ಪ್ರಜಾಪ್ರಭುತ್ವದ ಆಶಯ ಈಡೇರಿಸಲು ಬದ್ಧರಾಗಬೇಕು

ಪ್ರಜಾಪ್ರಭುತ್ವದ ಆಶಯ ಈಡೇರಿಸಲು ಬದ್ಧರಾಗಬೇಕು

ಟಿ. ಗೋಪಗೊಂಡನಹಳ್ಳಿಯಲ್ಲಿನ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಡಿ. ಜಿ. ಶಾಂತನಗೌಡ ಕರೆ

ನ್ಯಾಮತಿ, ಸೆ. 17 – ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಜ್ಯ ಸರ್ಕಾರ 2500 ಕಿ.ಮೀ. ವ್ಯಾಪ್ತಿಯಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಐತಿಹಾಸಿಕ ಮೈಲುಗಲ್ಲು ಸೃಷ್ಟಿಸಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಬಣ್ಣಿಸಿದರು.

ನ್ಯಾಮತಿ ತಾಲ್ಲೂಕಿನ ಗಡಿ ಭಾಗದ ಟಿ. ಗೋಪಗೊಂಡನಹಳ್ಳಿ ಪಂಚಾಯ್ತಿ ವತಿಯಿಂದ ಮೊನ್ನೆ ಹಮ್ಮಿಕೊಳ್ಳಲಾಗಿದ್ದ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಸಂವಿಧಾನದ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರವು ಸದಾ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದೆ ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಶ್ಲ್ಯಾಘನೀಯ ಎಂದರು.

ವಿಶ್ವದ ಅತೀ ಉದ್ದದ ಮಾನವ ಸರಪಳಿ ಯನ್ನು ನಿರ್ಮಿಸಿ ನಾಗರಿಕರನ್ನು ಉತ್ತೇಜಿಸಿ ಸಮಾಜದಲ್ಲಿ ಸಮಾನತೆ, ಏಕತೆ, ಭ್ರಾತ್ವತ್ವವನ್ನು ಬೆಳೆಸುವ ಸದುದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ಆಶಯಗಳನ್ನು ಎಲ್ಲರೂ ಈಡೇರಿಸುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಬೃಹತ್ ಮಾನವ ಸರಪಳಿ ನಿರ್ಮಿಸಿ ನಾವೆಲ್ಲಾ ಒಂದೇ ಎಂಬ ಸಂದೇಶ ಸಾರುವ ಈ ಕಾರ್ಯಕ್ರಮವು ಸಮಾಜದಲ್ಲಿ ಅಸ್ಪೃಶ್ಯತೆ ಎಂಬ ಪಿಡುಗನ್ನು ಹೋಗಲಾಡಿಸಿ ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಬೆಳೆಸುವ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ನಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು, ಸಮಾಜದಲ್ಲಿ ಜಾತ್ಯಾತೀತ, ಮನೋಭಾವನೆ ರೂಢಿಸಿಕೊಳ್ಳ ಬೇಕೆಂದು ಅವರು ಕರೆ ನೀಡಿದರು.

ತಾ.ಪಂ. ಇಒ ಎಚ್.ವಿ. ರಾಘವೇಂದ್ರ ಮಾತನಾಡಿ,  ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮವನ್ನು ಅವಿಸ್ಮರಣೀಯ ವಾಗಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ವತಿಯಿಂದ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನೂ ಸಹ ಆಯೋಜಿಸಿದ್ದೇವೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್.ಎಲ್.ಉಮಾ ಮಾತನಾಡಿದರು.

ಉಪವಿಭಾಗಾಧಿಕಾರಿ ವಿ. ಅಭಿಷೇಕ್, ತಹಶೀಲ್ದಾರ್ ಗೋವಿಂದಪ್ಪ, ಹೊನ್ನಾಳಿ ಇಒ ಎಂ.ಆರ್. ಪ್ರಕಾಶ್, ಡಿಡಿಸಿಸಿ ಬ್ಯಾಂಕ್ ನಿರ್ದೇ ಶಕರುಗಳಾದ ಡಿ.ಜಿ. ವಿಶ್ವನಾಥ್, ಡಿ.ಎಸ್. ಸುರೇಂದ್ರಗೌಡ, ಕಾಂಗ್ರೆಸ್ ಮುಖಂಡ ಎಚ್.ಎ. ಉಮಾಪತಿ, ಪೊಲೀಸ್ ಇನ್ಸ್‌ ಪೆಕ್ಟರ್ ರವಿ, ಗ್ರಾ.ಪಂ. ಪಿಡಿಒ ರಶ್ಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್, ಸ್ಪೂರ್ತಿ ಸಂಸ್ಥೆಯ ಮುಖ್ಯಸ್ಥ ರೂಪ್ಲಾನಾಯ್ಕ್ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ಉಪಸ್ಥಿತರಿದ್ದರು.

error: Content is protected !!