ಭಕ್ತಿ ಇರುವವರ ಮನೆ ಘನ ಸಂಪನ್ನ. ಭಕ್ತಿ ಇಲ್ಲದ ವ್ಯಕ್ತಿ ಬಡವ ಎಂದು ಬಸವಣ್ಣನವರು ವಚನಗಳಲ್ಲಿ ಹೇಳಿದ್ದರು. ನಮ್ಮ ಪ್ರಕಾರ ಅಂಥವರು ಕೇವಲ ಬಡವರಷ್ಟೇ ಅಲ್ಲದೇ, ಭಡವರು.
– ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಸಿರಿಗೆರೆ, ಸೆ. 24 – ಭಕ್ತಿಯೇ ಶ್ರೀಮಂತಿಕೆ ಎಂದು ಬಸವಣ್ಣನವರು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಸಿರಿಗೆರೆ ಮಠವು ಭಕ್ತರ ಭಕ್ತಿಯ ಕಾರಣದಿಂದ ಶ್ರೀಮಂತವಾಗಿದೆ ಎಂದು ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿರಿಗೆರೆ ಮಠದಲ್ಲಿ ಆಯೋಜಿಸಲಾಗಿದ್ದ ಹಿರಿಯ ಜಗದ್ಗುರು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 32ನೇ ಶ್ರದ್ಧಾಂಜಲಿ ಸಮಾರಂಭದ ಅಂತಿಮ ದಿನದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಭಕ್ತಿ ಇರುವವರ ಮನೆ ಘನ ಸಂಪನ್ನ. ಭಕ್ತಿ ಇಲ್ಲದ ವ್ಯಕ್ತಿ ಬಡವ ಎಂದು ಬಸವಣ್ಣನವರು ವಚನಗಳಲ್ಲಿ ಹೇಳಿದ್ದರು. ನಮ್ಮ ಪ್ರಕಾರ ಅವರು ಕೇವಲ ಬಡವರಷ್ಟೇ ಅಲ್ಲದೇ, ಭಡವ ಎಂದರೂ ಸರಿ ಎಂದು ಶ್ರೀಗಳು ಮಾರ್ಮಿಕವಾಗಿ ಹೇಳಿದರು.
ಗುರುವಿಗೆ ಅಂಜಿ ಶಿಷ್ಯ, ಶಿಷ್ಯರಿಗೆ ಅಂಜಿ ಗುರು ಇರಬೇಕು ಎಂದು ಹಿರಿಯ ಜಗದ್ಗುರುಗಳು ಹೇಳಿದ್ದರು. ಮಠದ ಬಗ್ಗೆ ಕೋಲಾಹಲ ಎಬ್ಬಿಸಿದವರು ಈ ಮಾತನ್ನು ತಿರುಚಿ ಹೇಳುತ್ತಿದ್ದಾರೆ. ಅಂಜುವುದು ಎಂದರೆ ಹೆದರಿಕೆ ಅಲ್ಲ. ಅಂಜುವುದು ಎಂದರೆ ಭಕ್ತಿ ಎಂದರ್ಥ. ಗುರುಗಳ ಬಗ್ಗೆ ಶಿಷ್ಯರಿಗೆ ಭಕ್ತಿ ಇರಬೇಕು, ಅದೇ ರೀತಿ ಶಿಷ್ಯರ ಬಗ್ಗೆ ಗುರುಗಳಿಗೆ ಗೌರವ ಇರಬೇಕು ಎಂದರ್ಥ ಎಂದು ತರಳಬಾಳು ಜಗದ್ಗುರು ಹೇಳಿದರು.
