ದಾವಣಗೆರೆ, ಜು. 10- ಖಾಲಿ ಕ್ಯಾನವಾಸ್ ರೀತಿ ಇರುವ ನಮ್ಮ ಜೀವನವನ್ನು ಉತ್ತಮ ಆಯ್ಕೆಗಳೆಂಬ ಬಣ್ಣಗಳ ಮೂಲಕ `ಮಾಸ್ಟರ್ ಪೀಸ್’ ನಂತೆ ಮಾಡಲು ಉತ್ತಮ ಜ್ಞಾನ, ಕೌಶಲ್ಯ, ನಾಯಕತ್ವದ ಗುಣ ಅಗತ್ಯ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ 2023-24ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ವಿದ್ಯಾರ್ಥಿನಿಯರನ್ನುದ್ದೇಶಿಸಿ ಹಿತ ನುಡಿದರು.
ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಇದರಿಂದ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ನಾಯಕತ್ವ ಗುಣ ಬೆಳೆಯುತ್ತದೆ. ರೆಡ್ಕ್ರಾಸ್ನಂತಹ ಸಾಮಾಜಿಕ ಸೇವಾಸಂಸ್ಥೆಗಳಲ್ಲೂ ಪಾಲ್ಗೊಳ್ಳಿ. ಸಸಿ ನೆಡುವ, ಪರಿಸರ ಸಂರಕ್ಷಿಸುವ, ಆರೋಗ್ಯದ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ ಎಂದು ಕಿವಿ ಮಾತು ಹೇಳಿದರು.
ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಕಾಯಿಲೆ ಸಾಮಾನ್ಯವಾಗಿವೆ. ಇವುಗಳಿಂದ ದೂರ ಇರಲು ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯ ಬಹಳ ಮುಖ್ಯ ಎಂದು ಪ್ರತಿಪಾದಿಸಿದರು.
ಕಿರು ಸಂವಾದ ನಡೆಸಿದ ಪ್ರಭಾ
ಪಠ್ಯಪೂರಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ತಮ್ಮ ಮಾತಿನ ಆರಂಭದಲ್ಲಿ ವಿದ್ಯಾರ್ಥಿಗಳ ಮುಂದೆ ಕೆಲ ಪ್ರಶ್ನೆಗಳನ್ನಿತ್ತರು. ಯಾವ ಚಟುವಟಿಕೆ ಯಲ್ಲೂ ಭಾಗವಹಿಸದವರು ಯಾರಿದ್ದೀರಿ ಕೈ ಎತ್ತಿ ಎಂದಾಗ, ಹೆಚ್ಚಿನ ವಿದ್ಯಾರ್ಥಿಗಳು ಕೈ ಮೇಲಿತ್ತಿದರು. ಭಾಗವಹಿಸದೇ ಇದ್ದುದಕ್ಕೆ ಕಾರಣವೇನು? ಎಂದು ಸಂಸದರು ಪ್ರಶ್ನಿಸಿದಾಗ, ಓರ್ವ ವಿದ್ಯಾರ್ಥಿನಿ ಓದಲು ಸಮಯ ಸಿಗದ ಕಾರಣ ಭಾಗವಹಿಸಿಲ್ಲ ಎಂದರು.
ಮತ್ತೋರ್ವ ವಿದ್ಯಾರ್ಥಿನಿ `ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಊರಿಗೆ ಹೋಗಬೇಕಾದ ಬಸ್ ಮಿಸ್ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಪಾಲ್ಗೊಂಡಿಲ್ಲ ಎಂದರೆ, `ಸೀನಿಯರ್ಸ್ ಭಾಗವಹಿಸಲಿ ಎಂದು ನಾನು ಸುಮ್ಮನಿದ್ದೆ’ ಎಂಬುದು ಮತ್ತೊಬ್ಬರ ಉತ್ತರವಾಗಿತ್ತು.
ಉತ್ತರ ಆಲಿಸಿದ ಡಾ.ಪ್ರಭಾ, ನಾನು ವಿದ್ಯಾರ್ಥಿನಿಯಾಗಿದ್ದಾಗ ಆಲ್ರೌಂಡರ್ ಆಗಿದ್ದೆ. ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದೆ. ನೀವೂ ಸಹ ಕನಿಷ್ಟ ಒಂದೆರಡರಲ್ಲಾದರೂ ಭಾಗವಹಿಸಿ ಎಂದು ಸಲಹೆ ನೀಡಿದರು.
ಪುಸ್ತಕಗಳು ಉತ್ತಮ ಸ್ನೇಹಿತರು. ಗ್ರಂಥಾಲದಲ್ಲಿ ಪುಸ್ತಕಗಳ ಜೊತೆ ಹೆಚ್ಚಿನ ಸಮಯ ಕಳೆಯಿರಿ. ಮೊಬೈಲ್ ಬಳಕೆಯಿಂದ ಆದಷ್ಟೂ ದೂರವಿರಿ. ಮಾಹಿತಿ ಪಡೆಯಲು ಮಾತ್ರ ಮೊಬೈಲ್ ಬಳಕೆ ಮಾಡಿ. ಜಂಕ್ ಫುಡ್ಗಳ ಆಸೆಯಿಂದ ಕ್ರಮೇಣ ಹೊರಗೆ ಬನ್ನಿ. ಹಸಿರು ಸೊಪ್ಪು, ತರಕಾರಿ ಸೇರಿದಂತೆ ಪೌಷ್ಠಿಕ ಆಹಾರ ಸೇವಿಸಿ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಡಾ.ಮಂಜಣ್ಣ ಎಂದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ವಿಶ್ರಾಂತ ಪ್ರಾಧ್ಯಾಪಕ ಡಾ.ತಿಪ್ಪಾರೆಡ್ಡಿ ಅತಿಥಿಗಳಾಗಿ ಆಗಮಿಸಿದ್ದರು. ಕು.ಪ್ರಕೃತಿ, ವರ್ಷಿತಾ ಪ್ರಾರ್ಥಿಸಿದರು. ಐಕ್ಯೂಎಸಿ ಸಂಚಾಲಕ ಡಾ.ಭೀಮಪ್ಪ ಎಂ.ಪಿ. ಸ್ವಾಗತಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ತೊಪ್ಪಲ ಕೆ.ಮಲ್ಲಿಕಾರ್ಜುನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಕಾವ್ಯಶ್ರೀ ಜಿ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸಿದ್ದಲಿಂಗಮ್ಮ ಬಿ.ಜಿ. ಬಹುಮಾನ ವಿತರಿಸಿದರು.
ಸಿಂಧು ಹಾಗೂ ಶ್ವೇತಾ ನಿರೂಪಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪ್ರಭು ಕೆ.ಇಂಗಲಗೊಂದಿ ವಂದಿಸಿದರು.