ಕೊಡಗನೂರಿನ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ
ಮಾಯಕೊಂಡ, ಜೂ. 23 – ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಗುಣವಿಲ್ಲದವರು ಎಷ್ಟು ಅಂಕ ಗಳಿಸಿದರೂ ಸಮಾಜಕ್ಕೆ ಲಾಭವಿಲ್ಲ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಸಮೀಪದ ಕೊಡಗನೂರಿನಲ್ಲಿ ಮಾಯಕೊಂಡದ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎನ್ನೆಸ್ಸೆಸ್ ಶಿಬಿರ ಸಹಬಾಳ್ವೆ ಕಲಿಸುತ್ತದೆ. ಯುವಕರು ದಾರಿ ತಪ್ಪಿ ನಡೆಯುತ್ತಿದ್ದಾರೆ. ಗುರಿ ಮುಟ್ಟುವವರೆಗೆ ಅಡ್ಡದಾರಿ ಹಿಡಿಯಬಾರದು. ಯಾವುದೇ ಕಾರಣಕ್ಕೂ ವಿಚಲಿತರಾಗಬಾರದು. ಶಿಕ್ಷಣದಲ್ಲಿ ಅಂಕ ಪಡೆಯುವುದೇ ಮುಖ್ಯವಲ್ಲ, ಮಾನವೀಯತೆ ಬೆಳೆಸಿಕೊಳ್ಳಬೇಕು. ಕಷ್ಟದಲ್ಲಿರುವರಿಗೆ ಸ್ಪಂದಿಸುವ ಕೆಲಸ ಮಾಡಿದರೆ ಅಂಕ ಗಳಿಕೆಗೆ ಅರ್ಥ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ದೇವಸ್ಥಾನದ ಗಂಟೆಗಿಂತ ಶಾಲೆ ಗಂಟೆಯನ್ನು ಹೆಚ್ಚು ಬಾರಿಸಬೇಕು. ಬಜೆಟ್‌ಲ್ಲಿನ ಕಾಲು ಭಾಗದಷ್ಟು ಹಣ ಶಿಕ್ಷಣಕ್ಕೇ ಮೀಸಲಿಡುವಂತಾಗಬೇಕು. ಕೇಂದ್ರ, ರಾಜ್ಯ ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡಲು ಪ್ರಯತ್ನ ಮಾಡುವೆ. ದಾನಿಗಳು ಬೇರೆಯಾವದಾನಕ್ಕಿಂತ ಬದಲಾಗಿ ಶಿಕ್ಷಣಕ್ಕೆ ಹೆಚ್ಚಿನ ದಾನ ನೀಡಬೇಕು. ಇಲ್ಲಿನ ಪಿಯು ಕಾಲೇಜು ವ್ಯವಸ್ಥೆ ಕುಂಠಿತವಾಗಿದೆ. ಅದನ್ನು ಗ್ರಾಮಸ್ಥರು ಸರಿಪಡಿಸಬೇಕು. ಮಾಯಕೊಂಡ ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಬಿಎಸ್ಸಿ ವಿಭಾಗ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಕತ್ತಲಗೆರೆ ತಿಪ್ಪಣ್ಣ ಮಾತನಾಡಿ, ವಿದ್ಯೆ ಯಾರಾದರೂ ಹೇಗಾದರೂ ಕಲಿಯುಬಹುದು, ಆದರೆ ಸಮಾಜದ ಶಾಂತಿ, ನೆಮ್ಮದಿ ಕಾಪಾಡುವುದು, ಪರಿಸರ ರಕ್ಷಿಸುವುದು, ಇಂಥ ಶಿಬಿರಗಳಿಂದ ಸಾಧ್ಯ. ಅತೀ ಹೆಚ್ವು ಓದಿದವರು ತಂದೆ-ತಾಯಿಗಳನ್ನು ಸಾಕದ ಸ್ಥಿತಿಇದೆ. ಇಂತಹ ಪಿಡುಗಿಗೆ ಎನ್ಎಸ್ಎಸ್ ಶಿಬಿರ ಸಹಕಾರಿ. ಆಸೆಗೆ ಮಿತಿಯಿದ್ದರೆ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂಬುದನ್ನು ಅರಿಯಬೇಕು ಎಂದರು.
