ದಾವಣಗೆರೆ, ಏ. 1- ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಾಮಾಜಿಕವಾಗಿ ಮತಾಧಾರಿತ ರಾಜಕಾರಣ ಮಾಡುತ್ತಾ ದೇಶದ ಜನರ ನಡುವೆ ದ್ವೇಷ ಬಿತ್ತಿ, ಭಯದ ವಾತಾವರಣ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿ, `ಮೋದಿ ಹಠಾವೋ, ದೇಶ ಬಚಾವೋ’ ಘೋಷ ವಾಕ್ಯದೊಂದಿಗೆ ಭಾರತ್ ಕಮ್ಯುನಿಸ್ಟ್ ಪಕ್ಷ ಮತ್ತು ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ನಗರದ ಗಾಂಧಿ ವೃತ್ತದಿಂದ ಶಿವಯೋಗಿ ಮಂದಿರದ ಆವರಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ಸಿಪಿಐ ಮುಖಂಡರು, ದೇಶದ ಜನರನ್ನು ಮತೀಯ ಅಲ್ಪಸಂಖ್ಯಾತರ ವಿರುದ್ಧ ಎತ್ತಿ ಕಟ್ಟಿ. ಜನಾಂಗೀಯ ಶ್ರೇಷ್ಠತೆಯನ್ನು ಫ್ಯಾಸಿಸ್ಟ್ ನೀತಿ ಅನುಸರಿಸುತ್ತಿರುವ ಬಿಜೆಪಿ ಸರ್ಕಾರ ದೇಶದ ಬಹುತ್ವ ನಾಶ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
ಮನುಸ್ಮೃತಿಯ ಆಧಾರದಂತೆ ದೇಶವನ್ನು ಆಳುವ ಅಧಿಕಾರವನ್ನು ಕ್ಷತ್ರಿಯ ವರ್ಣದಂತೆ ನಡೆಸುತ್ತದೆ. ಈ ಮನುಸ್ಮೃತಿ ಆಧಾರಿತ ಸಮಾಜದಲ್ಲಿ ಬೌದ್ಧಿಕವಾಗಿ ಆರ್‌ಎಸ್‌ಎಸ್ ಬ್ರಾಹ್ಮಣ ವರ್ಣ ಕೆಲಸ ಮಾಡತೊಡಗಿದೆ. ಹೀಗೆ ನಮ್ಮ ಮತ ನಿರಪೇಕ್ಷ. ಸಮಾಜವಾದಿ ಸಂವಿಧಾನ ಅಪಾಯದಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನುಸ್ಮೃತಿಯನ್ನು ಆಧರಿಸಿ, ಶ್ರೇಣೀ ಕೃತ ಸಮಾಜವನ್ನು ಗಟ್ಟಿಗೊಳಿಸಲು ಆರ್‌ಎಸ್‌ಎಸ್, ಬಿಜೆಪಿ ಪರಿವಾರ ಈಗಾಗಲೇ ಕೆಲಸ ಆರಂಭಿಸಿದೆ.ಅದಕ್ಕಾಗಿ ಬಹುಸಂಖ್ಯೆಯ ರೈತ, ಕಾರ್ಮಿಕರನ್ನು ಕಾರ್ಪೊರೇಟ್ ವ್ಯಾಪಾರಿಗಳ ಗುಲಾಮಗಿರಿಗೆ ತಳ್ಳುವ ಸಲುವಾಗಿ ರೈತ-ಕಾರ್ಮಿಕರ ಸ್ವಾವಲಂಬಿ ಬದುಕನ್ನು ನಾಶ ಮಾಡಲು ರೈತ-ಕಾರ್ಮಿಕ ವರ್ಗಕ್ಕೆ ಮಾರಕವಾದ ಕಾನೂನುಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.
ಕೇಂದ್ರದ ಮೋದಿ ಸರ್ಕಾರ ಒಂದು ದೇಶ, ಒಂದು ಆಡಳಿತ ಎಂಬ ನೀತಿಯನ್ನು ಜಾರಿ ಮಾಡುತ್ತಾ ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳನ್ನು ದಮನ ಮಾಡುತ್ತಾ, ತನ್ನ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತಿದೆ. ಬಿಜೆಪಿ ಮತ್ತು ಪರಿವಾರ ರಾಜಕೀಯ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಕಿಡಿಕಾರಿದರು.
ಆರ್‌ಎಸ್‌ಎಸ್ ವಿಚಾರಧಾರೆಯ ಆಣತಿಯಂತೆ ಅಧಿಕಾರ ನಡೆಸುತ್ತಿರುವ ಬಿಜೆಪಿ, ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನವನ್ನು ಒಪ್ಪುತ್ತಿಲ್ಲ. ಬದಲಾಗಿ ದಲಿತರ, ಹಿಂದುಳಿದ ಜಾತಿಗಳ, ಮಹಿಳೆಯರ ವಿರುದ್ಧವಾದ ಮನುಸ್ಮೃತಿಯನ್ನು ಭಾರತದ ಸಂವಿಧಾನವ ನ್ನಾಗಿಸಲು ಅದು ಸಂಚು ರೂಪಿಸುತ್ತಿದೆ ಎಂದರು.
ಅಲ್ಲದೇ ಆರ್‌ಎಸ್‌ಎಸ್ ಮುಖವಾಣಿಯಂತೆ ಬಿಜೆಪಿ ಮನುಸ್ಮೃತಿಯ ಮೌಲ್ಯಗಳನ್ನು ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಈ ದೇಶದ ಮೇಲೆ ಹೇರುವ ಪ್ರಕ್ರಿಯೆಯಲ್ಲಿ ತೊಡಗಿದೆ ಎಂದು ತಿಳಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಸಿಪಿಐ ಮುಖಂಡ ರಾದ ಹೆಚ್.ಜಿ. ಉಮೇಶ್ ಆವರಗೆರೆ, ಚಂದ್ರು ಆವರಗೆರೆ, ವಾಸು ಆವರಗೆರೆ, ವಿ.ಲಕ್ಷ್ಮಣ್, ಆನಂದ ರಾಜ್, ಟಿ.ಎಸ್. ನಾಗರಾಜ್, ಕಾಂಗ್ರೆಸ್ ಮುಖಂಡರಾದ ಕೆ.ಜಿ. ಶಿವಕುಮಾರ್, ಎಸ್.ಮಲ್ಲಿಕಾರ್ಜುನ್, ಶುಭ ಮಂಗಳ, ಎಎಪಿ ಶಿವಕುಮಾರಪ್ಪ, ರವೀಂದ್ರ, ಆದಿಲ್ ಖಾನ್, ಅರುಣ್ ಕುಮಾರ್ ಮತ್ತಿತರರಿದ್ದರು.