ತುಂಗಭದ್ರಾ ನದಿ ನೀರು ಪ್ರಮಾಣ 1,44,468 ಕೂಸೆಕ್ಸ್ಗೆ ಏರಿಕೆ
ಶಾಸಕರು-ಅಧಿಕಾರಿಗಳಿಂದ ಜಂಟಿ ಸಮೀಕ್ಷೆ – ನದಿಪಾತ್ರದಲ್ಲಿ ಎಚ್ಚರದಿಂದಿರಲು ಸೂಚನೆ
ದಾವಣಗೆರೆ, ಜು.31- ಮಲೆನಾಡಿನ ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯ ಭರ್ತಿಯಾಗಿದೆ. ತುಂಗಾ ನದಿಯಿಂದ ಎಲ್ಲಾ ಕ್ರೆಸ್ ಗೇಟ್ಗಳ ಮೂಲಕ ನೀರನ್ನು ನದಿಗೆ ಹೊರಬಿಡಲಾಗುತ್ತಿದ್ದು, ತುಂಗಭದ್ರಾ ನದಿಯಲ್ಲಿ ನೀರು 1,44,468 ಕ್ಯೂಸೆಕ್ಸ್ಗೆ ಏರಿಕೆಯಾಗಿದ್ದು ಇದು ಅಪಾಯ ಮಟ್ಟವನ್ನು ತಲುಪಿರುವುದರಿಂದ ನದಿ ಪಾತ್ರದಲ್ಲಿನ ಜನರು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಜನರಿಗೆ ಮನವಿ ಮಾಡಿದ್ದಾರೆ.
ಅವರು ಬುಧವಾರ ಹೊನ್ನಾಳಿಯ ಸಾಸ್ವೆಹಳ್ಳಿ, ಬಾಲರಾಜ್ಘಾಟ್, ಬಂಬೂ ಬಜಾರ್ ಪ್ರದೇಶಗಳಿಗೆ ಶಾಸಕ ಡಿ.ಜಿ.ಶಾಂತನಗೌಡ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಹಾಗೂ ವಿವಿಧ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಪ್ರವಾಹದಿಂದ ತೊಂದರೆ ಯುಂಟಾಗುವ ಪ್ರದೇಶಗಳ ವೀಕ್ಷಣೆ ಮಾಡಿದರು.
ಎಸ್ಡಿಆರ್ಎಫ್, ಅಗ್ನಿಶಾಮಕ ಪಡೆ ಸನ್ನದ್ಧ
ತುಂಗಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಎಸ್.ಡಿ.ಆರ್.ಎಫ್ ಪಡೆ ಮತ್ತು ಅಗ್ನಿ ಶಾಮಕ ಇಲಾಖೆ ತಂಡಗಳನ್ನು ರಕ್ಷಣಾ ಪರಿಕರಗಳೊಂದಿಗೆ ಸನ್ನದ್ದವಾಗಿಡಲಾಗಿದೆ. ನದಿಪಾತ್ರದಲ್ಲಿ ಜನ, ಜಾನುವಾರುಗಳು ನದಿಗೆ ಇಳಿಯದಂತೆ ಅಪಾಯಕಾರಿ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗ್ರಾಮ ಮಟ್ಟದಲ್ಲಿನ ಟಾಸ್ಕ್ ಪೋರ್ಸ್ ಸಮಿತಿ ರಚನೆ ಮಾಡಿ ನದಿಪಾತ್ರದಲ್ಲಿನ ಎಲ್ಲಾ ಗ್ರಾಮಗಳಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಗ್ರಾಮಾಡಳಿತ ಅಧಿಕಾರಿಗಳು ಸೇರಿದಂತೆ ತಹಶೀಲ್ದಾರರು ಕಟ್ಟೆಚ್ಚರ ವಹಿಸಲು ಸೂಚನೆ ನೀಡಿ, ನದಿಗೆ ಇಳಿಯದಂತೆ ಡಂಗೂರ ಹಾಗೂ ಮೈಕ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ರಸ್ತೆ ಮಾರ್ಗ ಬದಲು
