ಪೊಲೀಸ್ ಚಿಣ್ಣರ ಅಂಗಳ ಪ್ರಿ ಸ್ಕೂಲ್ನ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಎಸ್ಪಿ ಉಮಾ ಪ್ರಶಾಂತ್
ದಾವಣಗೆರೆ, ಜೂ.10- ಪ್ರತಿಯೊಂದು ಮಗುವಿನಲ್ಲೂ ಸುಪ್ತವಾಗಿರುವ ಪ್ರತಿಭೆಗಳು ಅಡಗಿದ್ದು, ಅವುಗಳನ್ನು ಹೆಕ್ಕಿ ತೆಗೆಯುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ನಗರದ ಪಿ.ಜೆ. ಬಡಾವಣೆಯ ಪೊಲೀಸ್ ವಸತಿಗೃಹ ಸಮೀಪ ನೂತನವಾಗಿ ಆರಂಭಿಸಿರುವ ಪೊಲೀಸ್ ಚಿಣ್ಣರ ಅಂಗಳ ಪ್ರಿ ಸ್ಕೂಲ್ನಲ್ಲಿ ಆಯೋಜಿಸಿದ್ದ ಸರಸ್ವತಿ ಪೂಜೆ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶೇಷವಾಗಿ ಪೊಲೀಸರ ಮಕ್ಕಳಿಗೆ ಗುಣಮ ಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡು ವುದು ಪೊಲೀಸ್ ಚಿಣ್ಣರ ಅಂಗಳ ಶಾಲೆಯ ಮುಖ್ಯ ಉದ್ದೇಶವಾಗಿದೆ ಎಂದರು. ಗುಣಮಟ್ಟದ ಶಿಕ್ಷಣ ವನ್ನು ಸಾಧ್ಯವಾದಷ್ಟು ಕಡಿಮೆ ಶುಲ್ಕದಲ್ಲಿ ನೀಡಲು ಇಲಾಖೆ ಪ್ರಯತ್ನಿಸುತ್ತಿದೆ. ಬಾಲ್ಯದಲ್ಲಿ ಮಕ್ಕಳಿಗೆ ನೀಡುವ ಶಿಕ್ಷಣ ಮತ್ತು ಕಲಿಸುವ ಮೌಲ್ಯಗಳು ಅವರ ಜೀವನದುದ್ದಕ್ಕೂ ಉಳಿಯುತ್ತವೆ. ಕಾರಣ ಪೋಷಕರು ಮಕ್ಕಳನ್ನು ಉತ್ತಮವಾಗಿ ಬೆಳೆಸುವತ್ತಾ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ಚಿಣ್ಣರ ಶಾಲೆಯಲ್ಲಿ ಕಿಂಡರ್ ಗಾರ್ಡನ್ವರೆಗೂ ಶಿಕ್ಷಣ ಲಭ್ಯವಿದ್ದು, ಯುಕೆಜಿ ಪೂರ್ಣಗೊಂಡ ಬಳಿಕ ಅವರನ್ನು ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಗೆ ಸೇರಿಸಲು ಅವಕಾಶ ಎಂದು ತಿಳಿಸಿದರು. ಇತ್ತೀಚೆಗೆ ನೀಟ್ ಪರೀಕ್ಷೆಯಲ್ಲಿ ನಮ್ಮ ಪೊಲೀಸ್ ಸಿಬ್ಬಂದಿಯ ಪುತ್ರಿ ಒಬ್ಬರು 500 ನೇ ರಾಂಕ್ ಪಡೆದಿದ್ದಾರೆ. ಅವರಂತೆ ಹೆಚ್ಚಿನ ಪೊಲೀಸರ ಮಕ್ಕಳು ಸಾಧನೆ ಮಾಡಲು ಮುಂದಾಗಬೇಕು. ಪೊಲೀಸರು ತಮ್ಮ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡುವ ಮೂಲಕ ತಮಗಿಂತಲೂ ಎತ್ತರದ ಹುದ್ದೆಗೆ ಏರಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಸರಸ್ವತಿ ಪೂಜೆ ನೆರವೇರಿಸಿ, ಶಾಲೆಗೆ ದಾಖಲಾಗಿರುವ ಮಕ್ಕಳಿಗೆ ಅವರ ಪೋಷಕರ ನೆರವಿನಿಂದ ಶಾಸ್ತ್ರೋಕ್ತವಾಗಿ ಅಕ್ಷರಭ್ಯಾಸ ಮಾಡಿಸಲಾಯಿತು.
ಎಎಸ್ಪಿಗಳಾದ ವಿಜಯ್ ಕುಮಾರ್ ಎಂ. ಸಂತೋಷ್, ಮಂಜುನಾಥ್, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ನಿವೃತ್ತ ಪೊಲೀಸ್ ಅಧಿಕಾರಿ ರವಿನಾರಾಯಣ, ಸೋಮಶೇಖರ್, ಶಾಲೆಯ ಪ್ರಿನ್ಸಿಪಾಲ್ ಹೆಚ್.ವಿ. ಯತೀಶ್ ಇತರರಿದ್ದರು.