ದಾವಣಗೆರೆ, ಜೂ.12- ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಎರಡೂ ಪಕ್ಷಗಳು ಹಣದ ಹೊಳೆ ಹರಿಸಿ ಮತಗಳನ್ನು ಖರೀದಿಸಿವೆ ಎಂದು ಆರೋಪಿಸಿರುವ ಲೋಕಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿ ಬಿ.ಜಿ. ವಿನಯ್ ಕುಮಾರ್, ಹಣಬಲ, ತೋಳ್ಬಲ ಹಾಗೂ ಸುಳ್ಳು ಸುದ್ದಿಗಳನ್ನು ಹರಡಿದ ಪರಿಣಾಮ ನನಗೆ ಕಡಿಮೆ ಮತಗಳು ಬಂದಿವೆ ಎಂದು ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಾವಣಗೆರೆಗೆ ಬರುವುದಕ್ಕೂ ಮೊದಲು 3 ರಿಂದ4 ಲಕ್ಷ ಮತಗಳು ಸಿಗುವ ನಿರೀಕ್ಷೆ ಇತ್ತು. ಆದರೆ ಅವರು ಬಂದು ವಿನಯ್ ಕುಮಾರ್‌ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ, ಕಾಂಗ್ರೆಸ್‌ಗೆ ಮತ ಹಾಕಿದರೆ ನನ್ನನ್ನು ಬೆಂಬಲಿಸಿದಂತೆ ಎಂದು ಹೇಳಿಕೆ ಕೊಟ್ಟಿದ್ದರು. ಇದರಿಂದ ನನಗೆ ಬಲವಾದ ಪೆಟ್ಟು ಬಿತ್ತು. ನನ್ನ ಜೊತೆ ಗುರುತಿಸಿಕೊಂಡವರು ದೂರವಾದರು.
ಪ್ರಜಾ ಪ್ರಭುತ್ವದ ಉಳಿವಿಗಾಗಿ, ಪಾಳೇಗಾರಿಕೆ ವಿರುದ್ಧ ಹೋರಾಟದ ದನಿಯನ್ನು ಜನಾಂದೋಲನದ ರೀತಿ ಪರಿವರ್ತನೆ ಮಾಡುವ ಸಲುವಾಗಿ, ಸಮಾಜದ ಗುರುಗಳು ಹಾಗೂ ಮುಖ್ಯಮಂತ್ರಿಗಳನ್ನು ಎದುರು ಹಾಕಿಕೊಂಡು ಪ್ರಚಾರ ನಡೆಸಿದ್ದೆ. ಜನರೂ ಸಹ ನನ್ನನ್ನು ಬೆಂಬಲಿಸುವುದಾಗಿ ಆಶ್ವಾಸನೆ ನೀಡಿದ್ದರು. ನನಗೆ ಪ್ರಜಾ ಪ್ರಭುತ್ವದಲ್ಲಿ ನಂಬಿಕೆ ಇತ್ತು. ಕನಿಷ್ಟ ಪಕ್ಷ ಒಂದೂವರೆ ಲಕ್ಷ ಮತ ಪಡೆಯುವ ನಿರೀಕ್ಷೆ ಇತ್ತು ಎಂದು ಹೇಳಿದರು.
ಚುನಾವಣಾ ಹಿಂದಿನ `ಕತ್ತಲ ರಾತ್ರಿ’ಯನ್ನು ರಾಜಕೀಯ ಪಕ್ಷಗಳು, ಪದ್ಧತಿಯನ್ನಾಗಿ ಮಾಡಿಕೊಂಡು ಬಂದಿವೆ. ಹಣ ಹಂಚಿದವರು ಹೆಚ್ಚು ಮತ ಪಡೆದಿದ್ದಾರೆ. ನಾನು ಹಣ ಹಂಚದೆಯೇ 42907ಮತ ಪಡೆದಿದ್ದೇನೆ ಎಂದರು.
ವಿನಯ್ ಕುಮಾರ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ, ಸೋಲುತ್ತಾರೆ ಎಂದೆಲ್ಲಾ ಸುಳ್ಳು ಸುದ್ದಿ ಹರಡಲಾಯಿತು. ನನ್ನ ಜೊತೆ ಇದ್ದವರನ್ನು ಬೆದರಿಸಿ, ಹಣದ ಆಮಿಷ ತೋರಿಸಿ ದೂರ ಮಾಡಲಾಯಿತು.
ಕಾಂಗ್ರೆಸ್ ಅಭ್ಯರ್ಥಿಯ 26 ಸಾವಿರ ಮತಗಳ ಅಂತರದ ಗೆಲುವು ಗೆಲುವೇ ಅಲ್ಲ. ಇದು ಪ್ರಜಾ ಪ್ರಭುತ್ವದ ಕಗ್ಗೊಲೆ. ಎಸ್.ಎಸ್ ಮಲ್ಲಿಕಾರ್ಜುವ್ ಅವರ ಕ್ಷೇತ್ರದಲ್ಲಿಯೇ 25 ಸಾವಿರ ಮತಗಳ ಹಿನ್ನಡೆ ಇದೆ. ಅಲ್ಲಿಯೇ ಅವರನ್ನು ಜನರು ತಿರಸ್ಕರಿಸಿದ್ದಾರೆ. ಕಕ್ಕರಗೊಳ್ಳದಲ್ಲೂ ಜನ ತಿರಸ್ಕರಿಸಿದ್ದಾರೆ ಎಂದರು
ನನಗೆ ತಾತ್ಕಾಲಿಕ ಹಿನ್ನಡೆಯಾಗಿದೆ. ಆದರೆ ನಾನು ಹಠವಾದಿ, ದಾವಣಗೆರೆ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ. ಐಎಎಸ್, ಕೆಎಎಸ್ ತರಬೇತಿ ನೀಡುವುದು, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನವೋದಯ ತರಬೇತಿ ನೀಡುವುದು ಸೇರಿದಂತೆ ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತೇನೆ. ಜನರ ಮನದಲ್ಲಿ ಉಳಿಯುವಂತಹ ಕಾರ್ಯಗಳನ್ನು ಮಾಡುತ್ತೇನೆ ಎಂದರು.
ಎರಡು ವರ್ಷ ಯಾವ ಪಕ್ಷದಲ್ಲೂ ಗುರುತಿಸಿಕೊಳ್ಳದೆ ಕೆಲಸ ಮಾಡುತ್ತೇನೆ. ದಾವಣಗೆರೆ ಉತ್ತರ, ದಕ್ಷಿಣ, ಹರಿಹರ ಅಥವಾ ಹೊನ್ನಾಳಿ ಕ್ಷೇತ್ರಗಳಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವಿದೆ ಎಂದು ವಿನಯ್ ಹೇಳಿದರು.
ರಂಗಸ್ವಾಮಿ, ಅಯ್ಯಣ್ಣ ಈ ಸಂದರ್ಭದಲ್ಲಿದ್ದರು.