ದಾವಣಗೆರೆಯಲ್ಲಿಂದು ನಡೆದ ರಾಜ್ಯ ಸಮಿತಿ ಸಭೆಯಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಸರ್ಕಾರ ನಿರ್ಲಕ್ಷ್ಯ ವಹಿಸಿದರೆ, ರಾಜ್ಯದಾದ್ಯಂತ ಚಳವಳಿ ನಡೆಸಲಾಗುವುದು.
– ಹೆಚ್.ಆರ್. ಬಸವರಾಜಪ್ಪ
ದಾವಣಗೆರೆ, ಜೂ.10- ಬರ ಪರಿಹಾರ, ವಿಮೆ ನೀಡುವಲ್ಲಿ ರೈತರಿಗೆ ಮೋಸ, ಹೂಲದಲ್ಲಿ ದಾರಿ ಸಮಸ್ಯೆ, ಅಕ್ರಮ-ಸಕ್ರಮ ಪಂಪ್ಸೆಟ್, ಪಹಣಿ, ಮುಟೇಷನ್ಗೆ ಹೆಚ್ಚಿನ ಹಣ ವಸೂಲಿ, ಕಳಸಾ ಬಂಡೂರು ಯೋಜನೆಗೆ ಸರ್ಕಾರದ ಮೇಲೆ ಒತ್ತಡ ಹೇರುವುದು ಸೇರಿದಂತೆ ರೈತರ ವಿವಿಧ ಸಮಸ್ಯೆಗಳ ಕುರಿತು ನಗರದ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ಸಭೆಯಲ್ಲಿ ಚರ್ಚಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ತಾಲ್ಲೂಕುಗಳೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ರೈತ ಮುಖಂಡರು ಪಾಲ್ಗೊಂಡಿದ್ದರು.
ರಾಜ್ಯ ಸರ್ಕಾರ ಬರ ಪರಿಹಾರದ ಹಣ ಸರಿಯಾದ ರೀತಿ ರೈತರಿಗೆ ವಿತರಿಸುತ್ತಿಲ್ಲ. ಬರಗಾಲದಿಂದ ಬೀಳು ಬಿಟ್ಟ ಹಾಗೂ ಬೆಳೆ ಅಳಿಸಿದ ಜಮೀನಿಗೂ ಪರಿಹಾರ ಕೊಡಬೇಕು ಎಂದು ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಸಭೆಯಲ್ಲಿ ಆಗ್ರಹಿಸಿದರು.
ಹಿಂದಿನ ಸರ್ಕಾರ ಎನ್ಡಿಆರ್ಎಫ್ ಮಾರ್ಗ ಸೂಚಿಯ ಪರಿಹಾರದೊಂದಿಗೆ ಹೆಚ್ಚುವರಿ ಪರಿಹಾರ ನೀಡಿತ್ತು. ಅದೇ ರೀತಿ ಇಂದಿನ ಸರ್ಕಾರವೂ ಸಹ ಎನ್ಡಿಆರ್ಎಫ್ ಫಂಡ್ ಜೊತೆ ಕಳೆದ ಸರ್ಕಾರ ನೀಡಿದಷ್ಟು ಪರಿಹಾರವನ್ನಾದರೂ ನೀಡಬೇಕು ಎಂದರು.
ಬಿತ್ತನೆ ಬೀಜ ಹಾಗೂ ಗೊಬ್ಬರದ ದರವನ್ನು ಶೇ.50 ರಿಂತ 70ರಷ್ಟು ಹೆಚ್ಚಿಸಲಾಗಿದ್ದು, ಕೂಡಲೇ ಬೆಲೆ ಇಳಿಸಬೇಕು. ಎಂ.ಆರ್.ಪಿ. ದರಕ್ಕಿಂತ ಹೆಚ್ಚು ದರದಲ್ಲಿ ಬೀಜ, ಗೊಬ್ಬರ ಮಾರಾಟ ಮಾಡಿದರೆ ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಮಾರಾಟಗಾರರು ಬೆಲೆ ಹಾಗೂ ತಮ್ಮಲ್ಲಿರುವ ಸ್ಟಾಕ್ ಬಗ್ಗೆ ನಾಮಫಲಕದಲ್ಲಿ ನಮೂದಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ವಯಂ ಆರ್ಥಿಕ ವೆಚ್ಚ ಯೋಜನೆ ಕೈ ಬಿಟ್ಟು ಮೊದಲಿನಿಂದಲೇ ಅಕ್ರಮ ಸಕ್ರಮ ಯೋಜನೆಯಡಿ ಹಣ ಕಟ್ಟಿಸಿಕೊಂಡು ಹೊಸ ಸಂಪರ್ಕಕ್ಕೆ ಅನುಮತಿ ನೀಡಬೇಕು. ಬಗರ್ ಹುಕ್ಕುಂ ಸಾಗುವಳಿ ದಾರರಿಗೆ ಕಾಲ ಮಿತಿಯೊಳಗೆ ಹಕ್ಕುಪತ್ರ ಕೊಡಬೇಕು. ಗ್ಯಾರಂಟಿ ಯೋಜನೆಗಳಿಂದಾಗಿ ಹಣ ಕ್ರೋಢೀಕರಿಸಲು ಪಹಣಿ, ಮುಟೇಷನ್, ಜಾತಿ ಪ್ರಮಾಣ ಪತ್ರ, ಸ್ಟಾಂಪ್ ಡ್ಯೂಟಿ ಎಲ್ಲದರ ಬೆಲೆ ಏರಿಕೆಯಾಗಿದೆ. ಈ ಕ್ರಮ ಜನ ಸಾಮಾನ್ಯರ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಬೆಲೆ ಏರಿಕೆ ಕೈ ಬಿಡಬೇಕು.
