ಯೋಗಾಭ್ಯಾಸ ಆಚರಣೆಗಷ್ಟೇ ಸೀಮಿತವಾಗದೆ ನಿತ್ಯದ ಅಭ್ಯಾಸವಾಗಬೇಕು: ತರಳಬಾಳು ಶ್ರೀ
ದಾವಣಗೆರೆ, ಜೂ.21-ಮರ್ಕಟದಂತಹ ಮನಸ್ಸಿಗೆ ಕಡಿವಾಣ ಹಾಕಲು ಯೋಗ, ಧ್ಯಾನ ಅತ್ಯಗತ್ಯ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಮುಂಜಾನೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಯೋಗದ ಮಹತ್ವ ತಿಳಿಸಿಕೊಟ್ಟರು.
ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ದಾರಿ ತಪ್ಪಲು, ಹಿಂಸಾತ್ಮಕ ಕೃತ್ಯಗಳು ಹೆಚ್ಚಾಗಲು ಮನಸ್ಸೇ ಕಾರಣ. ಮನಸ್ಸು ಹತೋಟಿಯಲ್ಲಿರದಿದ್ದರೆ ಇಂತಹ ಘಟನೆಗಳು ನಡೆಯುತ್ತವೆ. ಯೋಗ, ಧ್ಯಾನದಿಂದ ಮಾತ್ರ ಮನಸ್ಸನ್ನು ಹತೋಟಿ ಯಲ್ಲಿಟ್ಟುಕೊಳ್ಳಬಹುದು ಎಂದರು.
ಶರೀರದಲ್ಲಿರುವ ಇಂದ್ರಿಯಗಳು ಮನಸ್ಸಿನ ಹತೋ ಟಿಯಲ್ಲಿದ್ದಾಗ ಮಾತ್ರ ಸಂತೋಷ ಅನುಭವಿಸಲು ಸಾಧ್ಯ. ಮನಸ್ಸು ಹಾವು ಶರೀರ, ಹಾವಿನ ಬುಟ್ಟಿ ಇದ್ದಂತೆ. ಬುಟ್ಟಿಯಲ್ಲಿರುವ ಹಾವು ಯಾವಾಗ ಕಚ್ಚುತ್ತದೋ ಗೊತ್ತಿಲ್ಲ. ಹಾವಾಡಿಗ ಹೇಗೆ ಹಾವಿನ ತಲೆಗೆ ಏಟು ಕೊಟ್ಟು ಸುಮ್ಮನಿರಿಸುತ್ತಾನೋ ಹಾಗೆ ನಾವು ಮನಸ್ಸನ್ನು ನಿಯಂತ್ರಿಸಬೇಕು ಎಂದರು.
ನಾಯಿ ತನ್ನ ಬಾಲ ಅಲ್ಲಾಡಿಸುವುದು ಸಾಮಾನ್ಯ ಸಂಗತಿ. ಆದರೆ ಬಾಲವೇ ನಾಯಿಯನ್ನು ಅಲ್ಲಾಡಿಸಬಾರದು. ಹಾಗೆಯೇ ಮನಸ್ಸು ನಮ್ಮ ನಿಯಂತ್ರಣದಲ್ಲಿರಬೇಕೇ ಹೊರತು, ಮನಸ್ಸು ನಮ್ಮನ್ನು ಆಟ ಆಡಿಸಲು ಬಿಡಬಾರದು ಎಂದರು. ನೀರಿನಿಂದಲೇ ಕೆಸರು. ಆದರೆ ಅದೇ ಕೆಸರನ್ನು ಸ್ವಚ್ಛಗೊಳಿಸಲು ನೀರು ಬೇಕು. ಹಾಗೆಯೇ ನಮ್ಮ ಬಂಧನಕ್ಕೂ ಮುಕ್ತಿಗೂ ಮನಸ್ಸೇ ಕಾರಣ. ನಿತ್ಯವೂ ಪೂಜೆ, ಧ್ಯಾನ ಮಾಡುವು ದರಿಂದ ಮನಸ್ಸು ಹತೋಟಿಯಲ್ಲಿರುತ್ತದೆ ಎಂಬುದನ್ನು ವಚನಗಳಲ್ಲೂ ಹೇಳಲಾಗಿದೆ ಎಂದು `ಮನವೇ ಸರ್ಪ, ತನು ಹೇಳಿಗೆ’ ವಚನದ ಅರ್ಥ ವಿವರಿಸಿದರು.
ಆರೋಗ್ಯವಂತ ಜೀವನಕ್ಕಾಗಿ ಯೋಗ ಮುಖ್ಯ: ಡಾ.ಪ್ರಭಾ
ಆಧುನಿಕ ಜೀವನ ಶೈಲಿಯಿಂದಾಗಿ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ನಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ಇವುಗಳಿಂದ ದೂರವಿರಲು ನಿರಂತರ ಯೋಗಾಭ್ಯಾಸ ಬಹಳ ಮುಖ್ಯ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಏಕಾಗ್ರತೆ ಕೊರತೆ, ಒತ್ತಡ, ವ್ಯಸನಗಳಿಗೆ ತುತ್ತಾಗುವುದು ಮುಖ್ಯವಾಗಿ ಮೊಬೈಲ್ ಅಡಿಕ್ಷನ್ ತಡೆಗೆ ಯೋಗ ಪರಿಣಾಮಕಾರಿ. ಮಕ್ಕಳಿದ್ದಾಗಲೇ ಯೋಗದ ಮಹತ್ವ ತಿಳಿಸಿಕೊಡುವ ಅಗತ್ಯವಿದೆ ಎಂದವರು ಹೇಳಿದರು.
ಸಂಬಂಧ ಕೆಡಿಸುವ ಮೊಬೈಲ್ ಎಂಬ ಕರ್ಣ ಪಿಶಾಚಿ
ಸಂಸ್ಕೃತದಲ್ಲಿ ಮೊಬೈಲ್ಗೆ ಪರ್ಯಾಯ ಪದವಿಲ್ಲ. ಆದರೆ ಅದನ್ನು ಕರ್ಣ ಪಿಶಾಚಿ ಎನ್ನುಬಹುದು. ಮೊಬೈಲ್ನಿಂದ ಇಂದು ವೈವಾಹಿಕ ಸಂಬಂಧಗಳು ಹಾಳಾಗುತ್ತಿವೆ. ಯುವ ಸಮೂಹ ದಾರಿ ತಪ್ಪುತ್ತಿದೆ. ಆದರೆ ಇದಕ್ಕೆ ಮೊಬೈಲ್ ಕಾರಣವಲ್ಲ. ನಮ್ಮ ಮನಸ್ಸೇ ಕಾರಣ ಎಂದು ತರಳಬಾಳು ಶ್ರೀಗಳು ಹೇಳಿದರು.
ಸಿರಿಗೆರೆ ಸದ್ಧರ್ಮ ನ್ಯಾಯ ಪೀಠಕ್ಕೆ ಅನೇಕ ದೂರುಗಳು ಬರುತ್ತವೆ. ಅವುಗಳಲ್ಲಿ ಪತಿ-ಪತ್ನಿ ಪರಸ್ಪರ ಅನುಮಾನದಿಂದ ರಾತ್ರಿ ಮೊಬೈಲ್ ಚೆಕ್ ಮಾಡುವ ದೂರುಗಳೂ ಇರುತ್ತವೆ. ಕೆಲವೊಮ್ಮೆ `ನೀವೇ ಮೊಬೈಲ್ ನೋಡಿ ಬುದ್ದಿ’ ಎಂದು ನಮ್ಮ ಬಳಿ ಮೊಬೈಲ್ ತರುತ್ತಾರೆ.
ಮೊಬೈಲ್ ನೋಡುವ ಸಹವಾಸವೇ ಬೇಡ ಎಂದು ನಾವು ಮಧ್ಯವರ್ತಿಗಳಿಗೆ ಮೊಬೈಲ್ ಕೊಟ್ಟು ಪರಿಶೀಲನೆಗೆ ಹೇಳುತ್ತೇವೆ. ಕೆಲವೊಮ್ಮೆ ಮೊಬೈಲ್ಗಳನ್ನು ಸೀಜ್ ಮಾಡಿಸಲಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ಹೇಗೆ ಚಾಕುವನ್ನು ನಾವು ಒಳಿತಿಗೂ, ಕೆಡುಕಿಗೂ ಬಳಸಬಹುದೋ ಹಾಗೆಯೇ ಮೊಬೈಲ್ ಮೇಲೆ ನಮ್ಮ ನಿಯಂತ್ರಣವಿರಬೇಕು. ಅದಕ್ಕಾಗಿ ನಾವು ಯೋಗ-ಧ್ಯಾನದಿಂದ ಮನಸ್ಸನ್ನು ನಿಯಂತ್ರಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಯೋಗ ಎಂದರೆ ಕೇವಲ ಆಸನಗಳನ್ನು ಮಾಡುವುದಲ್ಲ. ಯಮ-ನಿಯಮಗಳನ್ನು ಆಚರಿಸುವುದೂ ಕೂಡ ಆಗಿದೆ. ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ಐದು ಯಮಗಳನ್ನು ಪಾಲಿಸಿದ್ದಲ್ಲಿ ಪ್ರಪಂಚದಲ್ಲಿ ಯಾವುದೇ ಸಂಘರ್ಷಗಳೂ ಉಂಟಾಗುತ್ತಿರಲಿಲ್ಲ. ಇವುಗಳ ಪೈಕಿ ಮಹಾತ್ಮ ಗಾಂಧೀಜಿ ಅಹಿಂಸಾ ಮಾರ್ಗ ಅನುಸರಿಸಿದ್ದರು ಎಂಬುದಾಗಿ ಶ್ರೀಗಳು ವಿವರಿಸಿದರು.