ಹಿರಿಯ ಜಗದ್ಗುರುಗಳು ತಮ್ಮನ್ನು ಪೀಠಾಧೀಶರನ್ನಾಗಿ ಮಾಡುವಾಗ ಜನರ ಅಪವಾದಗಳಿಗೆ ಅಂಜಬೇಡ, ಪರ ನಿಂದನೆಗೆ ವ್ಯಾಕುಲಪಡಬೇಡ ಎಂದಿದ್ದರು. ಸ್ವಾರ್ಥಿಗಳು ತಮಗೆ ಏನಾದರೂ ಸಿಕ್ಕರೆ ಹೊಗಳುತ್ತಾರೆ, ಸಿಗದೇ ಇದ್ದರೆ ದೂಷಣೆ ಮಾಡುತ್ತಾರೆ. ಅವರ ಹೊಗಳಿಕೆಗೆ ಹಾಗೂ ನಿಂದ ನೆಗಳಿಗೆ ಬೆಲೆ ಇಲ್ಲ ಎಂದು ಹೇಳಿದ್ದರು ಎಂದು ಶ್ರೀ ಶಿವ ಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೆನಪಿಸಿಕೊಂಡರು.
ಹಿರಿಯ ಜಗದ್ಗುರುಗಳು ನಮ್ಮನ್ನು ವಿದೇಶಕ್ಕೆ ವ್ಯಾಸಂಗಕ್ಕೆ ಕಳಿಸಿದಾಗ ಅವರನ್ನು ನಿಂದಿಸಿದವರಿದ್ದರು. ಹಿರಿಯ ಜಗದ್ಗುರುಗಳು ತ್ಯಾಗ ಪತ್ರ ಕೊಟ್ಟಿರುವುದು ಸೋಗು ಮಾತ್ರ. ವಿದೇಶಕ್ಕೆ ಹೋದವರು ವಾಪಸ್ ಬರು ವುದಿಲ್ಲ, ಹೀಗಾಗಿಯೇ ಉತ್ತರಾಧಿಕಾರಿಯನ್ನು ವಿದೇಶಕ್ಕೆ ಕಳಿಸಿದ್ದಾರೆ ಎಂದಿದ್ದರು. ಅಂತಹ ಆರೋಪ ಮಾಡುತ್ತಿದ್ದ ವರ ಶನಿ ಸಂತಾನವೇ ಈಗ ಅಲ್ಲಲ್ಲಿ ಕಾಣುತ್ತಿದೆ ಎಂದರು.
ಅಂತರಂಗದ ಆತ್ಮಶುದ್ಧಿ ಇರುವವರು ಯಾರಿಗೂ ಹೆದರಬೇಕಿಲ್ಲ. ಸಮಾಜ ಸೇವೆ ಎಂದರೆ ಗುಡ್ಡಕ್ಕೆ ಕಲ್ಲು ಹೊತ್ತ ಹಾಗೆ ಎಂದು ಕೆಲವರು ಹೇಳುತ್ತಾರೆ. ಆದರೆ, ಅಷ್ಟೇ ಅಲ್ಲ, ಸಮಾಜ ಸೇವೆ ಮಾಡುವವರು ಗುಡ್ಡದಿಂದ ಬೀಳುವ ಕಲ್ಲುಗಳನ್ನು ಎದುರಿಸುವ ಛಾತಿ ಹೊಂದಿರಬೇಕು ಎಂದೂ ಶ್ರೀಗಳು ಹೇಳಿದರು.
ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ಮಠದ ಬಗ್ಗೆ ಕೆಲವರು ಮಾಡಿರುವ ಸುಳ್ಳು ಆಪಾದನೆಗಳಿಗೆ ಜಗದ್ಗುರುಗಳು ಉತ್ತರಿಸಿದ್ದಾರೆ. ಸುಳ್ಳು ಆಪಾದನೆ ಮಾಡಿದವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದರು.
ಮಾಜಿ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಮಾತನಾಡಿ, ಮಠದ ಭಿನ್ನಾಭಿಪ್ರಾಯಗಳು ಸಾರ್ವಜನಿಕ ವಾಗಿರುವುದು ನನಗೆ ನೋವು ತಂದಿದೆ. ಮುಂದಿನ ಶ್ರದ್ಧಾಂಜಲಿ ಸಮಾರಂಭದ ವೇಳೆ ಭಿನ್ನಾಭಿಪ್ರಾಯಗಳು ದೂರವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.