ಶ್ರೀ ವೀರಮಾಹೇಶ್ವರ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆಯಲ್ಲಿ ಉಜ್ಜಯಿನಿ ಜಗದ್ಗುರುಗಳ ಎಚ್ಚರಿಕೆ
ದಾವಣಗೆರೆ, ಮಾ. 31- ಧರ್ಮ, ಸಂಸ್ಕಾರ, ಜಂಗಮತ್ವವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ವ್ಯಕ್ತಿಗಳಾಗದೇ ಸಮಾಜ, ಧರ್ಮದ ವಿಚಾರ ಬಂದಾಗ ಒಂದಾಗದಿದ್ದರೆ ಮುಂದಿನ ದಿನಗಳಲ್ಲಿ ಅಪಾಯದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ಎಚ್ಚರಿಸಿದರು.
ನಗರದ ಕೆ.ಬಿ. ಬಡಾವಣೆ 10 ನೇ ಕ್ರಾಸ್‌ನಲ್ಲಿ ನಿರ್ಮಾಣಗೊಂಡಿರುವ ಶ್ರೀ ವೀರಮಾಹೇಶ್ವರ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ, ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ವಿರೋಧಿ ರಹಿತ, ಯಾರಿಗೂ ಕೆಡಕು ಬಯಸದವ ನಿಜವಾದ ವೀರಶೈವ. ಆದರೆ, ಸಮಾಜದಲ್ಲಿ ಪರಸ್ಪರ ಟೀಕೆ, ಕಾಲೆಳೆಯುವ ಕೆಲಸಗಳು ಜಾಸ್ತಿ ನಡೆಯುತ್ತಿವೆ.ಇನ್ನೊಬ್ಬರನ್ನು ತುಳಿದು ಬದುಕುವವನು ಯಾವತ್ತೂ ನಾಯಕನಾಗಿ ಇರಲು ಸಾಧ್ಯವಿಲ್ಲ. ತನ್ಮಂತೆ ತನ್ನಷ್ಟೇ ಎತ್ತರಕ್ಕೆ ಹತ್ತು ಜನರನ್ನು ಬೆಳೆಸುವವನು ನಾಯಕನಾಗಲು ಸಾಧ್ಯ ಎಂದು ಪ್ರತಿಪಾದಿಸಿದರು.
ಜಗತ್ತಿಗೆ ಬುದ್ದಿ ಹೇಳುವ ಜಂಗಮರು ಮತ್ತೊಬ್ಬರ ಹತ್ತಿರ ತಮ್ಮ ಸಮಸ್ಯೆಯ ಬಗ್ಗೆ ಪಂಚಾಯತಿಗೆ ಹೋಗುವುದು ವಿಪರ್ಯಾಸದ ಸಂಗತಿ. ಯಾರೂ ಕೂಡ ಜಂಗಮತ್ವ ಮರೆಯಬಾರದು. ಜಂಗಮರಲ್ಲಿ ಯಾವುದೇ ತಾರತಮ್ಯ ಇರಬಾರದು. ಗುರುವಿಗೆ ನೀಡುವ ಗೌರವವನ್ನು ಲಿಂಗ ಮತ್ತು ಜಂಗಮರಿಗೆ ನೀಡಬೇಕೆಂದರು.