ಕಾರ್ಯಕ್ರಮ ಸಂಯೋಜನಾಧಿಕಾರಿ ಅಶೋಕ ಕುಮಾರ ಪಾಳೇದ, ಎನ್ಎಸ್ಎಸ್ ರಾಷ್ಟ್ರದ ಬಹುದೊಡ್ಡ ವಿದ್ಯಾರ್ಥಿ ಸಂಘಟನೆ. ವಿದ್ಯಾರ್ಥಿ ಜೀವನದಲ್ಲಿ ಬಹುದೊಡ್ಡ ಬದಲಾವಣೆ ತಂದಿದೆ. ಯುವಕರು ದಾರಿತಪ್ಪುತ್ತಿದ್ದು, ಅವರನ್ನು ಸರಿದಾರಿಗೆ ತರಲು ಎನ್ ಎಸ್ ನಿಂದ ಸಾಧ್ಯವಾಗಿದೆ ಎಂಬುದು ದೃಢಪಟ್ಟಿದೆ. ಎನ್ಎಸ್ಎಸ್ ಮಹಾತ್ಮ ಗಾಂಧೀಜಿಯವರ ಚಿಂತನೆ ಅನುಷ್ಟಾನಗೊಳಿಸುವ ಉದ್ದೇಶ ಹೊಂದಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಶಿಬಿರದ ಸದ್ಬಳಕೆ ಮಾಡಿಕೊಂಡು ಉತ್ತಮ ಪ್ರಜೆಗಳಾಗಬೇಕು. ಪರಿಸರ ಸಂರಕ್ಷಣೆ ಮಾಡಬೇಕು ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕಾಳೀಬಾಯಿ ಮಾತನಾಡಿ, ತಂದೆ- ತಾಯಿಗಳು ಪಡುವ ಕಷ್ಟವನ್ನು ನೆನಸಿಕೊಂಡು ವಿದ್ಯಾರ್ಥಿಗಳು ಮುಂದೆ ಬರಬೇಕು. ಕಷ್ಟಪಟ್ಟು ಗುರಿ ಸಾಧಿಸಬೇಕು ಎಂದು ಕರೆ ನೀಡಿದರು. ಬಸವೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಎಮ್.ಎಲ್ ತ್ರಿವೇಣಿ ಅಧ್ಯಕ್ಷತೆ ವಹಿಸಿದ್ದರು.
ಆಂಜನೇಯ ಸೇವಾ ಸಮಿತಿ ಧರ್ಮದರ್ಶಿ ಎಚ್.ಆರ್. ಅಶೋಕಣ್ಣ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ತಿಮ್ಮಣ್ಣ, ಶಿವಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಜಯದೇವಪ್ಪ, ಮಾಜಿ ಅಧ್ಯಕ್ಷ ಲಕ್ಷ್ಮಣ ಮಾತನಾಡಿದರು.
ಶಿಬಿರಾಧಿಕಾರಿಗಳಾದ ಡಾ. ಜಿ.ಸಿ. ಸದಾಶಿವಪ್ಪ, ಡಾ. ಬಿ.ಎಚ್. ಲಕ್ಷ್ಮಣ್ ಸ್ವಾಗತಿಸಿ, ನಿರೂಪಿಸಿದರು. ದೈಹಿಕ ನಿರ್ದೇಶಕ ಬಾಲಚಂದ್ರ ವಂದಿಸಿದರು.
ಮುಖಂಡರಾದ ಕುಬೇರಣ್ಣ, ಪ್ರಶಾಂತ್, ರೇವಣಸಿದ್ದಪ್ಪ, ಸೈಯದ್ ನೌಷದ್, ಪೈಲ್ವಾನ್ ಪರಮೇಶಣ್ಣ ಮತ್ತಿತರರಿದ್ದರು.