ಜಗಳೂರಿನ ಕಾರ್ಯಕ್ರಮದಲ್ಲಿ ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ್ ಭರವಸೆ
ಜಗಳೂರು, ಜು. 9 – ದಶಕಗಳ ಸಾಮಾಜಿಕ, ರಾಜಕೀಯ ಸೇವೆಯನ್ನು ಗುರುತಿಸಿ ಸರ್ಕಾರ ನಿಗಮದ ಅಧ್ಯಕ್ಷ ಸ್ಥಾನಮಾನ ನೀಡಿದ್ದು. ಅರ್ಹರಿಗೆ ಸೌಲಭ್ಯ ಒದಗಿಸುವ ಮೂಲಕ ಬಂಜಾರ ಸಮುದಾಯದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವೆ ಎಂದು ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ್ ಭರವಸೆ ನೀಡಿದರು.
ಪಟ್ಟಣದ ಜೆಎಂಎಫ್ ಸಿ ಮತ್ತು ಸಿವಿಲ್ ನ್ಯಾಯಾಲಯದ ಸಭಾಂಗಣದಲ್ಲಿ ತಾಲ್ಲೂಕು ವಕೀಲರ ಸಂಘದಿಂದ ನೂತನ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾ ರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ವಕೀಲ ವೃತ್ತಿಯಿಂದ ಆರಂಭವಾದ ನನ್ನ ಜೀವನ ಸ್ಥಳೀಯವಾಗಿ ಸಾಕಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ನ್ಯಾಯ ಕಲ್ಪಿಸಿರುವೆ. ವಕೀಲ ವೃತ್ತಿಯ ಜೊತೆಗೆ ಸಮಾಜವಾದಿ ಸಿದ್ಧಾಂತದೊಂದಿಗೆ 1970 ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಗೊಂಡ ನಾನು ಹಲವಾರು ಬಾರಿ ರಾಜಕೀಯ ಏಳು ಬೀಳು ಕಂಡಿರುವೆ. ಜಿಲ್ಲೆಯ ಸಂಸದರ, ಸಚಿವರ, ಶಾಸಕರುಗಳ ಸಹಕಾರ ಹಾಗೂ ಬಂಜಾರ ಸಮುದಾಯದ ಮುಖಂಡರುಗಳ ಬೆಂಬಲದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನನ್ನು ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷನನ್ನಾಗಿ ನೇಮಿಸಿದ್ದಾರೆ ಎಂದರು.
ತಾಲ್ಲೂಕಿನಲ್ಲಿ ನಾನು ವಕೀಲನಾಗಿ ಸೇವೆಗೈಯ್ಯುತ್ತಿದ್ದ ವೇಳೆ ಹಲವಾರು ವಕೀಲ ಸ್ನೇಹತ್ವದ ಜೊತೆಗೆ ಹೋರಾಟ ನಡೆಸಿದ್ದರ ಪರಿಣಾಮ ವಿಶಾಲವಾದ ಜಾಗದಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ಕೋರ್ಟ್ ನಿರ್ಮಾಣಗೊಂಡಿದೆ.ಹಲವಾರು ಪ್ರಕರಣಗಳ ಕಲಾಪಗಳು ಸ್ಥಳೀಯ ಕೋರ್ಟ್ ನಲ್ಲಿ ಇತ್ಯರ್ಥಗೊಳ್ಳಲು, ಬಡಜನರಿಗೆ ಅನುಕೂಲವಾಗಿದೆ ಎಂದರು.
ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಮರೇನ ಹಳ್ಳಿ ಟಿ. ಬಸವರಾಜ್ ಮಾತನಾಡಿ, ಬರಪೀಡಿತ ತಾಲ್ಲೂಕಿನಲ್ಲಿ ವಕೀಲ ವೃತ್ತಿಯಿಂದ ಆಗಮಿಸಿರು ವವರಿಗೆ ಸೂಕ್ತ ರಾಜಕೀಯ ಸ್ಥಾನಮಾನ ಲಭಿಸಿರುವುದು ವಕೀಲರ ವೃತ್ತಿ ಗೌರವ ಹಾಗೂ ಸ್ಫೂರ್ತಿ, ಕಾಂಗ್ರೆಸ್ ಪಕ್ಷದ ಆಡಳಿತ ಸಮಾನತೆ, ಸಾಮಾಜಿಕ ನ್ಯಾಯ ಕಲ್ಪಿಸಿದೆ ಎಂದು ಹೇಳಿದರು.
ಸಂದರ್ಭದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕ ಮಂಜುನಾಥ್, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎ.ಕೆ. ಪರುಸಪ್ಪ, ವಕೀಲರಾದ ಕೆ.ಎನ್. ಪರಮೇಶ್ವರಪ್ಪ, ಕೆ.ಎಂ. ಬಸವರಾಜಪ್ಪ, ರುದ್ರೇಶ್, ಡಿ.ವಿ. ನಾಗಪ್ಪ, ಬಸವರಾಜಪ್ಪ, ಓಂಕಾರೇಶ್ವರ, ಪಟೇಲ್, ಲಕ್ಷ್ಮಣ್, ಆರ್.ಓಬಳೇಶ್, ಸುನಿಲ್, ನಾಗೇಶ್ ಮುಂತಾದವರು ಇದ್ದರು.