ರಸ್ತೆ ವಿಸ್ತರಣೆ ಮಾರ್ಕಿಂಗ್‌ನಲ್ಲಿ ರಿಯಾಯಿತಿಗೆ ಬಿಜೆಪಿ ಒತ್ತಾಯ

ರಸ್ತೆ ವಿಸ್ತರಣೆ ಮಾರ್ಕಿಂಗ್‌ನಲ್ಲಿ ರಿಯಾಯಿತಿಗೆ ಬಿಜೆಪಿ ಒತ್ತಾಯ

ವರ್ತಕರ ಸಂಘ, ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಮಾಜಿ ಶಾಸಕ ಎಚ್.ಪಿ. ರಾಜೇಶ್

ಜಗಳೂರು, ಸೆ.12- ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆಯಿಂದಾಗುವ ಅನುಕೂಲ, ಅನಾನುಕೂಲವನ್ನು ಹಾಲಿ ಶಾಸಕರೊಂದಿಗೆ ಚರ್ಚಿಸಿ ಮಾರ್ಕಿಂ ಗ್‌ನಲ್ಲಿ ರಿಯಾಯಿತಿ ಮತ್ತು ಪರಿಹಾರ ನೀಡಲು ಬಿಜೆಪಿ ನೇತೃತ್ವದಲ್ಲಿ ಜಿಲ್ಲಾಧಿ ಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ವತಿಯಿಂದ ರಸ್ತೆ ವಿಸ್ತರಣೆ ಕುರಿತು ಕರೆದಿದ್ದ ವರ್ತಕರ ಸಂಘ ಹಾಗೂ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

2008ರಲ್ಲಿ ಮಲ್ಫೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯಾಗಿ ಮಾರ್ಪಟ್ಟಿತು. ನನ್ನ ಆಡಳಿತಾವಧಿಯಲ್ಲಿಯೂ ಸಾರ್ವಜನಿಕರ ವಿಶ್ವಾಸ ಗಳಿಸಿ ರಸ್ತೆ ಬದಿ ಫುಟ್ ಪಾತ್ ನಿರ್ಮಾಣ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯವಿರುವಷ್ಟು ರಸ್ತೆ ಅಗಲೀಕರಣಗೊಳಿಸಲಾಗಿತ್ತು ಎಂದು ಹೇಳಿದರು.

ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಏರಿಕೆಯಾಗುತ್ತಿದೆ. ಪ್ರಸಕ್ತ ರಸ್ತೆ ವಿಸ್ತರಣೆಗೆ ಎರಡೂ ಬದಿ 69 ಅಡಿ ಅಗಲೀಕರಣಕ್ಕೆ ಮಾರ್ಕಿಂಗ್ ಮಾಡಿರುವುದರಿಂದ ನಿವಾಸಿಗಳಿಗೆ ಹಾಗೂ ವರ್ತಕರಿಗೆ ತೊಂದರೆ ಆಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.

ಶಾಸಕ ಬಿ. ದೇವೇಂದ್ರಪ್ಪ ಅವರ ಅಭಿವೃದ್ಧಿ ಕಾಮಗಾರಿಗಳಿಗೆ ಸದಾ ಸಹಕಾರವಿದೆ. ಆದರೆ 69 ಅಡಿಗಿಂತ ಕಡಿಮೆ ಅಳತೆಯಲ್ಲಿ ರಸ್ತೆ ವಿಸ್ತರಣೆ ಮಾಡಲು ಬಿಜೆಪಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.

ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಆದರೆ ಕೆಲವರಿಗೆ ತೊಂದರೆ ಆಗುತ್ತಿರುವ ಕೂಗು ಕೇಳಿ ಬರುತ್ತಿದೆ. ಆದ್ದರಿಂದ ಸಲಹೆ-ಸಹಕಾರ ಪಡೆಯಲು ಸಭೆ ಕರೆಯಲಾಗಿದೆ ಎಂದರು.

ನನ್ನ ಆಡಳಿತಾವಧಿಯಲ್ಲಿ ಫುಟ್ ಪಾತ್‌, ದ್ವಿಮುಖ ರಸ್ತೆ ನಿರ್ಮಾಣ, ಹೈಮಾಸ್ಟ್ ದೀಪ ಅಳವಡಿಕೆ ಮಾಡಲಾಗಿದೆ. ಬೈಪಾಸ್ ರಸ್ತೆ ಶೀಘ್ರದಲ್ಲಿ ಅಸಾಧ್ಯ. ಅಲ್ಲಿಯೂ ಸಾಕಷ್ಟು ಕಾನೂನು ತೊಡಕುಗಳಿವೆ, ರಸ್ತೆ ವಿಸ್ತರಣೆಯಲ್ಲಿ ರಿಯಾಯಿತಿ ಹಾಗೂ ಸರ್ಕಾರದಿಂದ ನಿರಾಶ್ರಿತರಿಗೆ ಪರಿಹಾರಕ್ಕಾಗಿ ಒತ್ತಾಯಿಸಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಸ್ತರಣೆಯಿಂದ ವ್ಯಾಪಾರಿಗಳಿಗೆ ನಷ್ಟವಾಗುತ್ತದೆ. ಪ್ರಮುಖ ವೃತ್ತಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಏಕ ಮುಖ ರಸ್ತೆ ಮಾಡಬೇಕಿದೆ. ವ್ಯಾಪಾರಕ್ಕೆ ಒಂದೇ ಮಾರ್ಗವಿದೆ. ಬದಲಾಗಿ ಪಟ್ಟಣದ ಹೊರವಲಯದಲ್ಲಿ 100 ಅಡಿ ರಿಂಗ್ ರಸ್ತೆ, ಬೈಪಾಸ್ ರಸ್ತೆ ನಿರ್ಮಾಣವಾಗಲಿ. ಸದ್ಯಕ್ಕೆ ರಸ್ತೆ ವಿಸ್ತರಣೆ ಗೊಳಿಸದೆ 2-3 ವರ್ಷಗಳ ಕಾಲಾವಕಾಶ ನೀಡಿದರೆ ಸೂಕ್ತ ಎಂದು ತಿಳಿಸಿದರು.

ಸಭೆಯಲ್ಲಿ ಪ.ಪಂ ಅಧ್ಯಕ್ಷ ನವೀನ್ ಕುಮಾರ್, ಸದಸ್ಯರಾದ ಆರ್. ತಿಪ್ಪೇಸ್ವಾಮಿ, ರೇವಣಸಿದ್ದಪ್ಪ, ವರ್ತಕರ ಸಂಘದ ತಾಲ್ಲೂಕು ಅಧ್ಯಕ್ಷ ಖಲಂದರ್ ಖಾನ್, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ಮುಖಂಡರಾದ ಓಬಳೇಶ್, ಬಾಬುರೆಡ್ಡಿ, ಡಿ. ನಾಗರಾಜ್ ರಾವ್, ಶಿವಕುಮಾರ್, ಅಶೋಕ್ ಸೇರಿದಂತೆ ವರ್ತಕರು, ಸಾರ್ವಜನಿಕರಿದ್ದರು.

error: Content is protected !!