ಪೊಲೀಸ್ ಕರ್ತವ್ಯ ಕೂಟದ ಸಮಾರೋಪದಲ್ಲಿ ಡಿಐಜಿಪಿ ಬಿ. ರಮೇಶ್
ದಾವಣಗೆರೆ, ಸೆ.4- ಆಧುನಿಕ ತಂತ್ರಜ್ಞಾನದ ಕಲಿಕೆ ಮತ್ತು ಸಾಮರ್ಥ್ಯ ಪ್ರದರ್ಶನಕ್ಕೆ ಪೊಲೀಸ್ ಕರ್ತವ್ಯ ಕೂಟ ಸಹಾಯಕವಾಗಲಿದೆ ಎಂದು ಪೂರ್ವ ವಲಯದ ಉಪ ಪೊಲೀಸ್ ಮಹಾ ನಿರೀಕ್ಷಕ ಬಿ. ರಮೇಶ್ ತಿಳಿಸಿದರು.
ನಗರದ ಬಿಐಇಟಿ ಕಾಲೇಜಿನ ಎಸ್‌ಎಸ್‌ಎಂ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಲಯ ಪೊಲೀಸ್ ಕರ್ತವ್ಯ ಕೂಟದ ಸಮಾರೋಪ ಸಮಾರಂಭ ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಲಾಖೆಗಳ ಮಧ್ಯೆ ಉತ್ತಮ ಸಂಬಂಧ ಹಾಗೂ ಒಂದು ಇಲಾಖೆಯ ಜ್ಞಾನ ಮತ್ತು ಅನುಭವವನ್ನು ಮತ್ತೊಂದು ಇಲಾಖೆಯ ಜತೆ ಹಂಚಿಕೊಳ್ಳಲು ಇಂತಹ ಕಾರ್ಯಕ್ರಮ ಸಹಕಾರಿಯಾಗಲಿವೆ ಎಂದು ಹೇಳಿದರು.
ರಾಜ್ಯ ಮಟ್ಟದಲ್ಲಿ ಸ್ಪರ್ಧಿಸುವ ಸ್ಪರ್ಧಾಳುಗಳು ಹೆಚ್ಚಿನ ಅಭ್ಯಾಸದಲ್ಲಿ ತೊಡಗು ವಂತೆ ಸಲಹೆ ನೀಡಿದರು.
ಕಳೆದ ಬಾರಿ ಪೂರ್ವ ವಲಯ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿತ್ತು, ಆದರೆ ಈ ಬಾರಿ ರಾಷ್ಟ್ರ ಮಟ್ಟದಲ್ಲೂ ಉತ್ತಮ ಸಾಧನೆ ಗೈಯ್ಯುವಂತೆ ಆಗಬೇಕು ಎಂದು ಆಶಿಸಿದರು. ರಾಜ್ಯದಲ್ಲಿ ಕರ್ತವ್ಯ ಕೂಟಗಳು ಪ್ರತಿ ವರ್ಷ ಸೆ.10ರ ನಂತರ ನಡೆಯುತ್ತವೆ. ಆದರೆ ಹಬ್ಬಗಳ ಬಂದೋಬಸ್ತ್ ಕರ್ತವ್ಯ ಇರುವುದರಿಂದ ಮನವಿ ಮೇರೆಗೆ ಬೇಗ ಆಯೋಜಿಸುವಂತೆ ಆಯಿತು ಎಂದರು. ಇದೇ ವೇಳೆ ದಾವಣಗೆರೆ ಜಿಲ್ಲಾ ಪೊಲೀಸ್ ತಂಡಕ್ಕೆ `ಸಮಗ್ರ ಪ್ರಶಸ್ತಿ’ ಮತ್ತು ಟಿ.ಸಿ. ಹನುಮಂತಪ್ಪ ನೇತೃತ್ವದ ವಿಕ್ಕಿ ಡಾಗ್‌ಗೆ `ಅತ್ಯುತ್ತಮ ಡಾಗ್ ಪ್ರಶಸ್ತಿ’ ನೀಡಲಾಯಿತು.
ಎಸ್ಪಿ ಉಮಾ ಪ್ರಶಾಂತ್, ಶಿವಮೊಗ್ಗ ಎಸ್ಪಿ ಜಿ.ಕೆ. ಮಿಥುನ್ ಕುಮಾರ್, ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಹಾವೇರಿ ಎಸ್ಪಿ ಅಂಶು ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಕುಮಾರ ಎಂ. ಸಂತೋಷ್, ಜಿ. ಮಂಜುನಾಥ, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಬಿ.ಎಸ್. ಬಸವರಾಜ್, ರುದ್ರಪ್ಪ ಉಜ್ಜಿನಕೊಪ್ಪ, ಎ.ಕೆ. ರುದ್ರೇಶ್, ಪಿ.ಬಿ. ಪ್ರಕಾಶ್, ಆರ್ಎಫ್ಎಸ್ಎಲ್ ನಿರ್ದೇಶಕಿ ಛಾಯಕುಮಾರಿ, ಹಿರಿಯ ಕಾರ್ಯಕ್ರಮ ಅಧಿಕಾರಿ ನಾಗೇಶ್, ಸಿಐಡಿ ಅಧಿಕಾರಿ ಬಸವರಾಜ್, ದಾವಣಗೆರೆ, ಚಿತ್ರದುರ್ಗ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.