ಶ್ರಾವಣ ಮಾಸ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಭಕ್ತರು ತಮ್ಮ ಜಂಗಮರನ್ನು ಆಹ್ವಾನಿಸಿ, ಗದ್ದುಗೆ ಹಾಕಿ ಕುಳ್ಳಿರಿಸಿ ಗೌರವಿಸಿ, ಪ್ರಸಾದ ನೀಡಿ, ಜೊತೆಗೆ ದಕ್ಷಿಣೆ ನೀಡಿ ಕಳುಹಿಸುತ್ತಿದ್ದರು. ಕಾಲಕ್ರಮೇಣ ಅಂತಹ ಪದ್ಧತಿ, ಸಂಸ್ಕೃತಿ, ಪರಂಪರೆ ಮರೆಯಾಗುತ್ತಿದೆ. ಇದಕ್ಕೆ ನಮ್ಮಲ್ಲಿರುವ ಲೋಪವೇನು ಎಂಬುದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕು. ಸಾಂಗತ್ಯ, ಸಂಪರ್ಕ, ಸದ್ಗುಣಗಳು ಅಗತ್ಯವಾಗಿ ಬೇಕಾಗಿವೆ. ಇಂದು ಹಿರಿತನಕ್ಕೂ ಮಾನ್ಯತೆ ಇಲ್ಲದಂತಾಗಿದೆ. ಕಿರಿತನ ಕೂಡ ಬದುಕು ಕಟ್ಟಿಕೊಳ್ಳುತ್ತಿಲ್ಲ ಎಂದು ವಿಷಾದಿಸಿದರು.
ಜಂಗಮ ಸಮಾಜದಲ್ಲಿ ಒಗ್ಗಟ್ಟು, ಆಚಾರ, ವಿಚಾರ, ಸಂಸ್ಕಾರದ ಕೊರತೆ ಕಂಡು ಬರುತ್ತಿದೆ. ಅಹಂಕಾರ, ಅಹಂ ಭಾವ ಹೆಚ್ಚಾಗಿದ್ದು, ಸಂಸ್ಕಾರ ಹೀನ ಬದುಕು ಸಾಗುತ್ತಿದೆ. ಮಕ್ಕಳಿಗೂ ದೀಕ್ಷಾ ಸಂಸ್ಕಾರ ನೀಡುವ ಅಗತ್ಯವಿದೆ ಎಂದು ಹೇಳಿದರು. ಯಾರಿಗೂ ಕೆಡುಕು ಬಯಸದೇ ಸಮಾಜ ವನ್ನು ಮಕ್ಕಳ ಭವಿಷ್ಯತ್ತಿಗಾಗಿ ಉತ್ತಮ ಬದುಕು ಕಟ್ಟಿಕೊಳ್ಳ ಬೇಕು. ಅಹಂಕಾರ ಬಿಟ್ಟು ಸಮಾಜದ ಉದ್ಧಾರಕ್ಕಾಗಿ ಚಿಂತನೆ ಮಾಡಬೇಕೆಂದು ಸಲಹೆ ನೀಡಿದರು.
ಸೊಸೈಟಿ ಅಧ್ಯಕ್ಷ ತ್ಯಾವಣಗಿ ವೀರಭದ್ರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸದ ಜಿ.ಎಂ. ಸಿದ್ದೇಶ್ವರ ನೂತನ ಕಟ್ಟಡಕ್ಕೆ ಚಾಲನೆ ನೀಡಿದರು. ಮಾಜಿ ಸಚಿವ ಮುರುಗೇಶ್ ನಿರಾಣಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ ಎ.ಹೆಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸೊಸೈಟಿ ಉಪಾಧ್ಯಕ್ಷ ಪಂಚಾಕ್ಷರಯ್ಯ, ಎನ್.ಎಂ.ವೀರೇಂದ್ರ, ಆರ್.ಎಂ. ವೀರಯ್ಯ, ವೃಷಭೇಂದ್ರಸ್ವಾಮಿ, ಬಿ.ಎಂ. ರವಿ, ಸುಮನ ವಾಗೀಶ್ ಕಟಗಿಹಳ್ಳಿ ಮಠ, ಸಿ. ಚನ್ನಬಸವ ಶರ್ಮ, ಸಿ.ಎಂ. ತಾರಾ, ಎಸ್. ರೇಖಾ, ಕಾರ್ಯದರ್ಶಿ ನಾಗರಾಜಯ್ಯ ಐನಹಳ್ಳಿಮಠ ಮತ್ತಿತರರು ಉಪಸ್ಥಿತರಿದ್ದರು. ಮಲ್ಲಯ್ಯಸ್ವಾಮಿ ನಿರೂಪಿಸಿದರು. ನಿರ್ದೇಶಕ ಎಲ್.ಎಂ.ಆರ್. ಬಸವರಾಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.