ಬೆಂಗಳೂರು, ಸೆ.11- ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಮಹಾಸಭಾದ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದಾರೆ.
ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಇದೇ ದಿನಾಂಕ 29ರಂದು ಚುನಾವಣೆ ನಿಗದಿಯಾಗಿತ್ತು. ಆದರೆ, ಉಮೇದುವಾರಿಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದ ಇಂದಿನವರೆಗೆ ಎಸ್ಸೆಸ್ ಅವರನ್ನು ಹೊರತುಪಡಿಸಿದರೆ, ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಅವರ ಆಯ್ಕೆಯ ಘೋಷಣೆಗೆ ಸುಗಮ ದಾರಿಯಾದಂತಾಗಿದೆ.
ಎಸ್ಸೆಸ್ ಅವರ ಅವಿರೋಧ ಆಯ್ಕೆ ಕುರಿತಂತೆ ನಿವೃತ್ತ ಹಿರಿಯ ಐಎಎಸ್ ಅಧಿಕಾರಿಯೂ ಆಗಿರುವ ವೀರಶೈವ ಮಹಾಸಭಾದ ಮುಖ್ಯ ಚುನಾವಣಾಧಿಕಾರಿ ಎಂ.ಬಿ. ದ್ಯಾಬೇರಿ ಅವರು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.
ಈ ಚುನಾವಣೆಯು ಪ್ರತೀ 5 ವರ್ಷಗಳಿಗೊಮ್ಮೆ ನಡೆಯಲಿದ್ದು, ಎಸ್ಸೆಸ್ ಅವರು ಎರಡು ಅವಧಿಗಳನ್ನು ಈಗಾಗಲೇ ಪೂರೈಸಿದ್ದು, ಸತತ ಮೂರನೇ ಅವಧಿಗೆ ಮಹಾಸಭಾದ ಸಾರಥ್ಯ ವಹಿಸಲಿದ್ದಾರೆ.