ಅನರ್ಹ ಕಟ್ಟಡ ಕಾರ್ಮಿಕರ ಹಾವಳಿ

ಅನರ್ಹ ಕಟ್ಟಡ ಕಾರ್ಮಿಕರ ಹಾವಳಿ

ದಾವಣಗೆರೆ, ಜು. 15 – ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮೂಲಕ ಕಟ್ಟಡ ಕಾರ್ಮಿಕರಿಗೆ ಶಿಕ್ಷಣ, ಮದುವೆ ಸೇರಿದಂತೆ ಹಲವು ವಿಷಯಗಳಿಗೆ ನೀಡುತ್ತಿರುವ ಸೌಲಭ್ಯಗಳಿಗೆ ಅನರ್ಹರು ಅರ್ಜಿ ದಾಖಲಿಸುವ ಹಾವಳಿ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ಇದುವರೆಗೂ ಕಟ್ಟಡ ಕಾರ್ಮಿಕರೆಂದು ನೋಂದಾಯಿಸಿಕೊಂಡಿರುವವರ ಸಂಖ್ಯೆ 1,83,216 ಆಗಿದೆ. ವರ್ಷದಿಂದ ವರ್ಷಕ್ಕೆ ಕಟ್ಟಡ ಕಾರ್ಮಿಕರೆಂದು ನೋಂದಾಯಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ 2023-24ರ ಆರ್ಥಿಕ ವರ್ಷದಲ್ಲಿ ಕಟ್ಟಡ ಕಾರ್ಮಿಕರೆಂದು ನೋಂದಾಯಿಸಲು 20,222 ಅರ್ಜಿಗಳನ್ನು ಸಲ್ಲಿಸಲಾಗಿದೆ. 

ಕಟ್ಟಡ ಕಾರ್ಮಿಕರಲ್ಲದೇ ಇರುವವರು ನಿಗಮದ ಸೌಲಭ್ಯ ಪಡೆಯುವುದನ್ನು ತಡೆಯಲು ಕಾರ್ಮಿಕ ಇಲಾ ಖೆಯ ಅಧಿಕಾರಿಗಳು ಬೆವರು ಹರಿಸಬೇಕಾಗಿ ಬಂದಿದೆ. ನೋಂದಣಿ ಹಾಗೂ ಸೌಲಭ್ಯ ಪಡೆಯುವ ಎರಡೂ ಹಂತಗಳಲ್ಲಿ ಅನರ್ಹರಿಗೆ ಕಡಿವಾಣ ಹಾಕಲಾಗುತ್ತಿದೆ.

ಕಳೆದ ಒಂದು ವರ್ಷದಲ್ಲಿ ನಿಗಮದ ಮೂಲಕ ಸೌಲಭ್ಯ ಪಡೆಯಲು 3,337 ಅರ್ಜಿಗಳು ದಾಖಲಾಗಿದ್ದರೆ, ಈ ಪೈಕಿ 1,167 ಅನರ್ಹರೆಂದು ತಿರಸ್ಕರಿಸಲಾಗಿದೆ. ಉಳಿದಂತೆ 2,211 ಕಾರ್ಮಿಕರಿಗೆ 12.91 ಕೋಟಿ ರೂ. ನೆರವನ್ನು ವಿತರಿಸಲಾಗಿದೆ.

ನಿಗಮದ ಮೂಲಕ ಮದುವೆ ಸಹಾಯ ಧನವಾಗಿ 60 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಶಿಕ್ಷಣ, ವೈದ್ಯಕೀಯ, ಹೆರಿಗೆ ಹಾಗೂ ತಾಯಿ-ಮಗು ಸಹಾಯ ಹಸ್ತ ಯೋಜನೆ ಯಡಿ ಕಟ್ಟಡ ಕಾರ್ಮಿಕರಿಗೆ ನೆರವು ನೀಡಲಾಗುತ್ತಿದೆ.

ಈ ಸೌಲಭ್ಯಗಳನ್ನು ಪಡೆಯಲು ಕಟ್ಟಡ ಕಾರ್ಮಿಕರಲ್ಲದವರೂ ಅರ್ಜಿ ದಾಖಲಿಸುತ್ತಿದ್ದಾರೆ. ಬೇರೆ ಬೇರೆ ವಲಯದವರು ತಾವು ಕಟ್ಟಡ ಕಾರ್ಮಿಕರೆಂದು ಹೇಳಿಕೊಂಡು ಅರ್ಜಿ ದಾಖಲಿಸುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ನಾವು ಅರೆಕಾಲಿಕವಾಗಿ ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಸಬೂಬು ನೀಡುತ್ತಾರೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಈ ಸಮಸ್ಯೆ ತಡೆಯಲು ನೋಂದಣಿ ಸಮಯದಲ್ಲೇ ಅನರ್ಹರಿಗೆ ಜರಡಿ ಹಿಡಿಯಲು ಪ್ರಯತ್ನ ನಡೆಸಲಾಗುತ್ತಿದೆ. ಕಳೆದ 2023-24ರ ಆರ್ಥಿಕ ವರ್ಷದಲ್ಲಿ ಕಟ್ಟಡ ಕಾರ್ಮಿಕರೆಂದು ನೋಂದಾಯಿಸಲು 20,222 ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಪೈಕಿ 9,803 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಇಷ್ಟಾದರೂ, ಕೆಲ ಅನರ್ಹರು ಕಟ್ಟಡ ಕಾರ್ಮಿಕರೆಂದು ನೋಂದಾಯಿಸಿಕೊಂಡಿದ್ದಾರೆ. ನಂತರ ಇವರು ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಪರಿಶೀಲಿಸಿ, ಅವರ ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

error: Content is protected !!