ಮೂರನೇ ಬಾರಿ ಮೋದಿಗೆ ರಾಜ್ಯಭಾರ

ಮೂರನೇ ಬಾರಿ ಮೋದಿಗೆ ರಾಜ್ಯಭಾರ

ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರಧಾನಿ, ಸಚಿವರಿಗೆ ಪ್ರಮಾಣ ವಚನ ಸ್ವೀಕಾರ

ನವದೆಹಲಿ, ಜೂ. 9 – ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ಎರಡು ಬಾರಿ ಪೂರ್ಣಾವಧಿಗೆ ಪ್ರಧಾನಿಯಾಗಿ, ಮೂರನೇ ಬಾರಿ ಅಧಿಕಾರ ನಿರ್ವಹಿಸುವ ಅವಕಾಶ ದೊರೆತಿದೆ. ಅವರ ಸುದೀರ್ಘ ಅನುಭವ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಮುನ್ನಡೆಸಲು ನೆರವಾಗಲಿದೆ.

ಮೋದಿ ಅವರೊಂದಿಗೆ ಬಿಜೆಪಿ ಹಿರಿಯ ನಾಯಕ ರಾದ ರಾಜನಾಥ್ ಸಿಂಗ್, ಅಮಿತ್ ಷಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಹಾಗೂ ಎಸ್. ಜೈಶಂಕರ್ ಅವರು ಮತ್ತೊಂದು ಅವಧಿಗೆ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮೋದಿ ಹಾಗೂ 30 ಸಂಪುಟ ಸಚಿವರಿಗೆ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು.

73 ವರ್ಷದ ಮೋದಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಎರಡು ಬಾರಿ ಪೂರ್ಣಾವಧಿಗೆ ಪ್ರಧಾನ ಮಂತ್ರಿಯಾದ ನಂತರ, ಮೂರನೇ ಬಾರಿ ಅಧಿಕಾರ ವಹಿಸಿಕೊಂಡ ಎರಡನೇ ಪ್ರಧಾನಿ ಅವರಾಗಿದ್ದಾರೆ. ಜವಾಹರಲಾಲ್ ನೆಹರು ಮಾತ್ರ ಮೂರನೇ ಅವಧಿಗೆ ಪ್ರಧಾನಿಯಾಗಿದ್ದರು.

ಬಿಜೆಪಿ ಮಿತ್ರ ಪಕ್ಷಗಳಾದ ಜೆಡಿ (ಎಸ್)ನ ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಎ.ಎಂ. (ಸೆಕ್ಯುಲರ್) ಜಿತನ್ ರಾಮ್ ಮಾಂಝಿ, ಜೆಡಿಯು ರಾಜೀವ್ ರಂಜನ್ ಸಿಂಗ್, ಟಿ.ಡಿ.ಪಿ.ಯ ಕೆ. ರಾಮ್ ಮೋಹನ್ ನಾಯ್ಡು ಹಾಗೂ ಎಲ್.ಜೆ.ಪಿ.-ಆರ್.ವಿ. ಚಿರಾಗ್ ಪಾಸ್ವಾನ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಐದು ಮಿತ್ರ ಪಕ್ಷಗಳಿಗೆ ತಲಾ ಒಂದು ಸ್ಥಾನ ದೊರೆತಿದೆ.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಐದು ವರ್ಷಗಳ ನಂತರ ಸಂಪುಟಕ್ಕೆ ಮರಳಿದ್ದಾರೆ. ನಾಲ್ಕು ಅವಧಿಗೆ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಹರಿಯಾಣದ ಮುಖ್ಯಮಂತ್ರಿಯಾಗಿದ್ದ ಮನೋಹರ ಲಾಲ್ ಖಟ್ಟರ್ ಅವರೂ ಮೋದಿ ಸಂಪುಟ ಪ್ರವೇಶಿಸಿದ್ದಾರೆ.