ಬರ ಪರಿಹಾರದ ಹಣ ಸೇರಿದಂತೆ ಸರ್ಕಾರ ನೀಡುವ ಮಾಸಾಶನಗಳನ್ನು ಬ್ಯಾಂಕ್ನವರು ಸಾಲಕ್ಕೆ ಜಮಾ ಮಾಡಿಕೊಳ್ಳುವುದನ್ನು ಕೂಡಲೇ ಕೈ ಬಿಡಬೇಕು. ಬರಗಾಲ ಇರುವುದರಿಂದ ಸಾಲ ವಸೂಲಿಗಾಗಿ ಒತ್ತಾಯಿಸಬಾರದು. ಸಾಲದಿಂದ ರೈತ ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಫೈನಾನ್ಸ್ ಹಾಗೂ ಬ್ಯಾಂಕ್ನವರೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಬಸವರಾಜಪ್ಪ ಎಚ್ಚರಿಸಿದರು.
ಬೇಡಿಕೆಗಳ ಈಡೇರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ಚಳವಳಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಇದಕ್ಕೂ ಮುನ್ನ ನಡೆದ ಚರ್ಚೆ ವೇಳೆ ರೈತರಿಗೆ ನೀಡುತ್ತಿದ್ದ ಸ್ಪಿಂಕ್ಲರ್ ಬೆಲೆಯನ್ನು ದುಪ್ಪಟ್ಟು ಮಾಡಲಾಗಿದೆ. ಅಲ್ಲದೇ ಅದಕ್ಕೆ ಜಿಎಸ್ಟಿ ವಿಧಿಸಲಾಗುತ್ತಿದೆ. ರೈತರ ಉತ್ಪನ್ನಗಳಿಗೆ ಜಿಎಸ್ಟಿ ಇಲ್ಲ. ಆದರೆ ನಾವು ಕೃಷಿಗಾಗಿ ಕೊಳ್ಳುವ ಸಾಮಾಗ್ರಿಗಳಿಗೆ ಜಿಎಸ್ಟಿ ಕೊಡಬೇಕಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಅಗತ್ಯವಿದೆ ಎಂದು ರೈತ ಮುಖಂಡರೊಬ್ಬರು ಸಭೆಯಲ್ಲಿ ಪ್ರಸ್ತಾಪಿಸಿದರು.
ಶಿವಮೊಗ್ಗದ ರಾಘವೇಂದ್ರ ಮಾತನಾಡಿ, ರಾಜ್ಯ ಸರ್ಕಾರವು ಶೂನ್ಯ ಬಡ್ಡಿ ದರದಲ್ಲಿ ಐದು ಲಕ್ಷ ರೂ. ಸಾಲ ನೀಡುವುದಾಗಿ ಹೇಳಿತ್ತು. ಆದರೆ ಇದುವರೆಗೂ ಯಾರಿಗೂ ಸಾಲ ನೀಡಿಲ್ಲ. ಈ ಬಗ್ಗೆ ಸಂಘದಿಂದ ಒತ್ತಾಯಿಸಬೇಕು ಎಂದರು.
