ಮೌಲ್ಯಾಧರಿತ ಶಿಕ್ಷಣ ನಮ್ಮ ಗುರಿ

ಮೌಲ್ಯಾಧರಿತ ಶಿಕ್ಷಣ ನಮ್ಮ ಗುರಿ

ಪೊಲೀಸ್ ಚಿಣ್ಣರ ಅಂಗಳ ಶಾಲೆ ಉದ್ಘಾಟಸಿದ ಎಸ್ಪಿ ಉಮಾ

ದಾವಣಗೆರೆ, ಮೇ 30- ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ, ಗುಣಮಟ್ಟದ ಹಾಗೂ ಮೌಲ್ಯಾಧರಿತ ಶಿಕ್ಷಣ ನೀಡುವುದೇ `ಚಿಣ್ಣರ ಅಂಗಳ’ ಶಾಲೆಯ ಮುಖ್ಯ ಗುರಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಹೇಳಿದರು.

ನಗರದ ಪೊಲೀಸ್ ಕ್ವಾರ್ಟಸ್‌ನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಂದು ಏರ್ಪಾಡಾಗಿದ್ದ ಪೊಲೀಸ್ ಚಿಣ್ಣರ ಅಂಗಳ ಶಾಲೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಇದ್ದ ಶಾಲೆಯನ್ನು ಸ್ಥಳಾಂತರ ಮಾಡಿ ಪುನರುಜ್ಜೀವನಗೊಳಿಸಲಾಗಿದೆ. ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಪ್ರವೇಶದಲ್ಲಿ ಮೊದಲ ಆದ್ಯತೆ ಇದ್ದು, ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಸೀಟು ಹಂಚಿಕೆಯಾಗಿ ಇನ್ನೂ ಉಳಿದರೇ ಸಾರ್ವಜನಿಕರ ಮಕ್ಕಳಿಗೂ ಪ್ರವೇಶಾವಕಾಶ ಕಲ್ಪಿಸಿಕೊಡಲಾಗುವುದು ಎಂದರು.

ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಗುಣಮಟ್ಟದ ಮತ್ತು ಮೌಲ್ಯಾಧರಿತ ಶಿಕ್ಷಣ ನೀಡುವ ಉದ್ದೇಶದಿಂದಲೇ ಕರ್ನಾಟಕ ಪೊಲೀಸ್ ಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್ ವತಿಯಿಂದ ಕೊಂಡಜ್ಜಿಯಲ್ಲಿ ಪೊಲೀಸ್ ಪಬ್ಲಿಕ್ ಸ್ಕೂಲ್ ತೆರೆದಿದ್ದು, ಅದೇ ಮಾದರಿಯಲ್ಲಿಯೇ ದಾವಣಗೆರೆ ನಗರದಲ್ಲಿ ಚಿಣ್ಣರ ಅಂಗಳ ಶಾಲೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಮೂವತ್ತು ಮಕ್ಕಳು ಪ್ರವೇಶ ಪಡೆದಿದ್ದಾರೆ. ಜೂ. 3 ರಿಂದ ಅಧಿಕೃತವಾಗಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಿವೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಫ್ರೀ ಸ್ಕೂಲ್, ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲಾಗಿದೆ. ಮಕ್ಕಳಿಗೆ ಆಟಗಳ ಮೂಲಕ ಪಾಠವನ್ನು ಕಲಿಸಲಾಗುವುದು. ಮಕ್ಕಳಲ್ಲಿ ಕ್ರಿಯಾ ಶೀಲತೆ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.

ಇದಕ್ಕೂ ಮುನ್ನ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಕೆ. ತ್ಯಾಗರಾಜನ್ ಹಾಗೂ ಶ್ರೀಮತಿ ಸಂಗೀತಾ ತ್ಯಾಗರಾಜನ್ ಚಿಣ್ಣರ ಅಂಗಳ ಶಾಲೆಯನ್ನು ಉದ್ಘಾಟಿಸಿದರು.

ಇದೇ ವೇಳೆ ಸಂಗೀತಾ ತ್ಯಾಗರಾಜನ್ ಹಾಗೂ ಎಸ್ಪಿ ಉಮಾ ಪ್ರಶಾಂತ್ ಅವರನ್ನು ಗೌರವಿಸಲಾಯಿತು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಜಯ ಕುಮಾರ್ ಎಂ. ಸಂತೋಷ್, ಜಿ. ಮಂಜುನಾಥ್, ಅಧಿಕಾ ರಿಗಳಾದ ಸೋಮಶೇಖರ್, ಪ್ರಶಾಂತ್ ಸಿದ್ಧನಗೌಡ, ಯತೀಶ್,  ಪಲ್ಲವಿ ಪತ್ತಾರ್ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!