ಸತ್ಕಾರ್ಯಗಳಿಗೆ ಪ್ರೇರೇಪಿಸುವವನೇ ನಾಯಕ

ಸತ್ಕಾರ್ಯಗಳಿಗೆ ಪ್ರೇರೇಪಿಸುವವನೇ ನಾಯಕ

ದಾವಣಗೆರೆ, ಆ. 6 – ತನ್ನ ತಂಡದ ಸದಸ್ಯರನ್ನು ಸಮಾಜ ಮುಖಿಯಾದ ಸತ್ಕಾರ್ಯಗಳಿಗೆ ಪ್ರೇರೇಪಿಸುವವನೇ ಸಮರ್ಥ ನಾಯಕ ಎಂದು ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ ಹೇಳಿದರು. 

ನಗರದ ಬಾಪೂಜಿ ವಿದ್ಯಾ ಸಂಸ್ಥೆಯ ಸಿಬಿಎಸ್ಇ ಉನ್ನತ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳ ಪ್ರತಿಷ್ಠಾಪನಾ ಕಾರ್ಯಕ್ರಮ ‘ಕಲಾವೃಕ್ಷ’ವನ್ನು ಉದ್ಘಾಟಿಸಿ, ಶಾಲಾ ಡೈರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಭವಿಷ್ಯದಲ್ಲಿ ಭಾರತಕ್ಕೆ ವಿಶ್ವ ನಾಯಕತ್ವ ವಹಿಸುವ ಅವಕಾಶ ಬರಲಿದ್ದು, ಅದಕ್ಕಾಗಿ ಶಾಲಾ ವಿದ್ಯಾರ್ಥಿಗಳಲ್ಲಿ ಈಗಿಂದಲೇ ನಾಯಕತ್ವ ಗುಣದ ಪರಿಕಲ್ಪನೆಯನ್ನು ಬೆಳೆಸಬೇಕಿದೆ, ಉತ್ತಮ ನಾಯಕತ್ವವು ಒಂದು ಕಲೆಯಾಗಿದ್ದು, ಕಾರ್ಯಕ್ರಮಕ್ಕೆ `ಕಲಾವೃಕ್ಷ’ ಎಂಬ ಶೀರ್ಷಿಕೆಯು ಯೋಗ್ಯವಾಗಿದೆ. ನಾಯಕನಾಗುವವನು ಸಂಘಟನಾತ್ಮಕ ಸಾಮರ್ಥ್ಯವನ್ನು  ಮರದ ಬೇರುಗಳಂತೆ ಆಳವಾಗಿ ಊರಿ, ಸದೃಢವಾದ ಕಾಂಡದಿಂದ ಉತ್ತಮ ಸದಸ್ಯತ್ವವೆಂಬ ರೆಂಬೆ ಕೊಂಬೆಗಳನ್ನು ಬೆಳೆಸಿ, ಮೌಲ್ಯವತ್ತಾದ ಚಟುವಟಿಕೆಗಳೆಂಬ ಎಲೆ, ಕಾಯಿ ಹೂವು ಹಣ್ಣುಗಳನ್ನು ಸಮೃದ್ಧವಾಗಿಸಬೇಕು ಎಂದು ಮಂಜುನಾಥ್ ತಿಳಿಸಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತಾಧಿಕಾರಿಗಳೂ, ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕರೂ ಆದ ಪ್ರೊ.ವೈ.ವೃಷಭೇಂದ್ರಪ್ಪ ಅವರು ಮಾತನಾಡಿ,  ಸ್ವಾತಂತ್ರ್ಯಾ ನಂತರ ನಮ್ಮ ನಮ್ಮ ದೇಶ ಹತ್ತು ಸಾವಿರ ಪಟ್ಟು ಆರ್ಥಿಕ  ಬಲಿಷ್ಠತೆಯನ್ನು ಹೊಂದಿದೆ. ವಿದ್ಯಾರ್ಥಿಗಳು ಮುಂದೆ ಮತ್ತಷ್ಟು ದುಡಿದು ಆರ್ಥಿಕತೆ ಬೆಳೆಸಬೇಕು. ನಮ್ಮ ಸಂವಿಧಾನವನ್ನು ಅರ್ಥ ಮಾಡಿಕೊಂಡು ಅದರಂತೆ ನಡೆಯುವುದು ಮತ್ತು ನಡೆಸುವುದು ಸಹಾ ಉತ್ತಮ ನಾಯಕತ್ವದ ಲಕ್ಷಣ ಎಂದರು. 

ಶಾಲಾ ಪ್ರಾಂಶುಪಾಲ ಹೆಚ್.ಎಸ್. ಸತೀಶ್ ಉಪಸ್ಥಿತಿಯಲ್ಲಿ ವರ್ಷಿಣಿ ಹಾಗೂ ಜೋಯಾ ಸುಲ್ತಾನ ಕಾರ್ಯಕ್ರಮ ನಿರೂಪಿಸಿದರು. ಅರ್ಚನಾ ತಂಡದವರು ಪ್ರಾರ್ಥಿಸಿದರು. ಪ್ರಜ್ವಲ್ ಪಟೇಲ್ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಆರ್. ಗೀತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಶಿಕ್ಷಕಿ ಕೆ.ಜಿ. ಪುಷ್ಪಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ರಾವ್ಯ ಬಹುಮಾನಿತರ ಹೆಸರು ಘೋಷಿಸಿದರು. ಹಿರಿಯ ಶಿಕ್ಷಕಿ ಅವಿನಾ ಜೆ.ಎಂ. ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.

ಹಿರಿಯ ಶಾಲಾ ಸಿಬ್ಬಂದಿ ಮುರುಗೇಶ್, ಪ್ರಶಾಂತ್, ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿ ಜೀವನ್ ಕೃಷ್ಣ, ಸಾಂಸ್ಕೃತಿಕ ಕಾರ್ಯದರ್ಶಿ ಮೊಹಮ್ಮದ್ ಝಾಯಿದ್, ಗ್ರಂಥಾಲಯ ಕಾರ್ಯದರ್ಶಿ ಸಾನ್ವಿ ಡಿ ಪಿ, ಕ್ರೀಡಾ ಕಾರ್ಯದರ್ಶಿ ಮೊಹಮದ್ ಅನಸ್ ಖಾನ್, ಪ್ರವಾಸ ಕಾರ್ಯದರ್ಶಿ ಕೀರ್ತನ ಆರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ವಂದನೆಗಳನ್ನು ಶ್ವೇತಾ ಜಿ ಶೇಟ್ ಸಮರ್ಪಿಸಿದರು. 

error: Content is protected !!