ಶಿವಮೊಗ್ಗ, ಆ.6- ಭರ್ತಿಯಾಗಿರುವ ಭದ್ರಾ ಜಲಾಶಯಕ್ಕೆ ಮಂಗಳವಾರ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ವತಿಯಿಂದ ಪೂಜೆ ಸಲ್ಲಿಸಿ, ರೈತರ ಸಮ್ಮುಖದಲ್ಲಿ ಬಾಗಿನ ಅರ್ಪಿಸಲಾಯಿತು.
ಈ ವೇಳೆ ಮಾತನಾಡಿದ ಮಹಾಮಂಡಳದ ಅಧ್ಯಕ್ಷ ವೈ.ದ್ಯಾವಪ್ಪರೆಡ್ಡಿ ಅವರು, ಭದ್ರೆಯ ಒಡಲು ಭರ್ತಿಯಾಗಿದ್ದರೆ ಮಾತ್ರ ಅಚ್ಚುಕಟ್ಟಿನ ರೈತರ ಹೊಟ್ಟೆ ತುಂಬುತ್ತದೆ. ಜೊತೆಗೆ ಅನೇಕ ನಗರ, ಪಟ್ಟಗಳಿಗೆ ಕುಡಿಯುವ ನೀರು, ಕೈಗಾರಿಕೆಗಳಿಗೆ, ಕೆರೆ-ಕಟ್ಟೆಗಳಿಗೆ ನೀರು ಪೂರೈಸುವ ಭದ್ರಾ ಜಲಾಶಯದ ಸುರಕ್ಷತೆ ಬಗ್ಗೆಯೂ ಎಲ್ಲರೂ ನಿಗಾವಹಿಸಬೇಕು. ಸರ್ಕಾರ ಕೂಡಾ ಭದ್ರಾ ಯೋಜನೆಗೆ ಅಗತ್ಯ ಅನುದಾನ ನೀಡಬೇಕೆಂದು ಮನವಿ ಮಾಡಿದರು. ಸಣ್ಣ ಕಾಲುವೆಗಳ ದುರಸ್ತಿ, ಹೊಲ ರಸ್ತೆಗಳ ಅಭಿವೃದ್ಧಿಯನ್ನು ಉದ್ಯೋಗ ಖಾತ್ರಿ ಯೋಜನೆ ಯಡಿ ಕೈಗೆತ್ತಿಕೊಳ್ಳಲು ದಾವಣಗೆರೆ ಜಿಲ್ಲೆಯ ಡಿಸಿ ಮತ್ತು ಜಿ.ಪಂ. ಸಿಇಒ ಅವರು ಗ್ರಾ.ಪಂ. ಪಿಡಿಓಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಆಗ್ರಹಿಸಿದರು.
ಮಹಾಮಂಡಳದ ನಿರ್ದೇಶಕರೂ ಆದ ಡಿಸಿಸಿ ಬ್ಯಾಂಕಿನ ನಿರ್ದೇಶಕ ಮುದೇಗೌಡ್ರ ಗಿರೀಶ್ ಮಾತನಾಡಿ, ನೀರು ಬಳಕೆದಾರರ ಸಹಕಾರ ಸಂಘಗಳ ನಿರ್ವಹಣೆಗೆ ಕನಿಷ್ಠ 10 ಲಕ್ಷ ರೂ.ಗಳನ್ನು ಠೇವಣಿ ಹಣವನ್ನಾಗಿ ಸರ್ಕಾರ ನೀಡಬೇಕು. ಆ ಠೇವಣಿ ಹಣದ ಬಡ್ಡಿಯಲ್ಲಿ ಕಾರ್ಯದರ್ಶಿಗಳಿಗೆ ಸಂಬಳ ಹಾಗೂ ಕಚೇರಿ ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ನೀರಾವರಿ ಸಚಿವರನ್ನು ಭೇಟಿ ಮಾಡಿ, ಭದ್ರಾ ಅಚ್ಚುಕಟ್ಟಿನ ಉಪವಿಭಾಗಗಳಿಗೆ ಕನಿಷ್ಠ 5 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಿದ್ದೆವು. ಸರ್ಕಾರ ಅನುದಾನ ನೀಡಿದರೆ ನಾಲೆಗಳ ದುರಸ್ತಿ ಮತ್ತು ಗೇಟ್‌ಗಳ ದುರಸ್ಥಿ ಮಾಡಿಸಬಹುದೆಂದು ಗಿರೀಶ್ ಹೇಳಿದರು.