ನದಿ ಪ್ರವಾಹದಿಂದ ಕೆಲವು ರಸ್ತೆ ಸಂಪರ್ಕಗಳು ಕಡಿತವಾಗಿದ್ದು ಇಲ್ಲಿ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಷೇಧಿತ ಮಾರ್ಗದ ಬದಲಾಗಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ. ಹೊನ್ನಾಳಿ ತಾಲ್ಲೂಕಿನ ವಿಜಯಪುರ-ಕೋಟೆಮಲ್ಲೂರು ರಸ್ತೆ ಬದಲಾಗಿ ಅರಕೆರೆ ರಸ್ತೆ, ಕಮ್ಮಾರಗಟ್ಟೆ-ಬೆನಕನಹಳ್ಳಿ ಬದಲಾಗಿ ಕೈಮರ ಕ್ಯಾಂಪ್ ರಸ್ತೆ, ಹರಿಹರ ತಾಲ್ಲೂಕು ನಂದಿಗುಡಿ-ಪತ್ಯಾಪುರ-ಉಕ್ಕಡಗಾತ್ರಿ ರಸ್ತೆ ಸೇತುವೆ ಮುಳುಗಡೆ ಯಾಗಿದ್ದು ಇದರ ಬದಲಾಗಿ ನಂದಿಗುಡಿ-ತುಮ್ಮಿನಕಟ್ಟೆ ರಸ್ತೆ ಬಳಕೆಗೆ ಸೂಚಿಸಲಾಗಿದೆ.
ಪ್ರವಾಹ ಎದುರಿಸಲು ಸನ್ನದ್ಧವಾಗುವಂತೆ ಜಿಲ್ಲಾಡಳಿತಕ್ಕೆ ಸಂಸದೆ ಡಾ. ಪ್ರಭಾ ಸೂಚನೆ
ದಾವಣಗೆರೆ, ಜು.31- ತುಂಗಾ ಜಲಾಶಯ ಹಾಗೂ ಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಬಿಡಲಾಗುತ್ತಿದ್ದು, ಜಿಲ್ಲೆ ಯಲ್ಲಿ ಪ್ರವಾಹ ತಲೆದೋರುವ ಸಾಧ್ಯತೆ ಇದೆ. ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕಾ ಕ್ರಮ ತೆಗೆದು ಕೊಳ್ಳುವಂತೆ ಸಂಸದೆ ಡಾ. ಪ್ರಭಾ ಮಲ್ಲಿಕಾ ರ್ಜುನ್ ಸೂಚಿಸಿದ್ದಾರೆ. ನವದೆಹಲಿಯಲ್ಲಿ ಲೋಕಸಭೆ ಅಧಿವೇಶನದಲ್ಲಿ ಪಾಲ್ಗೊಂಡಿದ್ದು, ದಾವಣಗೆರೆಗೆ ಬಂದ ಬಳಿಕ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಾಗುವುದು. ನದಿ ಪಾತ್ರದ ಜನರನ್ನು ಸ್ಥಳಾಂತರಿಸುವ ಕೆಲಸ ಮಾಡಬೇಕು. ಜೊತೆಗೆ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಸಹಾಯವಾಣಿ ಸ್ಥಾಪನೆ
ಪ್ರವಾಹ ಭೀತಿ ಹಿನ್ನೆಲೆಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ 08192-234034, 1077, ಎಸ್ಡಿಆರ್ಎಫ್ ಘಟಕ, ದೇವರಬೆಳೆಕೆರೆ 7411308591, ದಾವಣಗೆರೆ ಅಗ್ನಿಶಾಮಕ ಇಲಾಖೆ 08192-258101, 112, ದಾವಣಗೆರೆ ಮಹಾನಗರ ಪಾಲಿಕೆ 08192-234444, 8277234444, ದಾವಣಗೆರೆ ತಾ; ಕಚೇರಿ 9036396101, ಹರಿಹರ 08192-272959, ಜಗಳೂರು 08196-227242, ಹೊನ್ನಾಳಿ 08188-252108, ನ್ಯಾಮತಿ 8073951245, ಚನ್ನಗಿರಿ 7892481962ಕ್ಕೆ ಕರೆ ಮಾಡಬಹುದಾಗಿದೆ.
