ನು ಮೈಗೂಡಿಸಿ ಕೊಂಡಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳದು ಪ್ರೀತಿಸುವ ಹೃದಯವಾಗಿತ್ತು. ಜಾತಿ, ಮತ, ಲಿಂಗಭೇದ ಮಾಡದೇ ಎಲ್ಲರನ್ನೂ ಪ್ರೀತಿಸುವ ಹೃದಯ ವೈಶಾಲ್ಯತೆ ಅವರಲ್ಲಿತ್ತು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀಮಠದ ಆವರಣದಲ್ಲಿ ನಡೆದ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 32ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಯಾರನ್ನೂ ದ್ವೇಷ ಭಾವನೆಯಿಂದ ಕಾಣುವಂಥ ವರಲ್ಲ. ವೈರಿಯನ್ನೂ ಕೂಡ ಪ್ರೀತಿಸಬೇಕು ಎನ್ನುವ ಭಾವನೆಯನ್ನು ಬೆಳೆಸಿಕೊಂಡಂಥವರು. ಬಹುಶಃ ಅವರ ಪ್ರೇಮ ಸ್ಪರ್ಶಕ್ಕೆ ಒಳಗಾದವರು ಎಂದೂ ಅವರನ್ನು ಮರೆಯಲಿಕ್ಕೆ ಸಾಧ್ಯವಿಲ್ಲ. ಅವರ ಮನಸ್ಸು ವಜ್ರಕ್ಕಿಂತ ಕಠಿಣ, ಹೂವಿಗಿಂತ ಕೋಮಲ. ಅದು ಸಂತರ ಲಕ್ಷಣ. ಯಾರು ನಿಜವಾದ ಸಂತ ಆಗ್ತಾನೋ ಅವನು ವಜ್ರಕ್ಕಿಂತ ಕಠಿಣವಾದ ತೀರ್ಮಾನಗಳನ್ನು ತೆಗೆದುಕೊಳ್ತಾ ಹೋಗುತ್ತಾನೆ. ಆ ತೀರ್ಮಾನಗಳು ಪದೇ ಪದೇ ಬದಲಾವಣೆ ಮಾಡುವಂಥವುಗಳಲ್ಲ. ಅವರು ತೆಗೆದುಕೊಳ್ಳುವ ತೀರ್ಮಾನಗಳು ಆ ಕ್ಷಣಕ್ಕೆ ಜನರಿಗೆ ಒಪ್ಪಿಗೆ ಆಗದೇ ಇರಬಹುದು, ಆದರೆ ಕ್ರಮೇಣ ಅವು ಜನಮುಖಿಯಾದ, ಸಮಾಜ ಮುಖಿಯಾದ, ಲೋಕಲ್ಯಾಣ ಕಾರ್ಯ ಆಗಿರುತ್ತಿದ್ದವು ಎಂದು ಅವರು ಸ್ಮರಿಸಿದರು.
ಮಠಕ್ಕೆ ಹಾಗೂ ತಮಗಾಗದವರನ್ನು ಪ್ರೀತಿಯಿಂದ ಕರೆದು ಜೊತೆಗೆ ಕೂರಿಸಿಕೊಂಡು ಪ್ರಸಾದ ಮಾಡುತ್ತಿದ್ದರು. ಭಕ್ತರನ್ನು ಗೌರವಿಸು ತ್ತಿದ್ದರು, ಶಿಕ್ಷಿಸುತ್ತಿದ್ದರು. ಶಿಕ್ಷೆಯ ಉದ್ದೇಶ ಅವರ ಮನಃಪರಿವರ್ತನೆಗಾಗಿ. ಬಹುಶಃ ಒಬ್ಬ ಗುರುವಿಗೆ ಇರಬೇಕಾದ ಗುಣ ಇದು. ಪೀಠಕ್ಕೆ ಅಂಟಿಕೊಳ್ಳದೇ ಆದರ್ಶಗಳಿಗಾಗಿ, ತತ್ವಗಳಿಗಾಗಿ. ನೀತಿಗಾಗಿ ಅಂಟಿಕೊಂಡವರು. ಶ್ರೀಗಳವರಿಗೆ ಪೀಠ ಮುಖ್ಯವಾಗದೇ ಆದರ್ಶ ಮುಖ್ಯವಾಗಿತ್ತು. ಆದರ್ಶಗಳನ್ನು ಆಚರಣೆಗೆ ತರಲಿಕ್ಕೆ ಪೀಠವನ್ನು ಸದ್ಭಳಕೆ ಮಾಡಿಕೊಂಡರು ಎಂದರು.
ಶಿವ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಸಾಣೇಹಳ್ಳಿಯ ಕೃಷ್ಣಮೂರ್ತಿ, ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಇರದೇ ಹೋಗಿದ್ದರೆ ಸಾಣೇಹಳ್ಳಿಯಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಆಸ್ಪತ್ರೆ, ಮಠ ನೋಡಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಯಾವುದೋ ಒಂದು ಸೌಲಭ್ಯ ವಂಚಿತ ಹಳ್ಳಿಯಾಗಿ ಇವತ್ತಿಗೂ ಉಳಿದುಕೊಳ್ಳುತ್ತಿತ್ತೇನೋ. ಆದರೆ ಶಿವಕುಮಾರ ಶ್ರೀಗಳ ಆಶೀರ್ವಾದ ಹಾಗೂ ಪಂಡಿತಾರಾಧ್ಯ ಶ್ರೀಗಳ ಆಶೀರ್ವಾದದ ಫಲವಾಗಿ ಇಂದು ಸಾಣೇಹಳ್ಳಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಾನ್ಯತೆ ಪಡೆಯಲಿಕ್ಕೆ ಸಾಧ್ಯವಾಗದೆ ಎಂದರು.
ಹಳ್ಳಿ ಹಳ್ಳಿಗಳಲ್ಲೂ ಶಾಲೆಗಳನ್ನು ತೆರೆದು ಎಲ್ಲರಿಗೂ ಶಿಕ್ಷಣ ದೊರಕುವಂತೆ ಮಾಡಿದರು. ಅಕ್ಕನ ಬಳಗ, ಅಣ್ಣನ ಬಳಗವನ್ನು ಸ್ಥಾಪಿಸಿ ಶರಣರ ವಿಚಾರಗಳನ್ನು ಪ್ರಸಾರ ಮಾಡಿದರು. ಜಾತಿ ಪದ್ಧತಿಯ ವಿರುದ್ಧ ಬಸವಣ್ಣನವರು 12ನೆಯ ಶತಮಾನದಲ್ಲಿ ಹೇಗೆ ಹೋರಾಟ ಮಾಡಿದರೋ ಹಾಗೆಯೇ 21ನೆಯ ಶತಮಾನದಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು ಹೋರಾಟ ಮಾಡಿದ್ದಾರೆ ಎಂದರು.
ನಾಗರಾಜ್ ಹೆಚ್. ಎಸ್. ವಚನ ಗೀತೆಗಳನ್ನು ಹಾಡಿದರು. ಶಿಕ್ಷಕಿ ಸಂಧ್ಯಾ ಪಿ. ಎಲ್ ನಿರೂಪಿಸಿ ವಂದಿಸಿದರು. ಸುಧಾ ಎಂ ಸ್ವಾಗತಿಸಿದರು.