ರಾಣೇಬೆನ್ನೂರು, ಜು. 10- ನಾಡಿನ ಎಲ್ಲೆಡೆ ವರುಣನ ಕೃಪೆಯಿಂದ ಹಳ್ಳ-ಕೊಳ್ಳಗಳು, ಕೆರೆ-ಕಟ್ಟೆಗಳು ತುಂಬಿದ್ದು ಜೋಗವೂ ಸೇರಿದಂತೆ ವಿವಿಧ ಸಣ್ಣ-ಪುಟ್ಟ ಜಲಪಾತಗಳ ಭೋರ್ಗರೆತ ಕೇಳಿಬರುತ್ತಿದೆ. ಆದರೆ ಹಾವೇರಿ ಜಿಲ್ಲೆಯಲ್ಲಿನ ಮದಗದ ಕೆರೆ ಬರಿದಾಗಿದ್ದು, ಕುಮದ್ವತಿ ನದಿ ಬತ್ತಿದೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಹಾಗೂ ರಾಣೇಬೆನ್ನೂರು ತಾಲ್ಲೂಕು ಗಳಲ್ಲಿ ಸುಮಾರು 80 ಕಿ.ಮೀ ನಷ್ಟು ಹರಿಯುವ ಹಿರೇಹೊಳಿ ತುಂಗಭದ್ರೆಯು ಮೈದುಂಬಿ ಸಾಗರ ಸೇರುವ ತವಕದಲ್ಲಿ ಮುನ್ನಡೆದಿದ್ದಾಳೆ. ಈ ತಾಲ್ಲೂಕುಗಳಲ್ಲೇ 80 ಕಿ.ಮೀ. ನಷ್ಟು ಹರಿಯುತ್ತಿರುವ ಚಿಗಹೊಳಿ ಕುಮದ್ವತಿ ತುಂಗಭದ್ರೆಯನ್ನೂ ಸೇರಲಾಗದೇ ತನ್ನೊಡಲು ಒಣಗಿಸಿಕೊಂಡಿದ್ದಾಳೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಕೆರೆಯ ಡ್ಯಾಂ ತುಂಬಿದರೆ ಐತಿಹಾಸಿಕ ಮದಗದ ಮಾಸೂರು ಕೆರೆಗೆ ನೀರು ಬಂದು ಕೋಡಿ ಬಿದ್ದು ಜಲಪಾತದ ಭೋರ್ಗರೆತ ದೊಂದಿಗೆ ಕುಮದ್ವತಿ ಮೈದುಂಬಿಕೊಳ್ಳುತ್ತಾಳೆ. ಆದರೆ ಆ ಸೊಬಗು ಇದುವರೆಗೂ ಕಾಣುತ್ತಿಲ್ಲ. ಮದಗದ ಕೆರೆಯ ಅಲ್ಲಲ್ಲಿನ ಗುಂಡಿಗಳಲ್ಲಿ ಸುತ್ತಲಿನ ಮಳೆಯ ನೀರಷ್ಟೆ ಸಂಗ್ರಹವಾಗಿದ್ದು ಕಂಡುಬರುತ್ತಿದೆ.
ಕುಮದ್ವತಿಯ ಬರಿದಾದ ಒಡಲಿನಿಂದಾಗಿ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು, ಖಂಡೇ ಬಾಗೂರು, ಮಳಗಿ, ಕೋಡಮಗ್ಗಿ, ತಿಪ್ಪಾಯಿಕೊಪ್ಪ, ಹಿರೇಮೊರಬ, ಚಿಕ್ಕಮೊರಬ, ಎಲಿವಾಳ, ರಟ್ಟಿಹಳ್ಳಿ, ತೋಟಗಂಟಿ, ಸಣ್ಣಗುಬ್ಬಿ, ಹಿರೆಮಾದಾಪುರ, ಕುಡಪಲಿ, ಎಡಗೋಡು, ಬಡಾಸಂಗಾಪುರ, ರಾಣೇಬೆನ್ನೂರು ತಾಲ್ಲೂಕಿನ ಕೂಲಿ, ಹಿರೇಮಾಗನೂರು, ಚಿಕ್ಕಮಾಗನೂರು, ನಿಟ್ಟೂರು, ಗೋಡಿಹಾಳ, ಕುಪ್ಪೇಲೂರು, ನಂದಿಹಳ್ಳಿ, ಲಿಂಗದಹಳ್ಳಿ, ಮುಷ್ಟೂರು, ಮಣಕೂರು, ಹೊಳೆ ಆನ್ವೇರಿ ಮುಂತಾದ ಕುಮದ್ವತಿ ಅವಲಂಬಿತ ಗ್ರಾಮಗಳ ಜನರು ಬದುಕು ಬರಡಾಗುವಂತಾಗಿದೆ.