ತುಂಗಾ ನದಿಯಿಂದ 82053 ಮತ್ತು ಭದ್ರಾದಿಂದ 62415 ಕ್ಯೂಸೆಕ್ಸ್ ನೀರು ಬರುತ್ತಿದ್ದು ತುಂಗಭದ್ರಾ ನದಿಯಲ್ಲಿ ಒಂದೂವರೆ ಲಕ್ಷ ಕ್ಯೂಸೆಕ್ ವರೆಗೆ ನೀರು ಹರಿಯುತ್ತಿದೆ. ಇದರಿಂದ ಹೊನ್ನಾಳಿ ಬಾಲರಾಜ್ಘಾಟ್, ಬಂಬೂ ಬಜಾರ್ ಪ್ರದೇಶದ ನದಿಪಾತ್ರದಲ್ಲಿನ ಮನೆಗಳಿಗೆ ನೀರು ಬರಲಿದೆ. ಇದಕ್ಕಾಗಿ ಅಂಬೇಡ್ಕರ್ ಭವನದಲ್ಲಿ 20 ಕುಟುಂಬಗಳ 93 ಜನರು, ಗುರುಭವನದಲ್ಲಿ 6 ಕುಟುಂಬಗಳ 27 ಜನರಿಗೆ ಕಾಳಜಿ ಕೇಂದ್ರ ತೆರೆದು ಪ್ರವಾಹ ಪೀಡಿತ ಪ್ರದೇಶದಿಂದ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಹರಿಹರದ ಗಂಗಾನಗರದಲ್ಲಿ ಪ್ರವಾಹ ಉಂಟಾಗಬಹುದೆಂದು ಎಪಿಎಂಸಿಯಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಹೊನ್ನಾಳಿ ಬೇಸ್ ಸ್ಟೇಷನ್ : ಹೊನ್ನಾಳಿಯಲ್ಲಿ ತುಂಗಭದ್ರಾ ನದಿಯ ನೀರಿನ ಮಟ್ಟ ಅಳತೆಗೆ ಕೇಂದ್ರ ವಾಟರ್ ಬೋರ್ಡ್ನ ಬೇಸ್ ಸ್ಟೇಷನ್ ಇದ್ದು ಇಲ್ಲಿ ಜುಲೈ 31 ರ ಸಂಜೆ 6 ಗಂಟೆ ವೇಳೆಗೆ 12.06 ಮೀಟರ್ ಪ್ರಮಾಣದಲ್ಲಿ ನೀರು ಹರಿಯುತ್ತಿದೆ, ಇದು ಅಪಾಯ ಮಟ್ಟವಾಗಿದೆ. ಈ ಸ್ಟೇಷನ್ನಲ್ಲಿ 10.85 ಮೀಟರ್ ಹರಿವು ದಾಖಲಾದರೆ ಅಪಾಯದ ಮಟ್ಟ ಎಂದೇ ಪರಿಗಣಿಸಲಾಗುತ್ತದೆ. 12.57 ಮೀಟರ್ ದಾಖಲಾದರೆ ಪ್ರವಾಹ ಉಂಟಾಗಿ ಹಾನಿಯ ಮಟ್ಟವೆಂದು ಪರಿಗಣಿಸ ಲಾಗುತ್ತದೆ. ಪ್ರತಿ ಗಂಟೆಗೆ ಇಲ್ಲಿನ ದಾಖಲೆಯಲ್ಲಿ ಪಡೆದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ.