ಹೈಸ್ಕೂಲ್ ಮೈದಾನದಲ್ಲಿ ನಾಳೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಹೈಸ್ಕೂಲ್ ಮೈದಾನದಲ್ಲಿ ನಾಳೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ

5 ರಿಂದ 6 ಸಾವಿರ ಯೋಗಪಟುಗಳು ಭಾಗಿಯಾಗುವ ನಿರೀಕ್ಷೆ 

ದಾವಣಗೆರೆ, ಜೂ.19 –  ಸ್ವಂತ ಮತ್ತು ಸಮಾಜಕ್ಕಾಗಿ ಯೋಗ ಎಂಬ ಘೋಷವಾಕ್ಯದಡಿ ಜೂನ್ 21 ರಂದು ಅಂತ ರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಗರದ ಹೈಸ್ಕೂಲ್ ಮೈದಾನದಲ್ಲಿ ಆಚರಿಸಲಾಗುತ್ತಿದೆ. 5 ರಿಂದ 6 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಯೋಗ ದಿನಾಚರಣೆ ಕುರಿತು ಮಾಹಿತಿ ನೀಡಿದ ಅವರು,  ಅಂದು ಬೆಳಿಗ್ಗೆ 5.30ರಿಂದ 6.30ರವರೆಗೆ ಬ್ರಹ್ಮಾಕುಮಾರಿ ಸಂಸ್ಥೆಯಿಂದ ಧ್ಯಾನ ಕಾರ್ಯಕ್ರಮ ನಡೆಯಲಿದೆ. 6.30ರಿಂದ 7ರವರೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನಂತರ 7ರಿಂದ 7.45ರವರೆಗೆ ಸಾಮಾನ್ಯ ಯೋಗ ಶಿಷ್ಟಾಚಾರದಂತೆ ಯೋಗಾಸನ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ ಎಂದರು.

ಯೋಗ ದಿನಾಚರಣೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು, ತಪೋವನ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ ಮೆಡಿಕಲ್ ಕಾಲೇಜು, ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜು, ಎನ್.ಸಿ.ಸಿ, ಎನ್.ಎಸ್.ಎಸ್, ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾನಿಲಯ, ಪತಂಜಲಿ ಯೋಗ ಶಿಕ್ಷಣ  ಸಮಿತಿ, ಪತಂಜಲಿ ಯೋಗ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ತಾಲ್ಲೂಕು ಗಳಲ್ಲಿ ತಾಲ್ಲೂಕು ಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಿಕೊಳ್ಳಲಿದ್ದಾರೆ. ಶ್ರೀ ಗಂಗಾ ಆರೋಗ್ಯ ಮಹಾಮನೆ ಸ್ಥಾಪಕ ಚನ್ನಬಸವಣ್ಣನವರು ಯೋಗ ಪ್ರಾತ್ಯಕ್ಷಿಕೆ ನೀಡಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೆರವೇರಿಸಲಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮತ್ತಿತರರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಯು. ಯೋಗೇಂದ್ರಕುಮಾರ್ ಮಾತನಾಡಿ, ಆಯುಷ್ ಇಲಾಖೆಯ ವತಿಯಿಂದ ಜಿಲ್ಲೆಯ ಹಾಸ್ಟೆಲ್ ಮಕ್ಕಳಿಗೆ ಹತ್ತು ದಿನಗಳ ಯೋಗ ತರಬೇತಿ ಶಿಬಿರಗಳನ್ನು ಕೈಗೊಳ್ಳಲಾಗುತ್ತಿದೆ. ಆಯುಷ್ ವೈದ್ಯರು ಯೋಗ ತರಬೇತಿ ನೀಡುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್  ಉಪಸ್ಥಿತರಿದ್ದರು.

Click here to change this text

error: Content is protected !!