ಧ.ರಾ.ಮ. ವಿಜ್ಞಾನ ಕಾಲೇಜಿನಲ್ಲಿ ವಿಚಾರ ಸಂಕಿರಣ ಉದ್ಘಾಟಿಸಿದ ಡಾ. ಎಂ.ಜಿ. ಈಶ್ವರಪ್ಪ
ದಾವಣಗೆರೆ, ಏ. 4- ವೈದ್ಯಕೀಯ ಕ್ಷೇತ್ರದಲ್ಲಿ ಸಸ್ಯಗಳ ಪಾತ್ರ ಮಹತ್ವದ್ದು ಎಂದು ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.
ನಗರದ ಧ.ರಾ.ಮ.ವಿಜ್ಞಾನ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ ಒಂದು ದಿನದ ಅಂತರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಜೀರಿಗೆ, ಸೋಪಿನ ಕಾಳು, ಮೆಂತೆ ಹೀಗೆ ಅನೇಕ ಸಮಸ್ಯೆಗಳನ್ನು ಮನೆ ಮದ್ದುಗಳಾಗಿ ಉಪಯೋಗಿಸುತ್ತೇವೆ. ಹಲವಾರು ಗಿಡ-ಮರಗಳು ಆರೋಗ್ಯದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.
ನಮ್ಮ ದೇಶದಲ್ಲಿ ಗಿಡ ಮರಗಳನ್ನು ಗೌರವದಿಂದ ಕಾಣುತ್ತೇವೆ. ಇಂದಿಗೂ ಆಲ, ಅರಳಿ ಮರಗಳ ಪ್ರದಕ್ಷಿಣಿ ಹಾಕುತ್ತಾರೆ. ಆದರೆ ಮರ ಸುತ್ತುವ ಜನರು ಮರಗಳಿಗೆ ನೀರು ಕೊಡದಿರುವುದು ಅವರ ಕೆಟ್ಟ ಗುಣ ಎಂದರು.
ಪಾರಂಪರಿಕ ವೈದ್ಯ ಪದ್ಧತಿ ಇಂದು ಮರೆಯಾ ಗುತ್ತಿದೆ. ಇದಕ್ಕೆ ಕಾರಣ ಹಿರಿಯರು. ಹಿಂದೆಲ್ಲಾ ಎಂಥದ್ದೇ ಅನಾರೋಗ್ಯವಿದ್ದರೂ ಬೆಟ್ಟ-ಗುಡ್ಡಗಳಿಗೆ ಹೋಗಿ, ನಾನಾ ವಿಧದ ಗಿಡಮೂಲಿಕೆ ಕಿತ್ತು ತಂದು, ಔಷಧ ಮಾಡುತ್ತಿದ್ದರು. ಆದರೆ, ಹಾಗೆ ಔಷಧ ನೀಡುತ್ತಿದ್ದವರು ಗಿಡಮೂಲಿಕೆಗಳ ಗುಟ್ಟನ್ನು ಬೇರಾರಿಗೂ ಬಿಟ್ಟುಕೊಡಲಿಲ್ಲ. ಗುಟ್ಟು ರಟ್ಟಾದರೆ ಔಷಧ ಪರಿಣಾಮ ಬೀರುವುದಿಲ್ಲ ಎಂಬ ಮೂಢ ನಂಬಿಕೆ ಯೂ ಇದಕ್ಕೆ ಕಾರಣವಿರಬಹುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಅರುಣ ಎಸ್. ಕಾರಟ್ ಮಾತನಾಡುತ್ತಾ, ನಮ್ಮ ಸುತ್ತಮುತ್ತಲಿನ ಗಿಡಮರಗಳು ಸಜೀವಿಗಳಾಗಿದ್ದು, ಇವುಗಳ ಅಣು ಅಣುವಿನಲ್ಲಿಯೂ ಶಕ್ತಿ ಇರುತ್ತದೆ ಎಂದರು.
ಗಿಡ-ಮರಗಳು ಭೂಮಿ ಮೇಲಿನ ಮತ್ತೊಂದು ಜೀವಿಗಳಿಗೆ ಪ್ರೇರಕಗಳಾಗಿರುತ್ತವೆ ಎಂದರು.
ಕಾಲೇಜು ಪ್ರಾಂಶುಪಾಲರಾದ ಡಾ.ವನಜಾ.ಆರ್. ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ನಮ್ಮ ದಿನನಿತ್ಯ ಜೀವ ನದಲ್ಲಿ ಸಸ್ಯಗಳ ಮಹತ್ವವನ್ನು ತಿಳಿದುಕೊಳ್ಳಲು ಇದೊಂದು ಮಹತ್ವ ಪೂರ್ಣವಾದ ವೇದಿಕೆಯಾಗಿದೆ ಎಂದರು.
ವಿದ್ಯಾರ್ಥಿನಿ ಅರ್ಪಿತಾ.ಎಸ್. ಪ್ರಾರ್ಥಿಸಿದರು. ಡಾ.ವಸಂತ ನಾಯ್ಕ್ ಟಿ. ವಂದಿಸಿದರು. ಡಾ.ಸೌಮ್ಯ ಹೆಚ್.ಬಿ.ವಿ. ನಿರೂಪಿಸಿದರು. ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.