ಈ ಹಿಂದೆ ರಾಜ್ಯಸಭಾ ಸದಸ್ಯರಾಗಿದ್ದು, ಈ ಬಾರಿ ಲೋಕಸಭೆಯಿಂದ ಆಯ್ಕೆಯಾಗಿರುವ ಬಿಜೆಪಿ ನಾಯಕರಾದ ಪಿಯೂಶ್ ಗೋಲ್, ಜ್ಯೋತಿರಾದಿತ್ಯ ಸಿಂಧಿಯಾ, ಧರ್ಮೇಂದ್ರ ಪ್ರಧಾನ್ ಹಾಗೂ ಭೂಪೇಂದ್ರ ಯಾದವ್ ಅವರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನಾವಲ್, ಅಶ್ವಿನಿ ವೈಷ್ಣವ್, ವೀರೇಂದ್ರ ಕುಮಾರ್, ಪ್ರಹ್ಲಾದ್ ಜೋಷಿ, ಗಿರಿರಾಜ್ ಸಿಂಗ್, ಯುವಾಲ್ ಓರಂ, ಸಿ.ಆರ್.ಪಾಟೀಲ್, ಮನ್‌ಸುಖ್ ಮಾಂಡವೀಯ, ಜಿ. ಕಿಶನ್ ರೆಡ್ಡಿ, ಹರ್ದೀಪ್ ಸಿಂಗ್ ಪುರಿ, ಕಿರಣ್ ರಿಜಿಜು, ಅನ್ನಪೂರ್ಣ ದೇವಿ ಹಾಗೂ ಗಜೇಂದ್ರ ಸಿಂಗ್ ಶೆಖಾವತ್ ಅವರು ಬಿಜೆಪಿಯಿಂದ ಸಂಪುಟ ದರ್ಜೆ ಸಚಿವರಾಗಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.  ಪ್ರತಿಪಕ್ಷಗಳ ಹಲವು ನಾಯಕರು ಸಮಾರಂಭದಿಂದ ದೂರ ಉಳಿದಿದ್ದರು.

ಇದಕ್ಕೂ ಮುಂಚೆ ನಿಯೋಜಿತ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಜನರು ನಮ್ಮಿಂದ ಅಪಾರ ನಿರೀಕ್ಷೆ ಹೊಂದಿದ್ದಾರೆ. ಎಲ್ಲ ನಿರೀಕ್ಷೆಗಳನ್ನು ಈಡೇರಿಸಬೇಕಿದೆ ಎಂದರು.

ಪ್ರಮಾಣ ವಚನ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಹಾಗೂ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಉಪಸ್ಥಿತರಿದ್ದರು.

ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ, ನಟರಾದ ಶಾರುಕ್ ಖಾನ್, ರಜನೀಕಾಂತ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್, ಶ್ರೀಲಂಕ ಅಧ್ಯಕ್ಷ ರಾಣಿಲ್ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ ಕುಮಾರ್ ಜಗ್ನೌತ್, ಭೂತಾನ್ ಪ್ರಧಾನಿ ಶೆರಿಂಗ್ ಟೊಬ್ಗೆ ಹಾಗೂ ಸಿಯಾಚಿಲ್ಲೀಸ್ ಉಪಾಧ್ಯಕ್ಷ ಅಹಮದ್ ಅಫೀಪ್ ಅವರು ಉಪಸ್ಥಿತರಿದ್ದ ವಿದೇಶಿ ಗಣ್ಯರು.

ತೃತೀಯ ಲಿಂಗಿಗಳು, ಪೌರ ಕಾರ್ಮಿಕರು ಹಾಗೂ ನೂತನ ಸಂಸತ್ ಭವನ ನಿರ್ಮಾಣದಲ್ಲಿ ಭಾಗಿಯಾಗಿದ್ದ ಕಾರ್ಮಿಕರೂ ಸೇರಿದಂತೆ ಸಮಾಜದ ಹಲವು ವರ್ಗದವರು ಪ್ರಮಾಣ ವಚನ ಸಮಾರಂಭಕ್ಕೆ ಸಾಕ್ಷಿಯಾದರು. ಸುಮಾರು 9 ಸಾವಿರ ಜನ ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಉಪಸ್ಥಿತರಿದ್ದರು.

error: Content is protected !!