ಪ್ರಸ್ತುತ ದಿನಗಳಲ್ಲಿ ಅನ್ನಕ್ಕಿಂತ ಹೆಚ್ಚು ವಿಷಯವನ್ನೇ ಉಣ್ಣುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಾವಯವ ಬೆಳೆಗಾರರಿಗೆ ಪ್ರೋತ್ಸಾಹಿಸಬೇಕು. ಪ್ರತ್ಯೇಕ ಸಮಿತಿ ರಚಿಸಿ ಸಾವಯವ ಬೆಳೆಗಾರರನ್ನು ಗುರುತಿಸಿ, ಉತ್ತೇಜನ ನೀಡಬೇಕು ಎಂದರು.
ಜಮೀನಿನಲ್ಲಿ ಜಿಪಿಎಸ್ ಮಾಡಲು ಬಂದಾಗ ಬೇರೆ ಸರ್ವೇ ನಂಬರ್ ನಮೂದಾಗುತ್ತದೆ. ಹಲವೆಡೆ ಈ ರೀತಿ ತಾಂತ್ರಿಕ ವ್ಯತ್ಯಾಸಗಳಾಗುತ್ತಿದ್ದು. ಇದನ್ನು ಸರಿಪಡಿಸಬೇಕು. ಏತ ನೀರಾವರಿ ಯೋಜನೆಗಳಿಗೆ ಹಣ ಮಂಜೂರಾದರೂ ಕಾಮಗಾರಿಗಳು ನಡೆಯುತ್ತಿಲ್ಲ. ಈ ಬಗ್ಗೆ ಸಂಘದಿಂದ ತನಿಖೆ ನಡೆಸಬೇಕಿದೆ ಎಂದು ಮುಖಂಡರೊಬ್ಬರು ಒತ್ತಾಯಿಸಿದರು.
ಕೊಪ್ಪಳದ ಜಿಲ್ಲಾ ಸಂಘದ ಪದಾಧಿಕಾರಿಯೊಬ್ಬರು, ಪಹಣಿ, ಮ್ಯುಟೇಷನ್ ಪಡೆಯುವ ಶುಲ್ಕವನ್ನು ಹೆಚ್ಚಿಸಲಾಗಿದೆ. ನಮ್ಮ ದಾಖಲೆ ಪಡೆಯಲು ನಾವೇಕೆ ಹೆಚ್ಚು ಹಣ ಕೊಡಬೇಕು? ಮೊದಲೇ ಬೆಳೆ ಹಾನಿಯಿಂದ ತತ್ತರಿಸುವ ರೈತರಿಗೆ ಶುಲ್ಕದ ಹೊರೆ ಕಷ್ಟವಾಗಿದೆ ಎಂದರು.
ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಉಚಿತವಾಗಿ ಓಡಾಡುವುದು ಹೆಚ್ಚಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಕೃಷಿ ಕಾರ್ಯಗಳಿಗೆ ನಗರಗಳಿಗೆ ಬರುವ ಪುರುಷರಿಗೂ ಕಷ್ಟವಾಗಿದೆ. ರಾಜ್ಯ ಸರ್ಕಾರ ಪ್ರತಿ ತಾಲ್ಲೂಕಿಗೆ ಐದು ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಬೇಕೆಂದು ಮತ್ತೋರ್ವ ರೈತ ಮುಖಂಡ ಆಗ್ರಹಿಸಿದರು.
ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಕೋಲಾರ, ಈಚಘಟ್ಟದ ಸಿದ್ದವೀರಪ್ಪ ಚಿತ್ರದುರ್ಗ, ಕಾರ್ಯದರ್ಶಿ ಅಮಿನ್ ಪಾಷಾ ದಿದ್ದಿಗಿ, ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ, ಇಟ್ಟೂರು ರಾಜು, ವಿಜಯನಗರ ಜಿಲ್ಲೆ ಭರಮಣ್ಣ ಕೊಟ್ಟೂರು, ದಾವಣಗೆರೆಯ ರಾಜು, ಬಸವರಾಜ್, ಪಾಲಾಕ್ಷಿ, ಅಭಿ, ಖ್ಯಾತನಳ್ಳಿ ರಾಜಣ್ಣ, ಕಲಬುರ್ಗಿ ಮಹಾಂತಗೌಡ, ಅಲ್ಲಾ ಪಟೀಲ ಶಿವಪೂರ, ಹಸನ ಪಾಟೀಲ, ಸಿದ್ದನಗೌಡ ಬಿ.ಪೊಲೀಸ್ ಪಾಟೀಲ್, ಭೀಮನಗೌಡ ಪಾಟೀಲ ಇತರರು ಸಭೆಯಲ್ಲಿದ್ದರು.