ಸಾಂಸ್ಕೃತಿಕ ಸಿರಿತನದ ಕೊಂಡಿ ರಂಗಕರ್ಮಿ ಈಶ್ವರಪ್ಪ

ಸಾಂಸ್ಕೃತಿಕ ಸಿರಿತನದ ಕೊಂಡಿ ರಂಗಕರ್ಮಿ ಈಶ್ವರಪ್ಪ

ಈಶ್ವರಪ್ಪ ಅವರಿಗೆ `ನುಡಿ ನಮನ’ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ

ದಾವಣಗೆರೆ, ಜೂ. 9- ಜಾನಪದ ವಿದ್ವಾಂಸ, ರಂಗಕರ್ಮಿ, ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ದಿ. ಡಾ. ಎಂ.ಜಿ. ಈಶ್ವರಪ್ಪ ಅವರು ಸಾಂಸ್ಕೃತಿಕ ಸಿರಿತನಕ್ಕೆ ಕೊಂಡಿಯಾಗಿದ್ದರು. ಸಾಹಿತ್ಯ, ಸಂಗೀತ, ನಾಟಕ, ಜಾನಪದ, ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದುದು ಎಂದು ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಪ್ರತಿಮಾ ಸಭಾ ವತಿಯಿಂದ ಇಂದು ಆಯೋಜನೆಗೊಂಡಿದ್ದ ಡಾ. ಎಂ.ಜಿ. ಈಶ್ವರಪ್ಪ ಅವರಿಗೆ `ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು.

ಸಾಂಸ್ಕೃತಿಕ ರಾಯಭಾರಿಯಾಗಿ ದೇಶ ವಿದೇಶಗಳಲ್ಲೂ ದಾವಣಗೆರೆಯ ಕಲೆ, ಸಾಹಿತ್ಯ, ಸಂಗೀತ, ನಾಟಕ, ಜಾನಪದ ಕಲೆಗಳನ್ನು ಪಸರಿಸುವ ಕೆಲಸವನ್ನು ಪ್ರತಿಮಾ ಸಭಾದ ಮೂಲಕ ಈಶ್ವರಪ್ಪ ಮಾಡಿರುವುದು ಶ್ಲ್ಯಾಘನೀಯ ಎಂದರು.

ಪ್ರತಿಮಾ ಸಭಾ ಸಾಂಸ್ಕೃತಿಕ ವಲಯದಲ್ಲಿ ಅದ್ಭುತ ಕೆಲಸವನ್ನು ಮಾಡುತ್ತಾ ಬರುತ್ತಿದೆ. ತನ್ಮೂಲಕ ಅನೇಕ ರಂಗ ಕರ್ಮಿಗಳು, ರಂಗ ನಿರ್ದೇಶಕರು, ಚಿಂತಕರು ಹುಟ್ಟಿಕೊಂಡಿದ್ದಾರೆ. ದಾವಣಗೆರೆ ಮೂಲಕ ಸುರೇಶ್ ಅವರಂತಹ ರಂಗನಿರ್ದೇಶಕರು ವಿದೇಶದಲ್ಲೂ ಬಹು ದೊಡ್ಡ ಹೆಸರು ಮಾಡಿರುವುದಕ್ಕೆ ಮೂಲಕ ಕಾರಣ ಈಶ್ವರಪ್ಪ ಎಂಬುದನ್ನು ಯಾರೂ ಮರೆಯುವಂತಿಲ್ಲ ಎಂದು ಹೇಳಿದರು.

ರಂಗಾಯಣದ ಮೊದಲ ಸಂದರ್ಶನ ಕೂಡ ದಾವಣಗೆರೆ ನೆಲದಲ್ಲೇ ನಡೆದಿದ್ದು, ಇದೊಂದು ಮಾದರಿಯಾಗಿ ಉಳಿದುಕೊಂಡಿದೆ. ಬಿ.ವಿ. ಕಾರಂತ, ಅಶೋಕ ಬಾದರದಿನ್ನಿ, ಸುರೇಶ ಆನಗಳ್ಳಿ, ಕೃಷ್ಣಮೂರ್ತಿ ಕವತ್ತಾರ್ ಸೇರಿದಂತೆ ಹೆಸರಾಂತ ನಟ, ನಿರ್ದೇಶಕರು ಪ್ರತಿಮಾ ಸಭಾದೊಂದಿಗೆ ಒಡನಾಟ ಇಟ್ಟುಕೊಂಡಿದ್ದರು ಎಂದು ತಿಳಿಸಿದರು.

ಬಿ. ಜಯಶ್ರೀ, ಸಿ.ಆರ್. ಸಿಂಹ ಮುಂತಾದ ರಂಗ ನಿರ್ದೇಶಕರ ನಾಟಕಗಳು ದಾವಣಗೆರೆಯಲ್ಲಿ ಪ್ರದರ್ಶನ ಕಂಡವು. ಇದಕ್ಕೆ ಕಾರಣ ಇಲ್ಲಿನ ಪ್ರಬುದ್ಧ ಪ್ರೇಕ್ಷಕರ ರಂಗಾಸಕ್ತಿ ಕಾರಣ ಎಂದರು.

ಹಿರಿಯ ಕಾದಂಬರಿಕಾರ ಕುಂ. ವೀರಭದ್ರಪ್ಪ ಮಾತನಾಡಿ, ಈಶ್ವರಪ್ಪ ಅವರನ್ನು ಕಳೆದುಕೊಂಡ ದಾವಣಗೆರೆ ಸಾಂಸ್ಕೃತಿಕವಾಗಿ ಬಡವಾಗಿದೆ. ನಗರದ ಯಾವುದಾದರೊಂದು ರಸ್ತೆಗೆ ಈಶ್ವರಪ್ಪನವರ ಹೆಸರಿಡುವ ಮೂಲಕ ಜೀವಂತಿಕೆಯನ್ನು ಕಾಪಾಡಿಕೊಂಡು ಬರಬೇಕಾಗಿದೆ. ಅವರ ಶಿಷ್ಯಂದಿರು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆಂದು ತಿಳಿಸಿದರು.

ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜನೆ ಮಾಡಬೇಕೆಂಬ ಈಶ್ವರಪ್ಪ ಅವರ ಬಯಕೆಯನ್ನು ಎಲ್ಲಾ ಸಮಾನ ಮನಸ್ಕರು ಸೇರಿ ಈಡೇರಿಸುವ ಪ್ರಯತ್ನ ಮಾಡೋಣವೆಂದರು. ಪುನರ್‌ ಜನ್ಮ ಎನ್ನುವುದೊಂದು ಇದ್ದರೆ ಈಶ್ವರಪ್ಪ ಮತ್ತೊಮ್ಮೆ ಹುಟ್ಟಿ ಬರಲಿ ಎಂದ ಅವರು, ದಾವಣಗೆರೆ ರಾಜ್ಯದ ಹೃದಯ ಭಾಗವಾಗಿದ್ದರಿಂದ ಎಲ್ಲಾ ಅಕಾಡೆಮಿಗಳು ಇಲ್ಲಿಯೇ ಸ್ಥಾಪನೆಯಾಗಲಿ ಎಂದು ಸದಾಶಯ ವ್ಯಕ್ತಪಡಿಸಿದರು.

ಈಶ್ವರಪ್ಪ ಅವರ ಒಡನಾಡಿಗಳಾದ ಡಾ. ಬಸವರಾಜ ನೆಲ್ಲಿಸರ, ಚಿತ್ರದುರ್ಗದ ಡಾ. ರಾಜಶೇಖರಪ್ಪ, ಮೈಸೂರು ರಂಗಾಯಣದ ಶಶಿಕಲಾ, ಡಾ.ಶ್ರೀಪಾದ ಪೂಜಾರ್, ಬೆಂಗಳೂರಿನ ಗೋಪಿನಾಥ್ ಮತ್ತಿತರರು ನುಡಿ ನಮನ ಸಲ್ಲಿಸಿದರು.

ಪ್ರತಿಮಾ ಸಭಾದ ಸಂಸ್ಥಾಪಕ ಅಧ್ಯಕ್ಷ ಪ್ರೊ. ಎಸ್. ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಪ್ರೊ. ಜಿ.ಎಸ್. ಸತ್ಯಮೂರ್ತಿ,  ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ವೇದಿಕೆಯಲ್ಲಿದ್ದರು.

ಡಾ. ಎಂ.ಜಿ. ಈಶ್ವರಪ್ಪ ಅವರ ಪುತ್ರ ಪೃಥುವೈನ್ಯ, ಮಗಳು ಪ್ರತ್ರಲೇಖ, ಅಳಿಯ  ಕಿರಣ್ ಕುಮಾರ್ ಸೇರಿದಂತೆ ಆಪ್ತ ಒಡನಾಡಿಗಳಾದ ಉದ್ಯಮಿ ಅಣಬೇರು ರಾಜಣ್ಣ, ಎಂ.ಬಸಪ್ಪ, ಹರೀಶ್, ದ್ವಾರಕನಾಥ್, ಚಿತ್ರದುರ್ಗದ ಜಿ.ಎಸ್. ಉಜ್ಜಿನಪ್ಪ, ಡಾ. ಎ.ಬಿ. ರಾಮಚಂದ್ರಪ್ಪ, ಡಾ. ದಾದಾಪೀರ್ ನವಿಲೇಹಾಳ್, ಜಗಳೂರು ಸುಭಾಶ್ಚಂದ್ರ, ಜಯಪ್ರಕಾಶ್ ಕೊಂಡಜ್ಜಿ, ಎ.ವೈ. ಕೃಷ್ಣಮೂರ್ತಿ, ಬಂಕಾಪುರ ಚನ್ನಬಸಪ್ಪ, ಪ್ರೊ. ಬಿ.ಬಕ್ಕಪ್ಪ, ಎನ್‌.ಟಿ. ಯರ್ರಿಸ್ವಾಮಿ, ಶಿವನಕೆರೆ ಬಸವಲಿಂಗಪ್ಪ, ಮಂಜುಳಾ ಬಸವಲಿಂಗಪ್ಪ, ಎಸ್.ಎಸ್. ಸಿದ್ಧರಾಜು, ಎನ್.ಟಿ. ಮಂಜುನಾಥ್, ರವೀಂದ್ರ ಅರಳಗುಪ್ಪೆ, ಶಂಭಣ್ಣ, ಹೆಚ್.ಬಿ. ಮಂಜುನಾಥ್, ಡಾ. ಗೀತಾ ಬಸವರಾಜ್, ಟಿ.ಎಸ್. ಶೈಲಜಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಗಾನಲಹರಿ ತಂಡದ ಕಲಾವಿದರು ರಂಗಗೀತೆ ಹಾಡಿದರು. ಪ್ರತಿಮಾ ಸಭಾದ ಕಾರ್ಯದರ್ಶಿ ಬಾ.ಮ. ಬಸವರಾಜಯ್ಯ ಸ್ವಾಗತಿಸಿದರು. ಖಜಾಂಚಿ ಬಿ.ಎನ್. ಮಲ್ಲೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಸಿರಿಗೆರೆ ನಿರೂಪಿಸಿದರು. ಅನಿತಾ ವಂದಿಸಿದರು.

error: Content is protected !!