ಸೂಳೆಕೆರೆ ಸಮೀಪದ ಗುಡ್ಡದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಅಕ್ಷೇಪ

ಸೂಳೆಕೆರೆ ಸಮೀಪದ ಗುಡ್ಡದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಅಕ್ಷೇಪ

ಚನ್ನಗಿರಿ, ಜೂ. 23 – ತಾಲ್ಲೂಕಿನ ಸೂಳೆಕೆರೆ ಸಮೀಪದ ಸೊಮ್ಲಾಪುರ, ಸಿದ್ದಾಪುರ ಗ್ರಾಮದ ಬಳಿಯ ಗುಡ್ಡದ ಮೇಲೆ ಬೆಸ್ಕಾಂ ಇಲಾಖೆ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲು ಹೊರಟಿರುವುದನ್ನು ವಿರೋಧಿಸಿ, ಸೂಳೆಕೆರೆ ಸಂರಕ್ಷಣಾ ಸಮಿತಿ ಹಾಗೂ ಖಡ್ಗ ಸಂಸ್ಥೆಯ ಕಾರ್ಯಕರ್ತರು ಇಂದು ಭಾನುವಾರ ಗುಡ್ಡದಲ್ಲಿ ಸಸಿ ನೆಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಸೂಳೆಕೆರೆ ಸಂರಕ್ಷಣಾ ಸಮಿತಿ ಆಧ್ಯಕ್ಷ ಪಾಂಡೋಮಟ್ಟಿ ವಿರಕ್ತಮಠದ ಡಾ. ಶ್ರೀ ಗುರುಬಸವ ಸ್ವಾಮೀಜಿ ಅವರು ಮಾತನಾಡಿ, ಮನುಕುಲ ಇಂದು ಉಸಿರಾಡುತ್ತಿರುವುದು ಗಿಡ ಮರಗಳಿಂದ ಮನುಷ್ಯ ತನ್ನ ಸ್ವಾರ್ಥ ಕ್ಕಾಗಿ ಬೆಳೆದು ನಿಂತಿರುವ ಮರ ಕಡಿದು ಹಾಕುತ್ತಿದ್ದಾನೆ. ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಮಾಡುವುದು ಸರಿಯಲ್ಲ ಎಂದು ಎಂದು ಹೇಳಿದರು.

ರಾಜ್ಯದಲ್ಲಿ ಆಡಳಿತ ಸರ್ಕಾರ ಜನರ ಅನುಕೂಲತೆಗಾಗಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲು ಮುಂದಾಗಿದೆ. ಅದಕ್ಕಾಗಿ ಸೂಳೆಕೆರೆ ಪಕ್ಕದ ಗ್ರಾಮದ ಗುಡ್ಡವನ್ನು ಗುರುತಿಸಿದೆ. ಆದರೆ, ಈ ಕುರಿತು ಸ್ಥಳೀಯರ ಸಭೆ ಕರೆದು ಅಭಿಪ್ರಾಯ, ಸಾಧಕ ಬಾಧಕ ಕೇಳಿಲ್ಲ ಎಂದರು.

ಕೇವಲ ಬೆಸ್ಕಾಂ ಇಲಾಖೆಯ ಅರ್ಜಿ ಮುಂದಿಟ್ಟುಕೊಂಡು ಸೋಲಾರ್ ಪ್ಲಾಂಟ್ ಮಾಡುತ್ತಿರುವುದನ್ನು ನಾವು ಒಪ್ಪುವುದಿಲ್ಲ. ಈ ಸ್ಥಳದಲ್ಲಿ ಬೆಲೆ ಬಾಳುವ ಅನೇಕ ಜಾತಿಯ ಮರಗಿಡಗಳಿವೆ, ಅಳಿವಿನಂಚಿನ ಕಾಡು ಪ್ರಾಣಿಗಳಿವೆ. ಇದನ್ನೆಲ್ಲ ಪರಿಗಣನೆಗೆ ತೆಗೆದುಕೊಳ್ಳದೇ ಕಾಮಗಾರಿಗೆ ಮುಂದಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಾಂತವೀರ ಸ್ವಾಮೀಜಿ ಮಾತನಾಡಿ, ಸೋಲಾರ್ ಪ್ಲಾಂಟ್ ಅವಶ್ಯಕತೆ ನಮ್ಮ ತಾಲ್ಲೂಕಿಗೆ ಇಲ್ಲ, ತಾಲ್ಲೂಕಿನ ಅಭಿವೃದ್ಧಿಗೆ ಇತರೆ ನೂರಾರು ಯೋಜನೆಗಳಿವೆ. ಬೇಕಾದರೆ, ಅವುಗಳನ್ನು ಅನುಷ್ಠಾನ ಮಾಡಲಿ. ಅದನ್ನು ಬಿಟ್ಟು ಇರುವ ಒಂದಿಷ್ಟು ಕಾಡನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳುಗೆಡವಲು ಪ್ರಯತ್ನಿಸಬೇಡಿ ಎಂದು ಹೇಳಿದರು.

ಐತಿಹಾಸಿಕ ತಾಣವಾಗಿರುವ ಸೂಳೆಕೆರೆ ರಾಜ್ಯದಲ್ಲಿ 2ನೇ ದೊಡ್ಡ ಕೆರೆ. ಅದರ ಸೌಂದರ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದರು.

ಈ ಸಂದರ್ಭದಲ್ಲಿ ಸೊಮ್ಲಾಪುರ, ಸಿದ್ದಾಪುರ ಗ್ರಾಮದ ಬಳಿಯ ಗುಡ್ಡದಲ್ಲಿ ಸೂಳೆಕೆರೆ ಸಂರಕ್ಷಣಾ ಹೋರಾಟ ಸಮಿತಿಯಿಂದ ಸುಮಾರು 1 ಸಾವಿರ ಬೀಜದುಂಡೆಗಳನ್ನು ಬಿತ್ತನೆ ಮಾಡಲಾಯಿತು.

ಸಂರಕ್ಷಣಾ ಸಮಿತಿಯ ಮುದಿಗೆರೆ ಚಂದ್ರಹಾಸ, ಸುನೀಲ್, ಪ್ರಕಾಶ್, ಮಂಜಪ್ಪ, ಬಿ. ರವಿ, ಕುಬೇಂದ್ರಸ್ವಾಮಿ, ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಜಗದೀಶ್ ಇದ್ದರು.

error: Content is protected !!