ಸ್ಥಿರ ಸುಖಂ ಆಸನಂ ಎಂಬಂತೆ ಆಸನದಲ್ಲಿ ದೃಢತೆ, ಆನಂದ ಇರಬೇಕು. ಕಷ್ಟದಿಂದ ಮಾಡುವುದು ಆಸನಗಳಲ್ಲ. ಯಾವುದೇ ಆಸನವನ್ನು ಖುಷಿಯಿಂದ ಮಾಡಿದರೆ ನೀವು ಯೋಗ ಪರಿಣಿತಿ ಪಡೆದಿದ್ದೀರಿ ಎಂದರ್ಥ ಎಂದು ವಿಶ್ಲೇಷಿಸಿದರು.
ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದಲೂ ಯೋಗ ಪ್ರಚಲಿತವಾಗಿದೆ. 2015ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತವಾಗಿ ಯೋಗ ದಿನಾಚರಣೆ ಅಂಗೀಕಾರವಾಗಿದೆ. ಇದಕ್ಕೆ 195 ರಾಷ್ಟ್ರಗಳು ಬೆಂಬಲಿಸಿವೆ. ಪತಂಜಲಿ ಮಹರ್ಷಿಯ ಯೋಗ ಸೂತ್ರದಲ್ಲಿ 195 ಸೂತ್ರಗಳಿವೆ. ಇದನ್ನು ಯೋಗಾಯೋಗ ಎಂದೇ ಹೇಳಬಹುದು ಎಂದು ಸ್ವಾಮೀಜಿ ಹೇಳಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಮಾತನಾಡಿ, ಯೋಗ ಎಂಬುದು ನಮ್ಮ ಹಿರಿಯರು, ಗುರುಗಳು, ಸಾಧಕರು ಹೊಸ ಪೀಳಿಗೆಗೆ ನೀಡಿದ ಅಮ್ಯೂಲ್ಯ ಕೊಡುಗೆ. ಮಾನಸಿಕ, ಭೌತಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಯೋಗ ಸಹಕಾರಿಯಾಗಿದೆ ಎಂದರು.
ಯೋಗ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆಯುಷ್ ಇಲಾಖೆ, ಮಹಾನಗರ ಪಾಲಿಕೆ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವೈದ್ಯ ಶ್ರೀ ಚನ್ನಬಸವಣ್ಣ ಸ್ವಾಮೀಜಿ ಯೋಗದ ಮಹತ್ವ ತಿಳಿಸುತ್ತಾ, ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಎಸ್ಪಿ ಉಮಾ ಪ್ರಶಾಂತ್, ಸಿಇಒ ಸುರೇಶ್ ಬಿ.ಇಟ್ನಾಳ್, ಬಿ.ಸಿ.ಉಮಾಪತಿ, ತಹಶೀಲ್ದಾರ್ ಅಶ್ವತ್ಥ್, ಆಯುಕ್ತೆ ರೇಣುಕಾ, ಡಿಹೆಚ್ ಒ ಡಾ.ಷಣ್ಮುಖಪ್ಪ, ಡಿಡಿಪಿಐ ಕೊಟ್ರೇಶ್, ವಾಸುದೇವ ರಾಯ್ಕರ್, ಪರಶುರಾಮ, ಬಾತಿ ಶಂಕರ್, ತೀರ್ಥರಾಜ್ ಹೋಲೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.