ಚನ್ನಗಿರಿ ತಾಲ್ಲೂಕಿನಲ್ಲಿನ ಪ್ರಚಾರದಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಭರವಸೆ
ಸೂಳೆಕೆರೆ ನೀರು ಖಾಲಿ ಮಾಡಿದವರ್ಯಾರು.?
ಏಷ್ಯಾಖಂಡದ ಎರಡನೇ ಅತಿದೊಡ್ಡ ಸೂಳೆಕೆರೆಯಲ್ಲಿ ಈಗ ನೀರು ಕಡಿಮೆಯಾಗಿದೆ. ಇಲ್ಲಿನ ನೀರು ಖಾಲಿ ಮಾಡಿದವರು ಯಾರು. ಭೀಮಸಮುದ್ರಕ್ಕೆ ಇಲ್ಲಿಂದ ನೀರು ಹೋಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆ ತುಂಬಿಸುವ ಯೋಜನೆ ಪೂರ್ಣಗೊಳಿಸಲು ಬಿಡುತ್ತಿಲ್ಲ. ಹಾಗಾಗಿ, ಇಂಥವರಿಗೆ ತಕ್ಕ ಪಾಠ ಕಲಿಸಿ ಎಂದು ಜಿ. ಬಿ. ವಿನಯ್ ಕುಮಾರ್ ಹೇಳಿದರು. ಈ ವೇಳೆ ಸ್ಥಳದಲ್ಲಿದ್ದವರು ಸೂಳೆಕೆರೆ ನೀರನ್ನು ಖಾಲಿ ಮಾಡಿದ್ದು ಜಿ.ಎಂ. ಸಿದ್ದೇಶ್ವರ ಎಂಬ ಘೋಷಣೆಗಳನ್ನು ಕೂಗಿದರು.
ಚನ್ನಗಿರಿ, ಏ. 30 – ತಾಲ್ಲೂಕಿನ ವಿವಿಧ ಗ್ರಾಮ ಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಅವರು ರೋಡ್ ಶೋ ನಡೆಸಿ, ಭರ್ಜರಿ ಪ್ರಚಾರ ನಡೆಸಿದರು.
ಕೆರೆಬಿಳಚಿ, ನಲ್ಲೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಚನ್ನಗಿರಿ ಪಟ್ಟಣದಲ್ಲಿ ಭಾರೀ ಸಂಖ್ಯೆಯಲ್ಲಿ ಯುವಕರು, ಹಿತೈಷಿಗಳು, ಅಭಿಮಾನಿಗಳು, ಬೆಂಬಲಿಗರು ಬೈಕ್ ರಾಲಿ ನಡೆಸಿ ದರು. ಬಳಿಕ ವಿನಯ್ ಕುಮಾರ್ ಅವರು ಪಟ್ಟಣ ದಲ್ಲಿ ಪವರ್ ಸ್ಟಾರ್ ದಿ. ಪುನೀತ್ ರಾಜಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಕೆರೆಬಿಳಚಿಯಲ್ಲಿ ರಾಲಿ : ಕೆರೆಬಿಳಚಿ ಗ್ರಾಮದಲ್ಲಿ ವಿನಯ್ ಕುಮಾರ್ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಮುಸ್ಲಿಂ ಸಮಾಜದವರು ವಿನಯ್ ಕುಮಾರ್ ಅವರಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಈ ವೇಳೆ ಗ್ರಾಮದ ಮುಖಂಡರಾದ ಇರ್ಫಾನ್, ಇಂತಿಯಾಜ್, ಮೊಹಮ್ಮದ್ ಆಲಿ, ಜಬೀರ್, ಫಯಾಜ್, ಮೊಹಮ್ಮದ್ ರಫೀಕ್, ಜಬಿ, ಶರೀಫ್, ಆಸೀಫ್ ಮತ್ತಿತರರು ಹಾಜರಿದ್ದರು.
ಚನ್ನಗಿರಿ ಪಟ್ಟಣದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ಚನ್ನಗಿರಿ ತಾಲ್ಲೂಕಿನಲ್ಲಿ ಅಡಿಕೆ ಬೆಳೆಗಾರರು ಹೆಚ್ಚಿದ್ದಾರೆ. ಇದುವರೆಗೆ ಅಡಿಕೆ ಸಂಬಂಧಿತ ಕೈಗಾರಿಕೆಗಳು ಯಾಕೆ ಬಂದಿಲ್ಲ. ಬೆಳೆಗಾರರ ಹಿತ ಕಾಪಾಡುವಂಥ ಕೆಲಸ ಆಗದಿರುವುದು ಬೇಸರದ ಸಂಗತಿ. ಅಡಿಕೆ ಮಾತ್ರವಲ್ಲ, ಚಾಕೋಲೇಟ್, ಪೇಂಟಿಂಗ್ ಸೇರಿದಂತೆ ಉಪ ಉತ್ಪನ್ನಗಳ ಕೈಗಾರಿಕೆಗಳು ಬಂದರೆ ಮತ್ತಷ್ಟು ಅಡಿಕೆಗೆ ಬೆಲೆ ಬರುತ್ತದೆ. ಈ ಬಗ್ಗೆ ಅಧಿಕಾರ ನಡೆಸಿದವರು ಯಾಕೆ ಯೋಚಿಸಿಲ್ಲ ಎಂದು ಪ್ರಶ್ನಿಸಿದರು.
ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಸೇರಿದಂತೆ, ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಬಹುದಿತ್ತು. ಭದ್ರಾ ನದಿ ನೀರು ಬಂದರೂ ಎಷ್ಟೋ ರೈತರಿಗೆ ಸಿಗುತ್ತಿಲ್ಲ. ಇದಕ್ಕೆ ಕಾರಣ ರಾಜಕೀಯ ಇಚ್ಛಾಶಕ್ತಿ. ಚನ್ನಗಿರಿ ಪಟ್ಟಣದಲ್ಲಿ ಸುಸಜ್ಜಿತವಾದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಇಲ್ಲ. ಉದ್ಯೋಗಾವಕಾಶ ಸೃಷ್ಟಿಸುವಂಥ ಕೈಗಾರಿಕೆಗಳು ಇಲ್ಲ. ಹೈಟೆಕ್ ಶಾಲೆಗಳಿಲ್ಲ, ಗುಣಮಟ್ಟದ ಶಿಕ್ಷಣ ಗ್ರಾಮೀಣ ಭಾಗದ ಮಕ್ಕಳಿಗೆ ಸಿಗುತ್ತಿಲ್ಲ. ಇಷ್ಟೆಲ್ಲಾ ಸಮಸ್ಯೆಗಳಿರುವ ಈ ಕ್ಷೇತ್ರದಲ್ಲಿ ನನಗೆ ಹೆಚ್ಚು ಮುನ್ನಡೆ ಬರುವಂತೆ ಆಶೀರ್ವದಿಸಿ ಎಂದು ಮನವಿ ಮಾಡಿದರು.
ವಿನಯ ನಡಿಗೆ ಹಳ್ಳಿ ಕಡೆಗೆ ಎಂಬಂತೆ ವಿನಯ ನಡಿಗೆ ಪಾರ್ಲಿಮೆಂಟ್ ಕಡೆಗೆ ಕಳುಹಿಸಿಕೊಡಿ. ಯುವಕರೇ ನನ್ನನ್ನು ಗೆಲ್ಲಿಸಬೇಕು. ಶೇ. 33 ರಷ್ಟು ಯುವಪೀಳಿಗೆಯ ಮತ ಇದೆ. ನನಗೆ ನೀಡುವ ಪ್ರತಿಯೊಂದು ಮತವೂ ಹಾಳಾಗುವುದಿಲ್ಲ. ಕ್ರಮ ಸಂಖ್ಯೆ 28 ಗ್ಯಾಸ್ ಸಿಲಿಂಡರ್ ಹಾಕುವ ಮತ ಅಭಿವೃದ್ಧಿಗೆ ನೀಡಿದಂತೆ ಎಂದು ಹೇಳಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ. ಶಾಸಕರಾಗಿದ್ದವರು ಏನೆಲ್ಲಾ ಮಾಡಬಹುದಿತ್ತು. ಯಾವ ನಾಯಕನನ್ನು ಬೆಳೆಸಲಿಲ್ಲ. ಬಡವರಿಗಾಗಿ ಒಳ್ಳೆಯ ವಿದ್ಯಾಸಂಸ್ಥೆ ಕೊಟ್ಟಿಲ್ಲ. ಚುನಾವಣೆಯಲ್ಲಿ ದುಡ್ಡು ಹಂಚಿ ಮತ ಪಡೆಯುತ್ತಾರೆ. ನಾವು ಸ್ವಾಭಿಮಾನಿಗಳಾಗಬೇಕು. ಈ ಎರಡೂ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿ ಕಡಿಮೆ. ಒಮ್ಮೆ ನನಗೆ ಅವಕಾಶ ಕೊಟ್ಟು ನೀಡಿ. ಯಾವ ರೀತಿ ಅಭಿವೃದ್ಧಿ ಮಾಡಬಹುದು ಎಂಬುದನ್ನು ನಾನು ಮಾಡಿ ತೋರಿಸುತ್ತೇನೆ ಎಂದು ಹೇಳಿದರು.
ಈ ವೇಳೆ ಚನ್ನಗಿರಿ ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಗೋಪಿ, ಚಂದ್ರಣ್ಣ, ಎ. ಸಿ. ಚಂದ್ರು, ಮಂಜು ನೀತಿಗೆರೆ, ಕೃಷ್ಣಪ್ಪ, ಕುಶಾಲ್ ಮತ್ತಿತರರು ಉಪಸ್ಥಿತರಿದ್ದರು.