ಹರಿಹರ, ಡಿ. 30- ಲಿಂಗಾಯತ ಸಮುದಾಯಕ್ಕೆ 2ಡಿ ಮೀಸಲಾತಿ ಕಲ್ಪಿಸಿರುವ ಬಗ್ಗೆ ಸಮಾಜದ ಹಿರಿಯರು ಹಾಗೂ ಕಾನೂನು ತಜ್ಞರ ಜೊತೆ ಚರ್ಚಿಸಿದ ನಂತರ ಮುಂದಿನ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹರಿಹರ ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮಿಗಳು ಹೇಳಿದರು.
ನಗರದ ಹೊರವಲಯದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಜನವರಿ 14 ಮತ್ತು15 ರಂದು ಪೀಠದ ಆವರಣದಲ್ಲಿ ನಡೆಯುವ ಹರ ಜಾತ್ರಾ ಮಹೋತ್ಸವದ ಅಂಗವಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಿನ್ನೆ ಸಚಿವ ಸಂಪುಟದಲ್ಲಿ ಪಂಚಮಸಾಲಿ ಸಮಾಜದವರಿಗೆ ಯಾವ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಕಾಣಿಸಿಲ್ಲ. ಸದ್ಯಕ್ಕೆ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುವು ದಾಗಲೀ ಅಥವಾ ವಿರೋಧಿಸುವುದಾಗಲೀ ಮಾಡುವುದಿಲ್ಲ ಎಂದು ಸ್ವಾಮೀಜಿ ಹೇಳಿದರು.
ಇದರ ಜೊತೆಗೆ ಇ.ಡಬ್ಲ್ಯೂ.ಎಸ್. ಮೀಸಲಾತಿಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದ ನಂತರ ಸರ್ಕಾರದ ನಿರ್ಣಯದ ಬಗ್ಗೆ ಸ್ಪಷ್ಟವಾಗಿ ಉತ್ತರಿಸಲು ಸಾಧ್ಯವಾಗಲಿದೆ ಎಂದರು.
ಜನವರಿ 14 ಮತ್ತು 15 ರಂದು ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಸಮಾಜದ ಜನರಿಗೆ ಉಲ್ಲಾಸ, ಉತ್ಸಾಹ, ಮತ್ತು ಆತ್ಮವಿಶ್ವಾಸ ತುಂಬಲು ಅದ್ಧೂರಿಯಾಗಿ ಹರ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ಹೇಳಿದರು.
ದಿನಾಂಕ 14 ರಂದು ಬೆಳಗ್ಗೆ 9 ಗಂಟೆಗೆ ಹರಿಹರ ನಗರದ ಶ್ರೀ ಹರಿಹರೇಶ್ವರ ದೇವಸ್ಥಾನ ಮುಂಭಾಗದಿಂದ ಸಮಾಜದ ಮಹಿಳೆಯರೊಂದಿಗೆ ರೊಟ್ಟಿ ಬುತ್ತಿ ತಲೆಯಲ್ಲಿ ಹೊತ್ತ ಮೆರವಣಿಗೆ ಆಯೋಜಿಸಲಾಗಿದೆ. ನಂತರ 11 ಗಂಟೆಗೆ ಬೃಹತ್ ಜನ ಜಾಗೃತಿ ಸಮಾವೇಶ ಕಾರ್ಯಕ್ರಮ, ಮಧ್ಯಾಹ್ನ 3 ಗಂಟೆಗೆ ರೈತರ ಸಮಾವೇಶ, ನಡೆಯುತ್ತದೆ.
ದಿನಾಂಕ 15 ರಂದು ಬೆಳಗ್ಗೆ 11 ಗಂಟೆಗೆ ಯುವರತ್ನ ಸಮಾವೇಶ, ಮಧ್ಯಾಹ್ನ 3 ಗಂಟೆಗೆ 5 ನೇ ಪೀಠಾರೋಹಣ ಸಮಾರಂಭ ಮಾಡಲಾಗುತ್ತದೆ. ಈ ಸಮಯದಲ್ಲಿ ಈ ಬಾರಿ 2ಎ ಮೀಸಲಾತಿ ಜಾಗೃತಿ ಸಮಾವೇಶ ಮಾಡಿ ಸಮಾಜದ ಜನರಿಗೆ ಮೀಸಲಾತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದವರು ಹೇಳಿದರು.
ಹರ ಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಪ್ರಕಾಶ್ ಪಾಟೀಲ್ ವಕೀಲರು ಇವರನ್ನು ಆಯ್ಕೆ ಮಾಡಲಾಗದೆ. ಜೊತೆಗೆ 5 ತಂಡಗಳನ್ನು ರಚನೆ ಮಾಡಲಾಗಿದೆ. ಸಮಾರಂಭಕ್ಕೆ ಯಾವ ಯಾವ ಗಣ್ಯರು ಆಗಮಿಸುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮಾಜಿ ಅಧ್ಯಕ್ಷ ಬಾವಿ ಬೆಟ್ಟಪ್ಪ, ಬಸವರಾಜ್ ದಿಂಡೂರು, ಧರ್ಮದರ್ಶಿಗಳಾದ ಬಿ.ಸಿ. ಉಮಾಪತಿ, ಚಂದ್ರಶೇಖರ್ ಪೂಜಾರ್, ಪಿ.ಡಿ.ಶಿರೂರು, ಹರ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ್ ಪಾಟೀಲ್, ವಸಂತ ಉಲ್ಲತ್ತಿ, ಬಸವರಾಜ್ ಉಚ್ಚಂಗಿದುರ್ಗ, ಲೀಲಾ ನಾಗರಾಜ್ ಹರಪನಹಳ್ಳಿ, ಬಾತಿ ಈರಣ್ಣ, ಚಂದ್ರು ಪಾಟೀಲ್, ಪ್ರಕಾಶ್ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.