ಮಹಾಮಂಡಳದ ಇನ್ನೋರ್ವ ನಿರ್ದೇಶಕ ತೇಜಸ್ವಿ ಪಟೇಲ್ ಮಾತನಾಡಿ, ಭದ್ರಾ ಅಚ್ಚುಕಟ್ಟಿನ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಜನಪ್ರತಿನಿಧಿಗಳು ಮತ್ತು ನಾವೆಲ್ಲರೂ ಸೇರಿ ಸರ್ಕಾರದ ಮೇಲೆ ಒತ್ತಡ ಹಾಕಿ ನಾಲೆಗಳ ದುರಸ್ಥಿಗೆ ಅನುದಾನ ತರುವ ಪ್ರಯತ್ನ ಮಾಡಬೇಕಿದೆ ಎಂದರು.
ಭದ್ರಾ ಅಧೀಕ್ಷಕ ಇಂಜಿನಿಯರ್ ಸುಜಾತ ಅವರು, ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಜಲಾಶಯದ ಸುರಕ್ಷತೆ ದೃಷ್ಟಿಯಿಂದ 180 ಅಡಿಗೆ ನೀರನ್ನು ನಿಲ್ಲಿಸಿದ್ದೇವೆ ಎಂದರು.
ಜಿ.ಪಂ. ಮಾಜಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ, ಮಹಾಮಂಡಳದ ನಿರ್ದೇಶಕರಾದ ಬೆಳಲಗೆರೆ ದೇವೇಂದ್ರಪ್ಪ ಶಿರಮಗೊಂಡನಹಳ್ಳಿಯ ಎ.ಬಿ.ಕರಿಬಸಪ್ಪ, ಹಾಲಿವಾಣದ ಸಣ್ಣ ಪರಮೇಶ್ವರಪ್ಪ, ಕಡ್ಲೇಗೊಂದಿ ಹನುಮಂತರೆಡ್ಡಿ, ಕೆ.ಬೇವಿನಹಳ್ಳಿಯ ಮಲ್ಲಿಕಾರ್ಜುನಪ್ಪ, ಗೋಪನಾಳ್ ಬಂಧು, ಬಿಆರ್‌ಪಿ ರಾಜಣ್ಣ, ಸಿಇಒ ವೀರಪ್ಪ, ಹರಿಹರ ತಾ. ಬಿತ್ತನೆ ಬೀಜ, ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಎಂ.ಕರಿಬಸಯ್ಯ, ಹರಿಹರ ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ನಂದಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ವೀರಯ್ಯ, ವಾಸನದ ಬಿ.ಎಸ್.ಮಂಜುನಾಥ್, ಟಿ.ಹೆಚ್.ಬಸವರಾಜ್, ನಂದಿಗುಡಿ ಷಣ್ಮುಖಯ್ಯ, ಕೆ.ಎನ್.ಹಳ್ಳಿಯ ಗುಬ್ಬಿ ರಂಗನಾಥ್, ದಿವಾಕರಪ್ಪ, ನಂದಿತಾವರೆ ಮುರುಗೇಂದ್ರಯ್ಯ, ಮಂಜುಳಮ್ಮ, ಪಿ.ಗದಿಗೆಪ್ಪ, ಎನ್.ಪಿ.ಧರ್ಮರಾಜ್, ಟಿ.ನಂದೀಶ್, ಶಿರಮಗೊಂಡನ ಹಳ್ಳಿಯ ಎ.ಎಂ.ಮಂಜುನಾಥ್, ಐ.ಎಸ್.ರುದ್ರಮುನಿ, ಹೊನ್ನಾಳಿಯ ನರೇಂದ್ರ ಕಂಬಳಿ, ಮಲೇಬೆನ್ನೂರು ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬಿ.ಮಂಜುನಾಥ್, ಸಾಬೀರ್ ಅಲಿ, ಭಾನುವಳ್ಳಿ ಸುರೇಶ್, ಪಿ.ಆರ್.ರಾಜು, ಎ.ಕೆ.ಲೋಕೇಶ್, ಬಿ.ಚಂದ್ರಪ್ಪ, ಸಂಗಮೇಶ್, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್.ಶಿವಕುಮಾರ್, ರೈತರಾದ ಬೆಣ್ಣೆಹಳ್ಳಿ ಶಿವಕುಮಾರ್, ಪೂಜಾರ್ ಪರಮೇಶ್ವರಪ್ಪ, ಪೂಜಾರ್ ಹಾಲೇಶ್, ಹರಿಹರ ತಾ. ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸು ಸೇರಿದಂತೆ ಇತರರು ಭಾಗವಹಿಸಿದ್ದರು.